ADVERTISEMENT

‘ವೇಷಧಾರಿ’ ಜನವರಿ 3ಕ್ಕೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 11:15 IST
Last Updated 28 ಡಿಸೆಂಬರ್ 2019, 11:15 IST
ವೇಷಧಾರಿ ಚಿತ್ರದ ನಾಯಕ ಆರ್ಯನ್ ಚಿತ್ರದ ಬಗ್ಗೆ ಮಾಹಿತಿ ನೀಡಿದರು
ವೇಷಧಾರಿ ಚಿತ್ರದ ನಾಯಕ ಆರ್ಯನ್ ಚಿತ್ರದ ಬಗ್ಗೆ ಮಾಹಿತಿ ನೀಡಿದರು   

ಹುಬ್ಬಳ್ಳಿ: ನವ ನಾಯಕ ನಟ ಆರ್ಯನ್‌ ನಟಿಸಿರುವ ‘ವೇಷಧಾರಿ’ ಸಿನಿಮಾ ಜನವರಿ 3ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಆರ್ಯನ್, 2020ನೇ ಸಾಲಿನ ಮೊದಲ ಚಿತ್ರವಾಗಿ ‘ವೇಷಧಾರಿ’ ಬಿಡುಗಡೆಯಾಗುತ್ತಿದೆ. ಮೊದಲ ಬಾರಿಗೆ ನಾಯಕನಾಗಿ ನಟಿಸಿದ್ದು, ಚಿತ್ರ ತುಂಬ ಚೆನ್ನಾಗಿ ಮೂಡಿ ಬಂದಿದೆ. ಮೊದಲ ಚಿತ್ರವೇ ಕಾದಂಬರಿ ಆಧಾರಿತ ಚಿತ್ರವಾಗಿರುವುದು ಇನ್ನೊಂದು ವಿಶೇಷತೆಯಾಗಿದೆ ಎಂದರು.

ಕಾವಿತೊಟ್ಟ ಜನರು ಸರ್ವಸಂಗ ಪರಿತ್ಯಾಗಿಗಳೆಂದು ಹೇಳಿಕೊಳ್ಳುತ್ತಾರೆ. ವಾಸ್ತವದಲ್ಲಿ ಅರಿಷಡ್ವರ್ಗಗಳನ್ನು ಮೀರಲು ಸಾಧ್ಯವೇ ಎಂಬ ಪ್ರಶ್ನೆಯೇ ಈ ಚಿತ್ರ ತಿರುಳಾಗಿದೆ. ಚಿತ್ರದ ನಿರ್ದೇಶಕ ಶಿವಾನಂದ ಭೂಶಿ ಅವರು ತಮ್ಮದೇ ‘ವೇಷಧಾರಿ’ ಕಾದಂಬರಿಯನ್ನು ಚಲನಚಿತ್ರವಾಗಿಸಿದ್ದಾರೆ. ಚಿತ್ರ ನೋಡುವ ಪ್ರತಿಯೊಬ್ಬರಿಗೂ ಇದು ನಮ್ಮದೇ ಕಥೆ ಅನಿಸುತ್ತದೆ. ಉತ್ತರ ಕರ್ನಾಟಕ ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಣ ನಡೆದಿದೆ ಎಂದು ಮಾಹಿತಿ ನೀಡಿದರು.

ADVERTISEMENT

ರಾಜ್ಯದಾದ್ಯಂತ ಕನಿಷ್ಠ 70 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ವಿ. ಮನೋಹರ್ ಅವರ ಸಂಗೀತ ನಿರ್ದೇಶನ ಮಾಡಿದ್ದು, ಆರು ಹಾಡುಗಳಿವೆ. ವೈಜನಾಥ ಬಿರಾದರ್, ಮೈಕಲ್ ಮಧು, ಮೋಹನ್ ಜುನೇಜಾ ಸೇರಿದಂತೆ ಹಾಸ್ಯಕಲಾವಿದರ ದಂಡೇ ಇದೆ ಎಂದು ಹೇಳಿದರು.

ನಾಯಕಿ ಸೋನಂ ರೈ ಮಾತನಾಡಿ, ನಾಯಕ ನಟಿಯಾಗಿ ಅಭಿನಯಿಸುತ್ತಿರುವ ಆರನೇ ಚಿತ್ರ ಇದಾಗಿದೆ. ಚಿತ್ರದ ನಿರ್ದೇಶಕರು ಹಾಗೂ ಇಡೀ ಚಿತ್ರ ತಂಡದ ಸಹಕಾರದಿಂದಾಗಿ ಉತ್ತಮವಾಗಿ ಅಭಿನಯಿಸಲು ಸಾಧ್ಯವಾಯಿತು. ಜನರಿಗೆ ಈ ಚಿತ್ರ ಇಷ್ಟವಾಗಲಿದೆ ಎಂದರು. ಶ್ರೀ ಸಾಯಿಭಗವಾನ್ ಕಂಬೈನ್ಸ್ ಬ್ಯಾನರ್‌ನಲ್ಲಿ ಅನೀಲ್ ಎಚ್‌ ಅಂಬಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.