
ಅಭಿನಯ ಹಾಗೂ ಕಂಚಿನ ಕಂಠದ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಿರುವ ನಟ ವಸಿಷ್ಠ ಸಿಂಹ, ಬಹುಭಾಷಾ ನಟಿ ತಮನ್ನಾ ಜೊತೆ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ.
ಗಾಯಕನಾಗಿ ತೆಲುಗು ಚಿತ್ರಕ್ಕೆ ಪರಿಚಿತರಾಗಿದ್ದ ವಸಿಷ್ಠ ‘ಓದೆಲ ರೈಲ್ವೆ ಸ್ಟೇಷನ್’ ಸಿನಿಮಾ ಮೂಲಕ ನಾಯಕನಾಗಿ ತೆಲುಗು ಪ್ರೇಕ್ಷಕರಿಗೆ ಪರಿಚಿತವಾಗಿದ್ದರು. 2022ರಲ್ಲಿ ‘ಆಹಾ’ ಒಟಿಟಿಯಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾಗೆ ಉತ್ತಮವಾದ ಪ್ರತಿಕ್ರಿಯೆ ದೊರೆತಿತ್ತು. ಅಶೋಕ್ ತೇಜ ಆ್ಯಕ್ಷನ್ ಕಟ್ ಹೇಳಿದ್ದ ಈ ಚಿತ್ರದಲ್ಲಿ ವಸಿಷ್ಠ ವಿಭಿನ್ನ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಇದೇ ಸಿನಿಮಾದ ಎರಡನೇ ಭಾಗ ಸೆಟ್ಟೇರಿದ್ದು, ಇತ್ತೀಚೆಗೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ ಮುಹೂರ್ತ ನಡೆದಿದೆ. ‘ಮಿಲ್ಕಿ ಬ್ಯೂಟಿ’ ತಮನ್ನಾ ಹಾಗೂ ವಸಿಷ್ಠ ಸಿಂಹ ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ವಸಿಷ್ಠ ಅವರ ಪತ್ನಿ, ನಟಿ ಹರಿಪ್ರಿಯಾ ಅವರೂ ಈ ಸಿನಿಮಾದಲ್ಲಿ ಇದ್ದಾರೆ.
ನೈಜ ಘಟನೆ ಆಧಾರಿತ ‘ಓದೆಲ ರೈಲ್ವೆ ಸ್ಟೇಷನ್’ ಮೊದಲ ಭಾಗದಲ್ಲಿ ನಟಿ ಹೆಭಾ ಪಟೇಲ್ ಜೊತೆ ವಸಿಷ್ಠ ಅಭಿನಯಿಸಿದ್ದರು. ಎರಡನೇ ಭಾಗದಲ್ಲೂ ಹೆಭಾ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎಂದಿದೆ ಚಿತ್ರತಂಡ. ಡಿ. ಮಧು ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಸೌಂದರ್ ರಾಜನ್ ಎಸ್. ಛಾಯಾಚಿತ್ರಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.