ಚಿತ್ರ ನಟ ಬ್ಯಾಂಕ್ ಜನಾರ್ದನ್
ಪ್ರಜಾವಾಣಿ ಚಿತ್ರ
ಬೆಂಗಳೂರು: ಕಿಡ್ನಿ ವೈಫಲ್ಯದಿಂದ ನಟ ಬ್ಯಾಂಕ್ ಜನಾರ್ದನ್ (76) ಸೋಮವಾರ ಬೆಳಗಿನ ಜಾವ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾದರು. ಅವರ ಪೀಣ್ಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಿತು. ಮೃತರಿಗೆ ನಾಲ್ವರು ಮಕ್ಕಳು ಇದ್ದಾರೆ.
ಆಸ್ಪತ್ರೆಯಿಂದ ಪಾರ್ಥಿವ ಶರೀರವನ್ನು ಮನೆಗೆ ತಂದು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಚಿತ್ರರಂಗದ ಗಣ್ಯರು ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ರವೀಂದ್ರ ಕಲಾಕ್ಷೇತ್ರದಲ್ಲೂ ಕೆಲಕಾಲ ಸಾರ್ವಜನಿಕರ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇಡಲಾಗಿತ್ತು.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಮೂಲದ ಅವರು ಜಯಲಕ್ಷ್ಮಿ ಬ್ಯಾಂಕ್‌ನಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿದ್ದರು. ವೃತ್ತಿಯ ಜೊತೆ ಪ್ರವೃತ್ತಿಯಾಗಿ ರಂಗಭೂಮಿಯ ನಂಟೂ ಹೊಂದಿದ್ದರು. ವಿಷ್ಣುವರ್ಧನ್ ನಟನೆಯ, ಜೋ ಸೈಮನ್ ನಿರ್ದೇಶನದ ‘ಊರಿಗೆ ಉಪಕಾರಿ’ ಸಿನಿಮಾ ಮೂಲಕ ಚಿತ್ರರಂಗದ ಜೊತೆ ನಂಟು ಬೆಳೆಸಿಕೊಂಡರು. ಕಾಶಿನಾಥ್ ಅವರ ‘ಅಜಗಜಾಂತರ’ ಸಿನಿಮಾ ದೊಡ್ಡ ತಿರುವು ನೀಡಿತು. ‘ತರ್‍ಲೆನನ್ಮಗ’ ಸಿನಿಮಾ ಬಳಿಕ ನಟ ಜಗ್ಗೇಶ್ ಹಾಗೂ ಜನಾರ್ಧನ ಕಾಂಬಿನೇಷನ್‌ನಲ್ಲಿ ಹಲವು ಸಿನಿಮಾಗಳು ಸಾಲು ಸಾಲು ತೆರೆಕಂಡವು. ಉಪೇಂದ್ರ ನಿರ್ದೇಶನದ ‘ಶ್’ ಸಿನಿಮಾದಲ್ಲಿ ಅವರು ನಿರ್ವಹಿಸಿದ ಸಬ್ ಇನ್‌ಸ್ಪೆಕ್ಟರ್ ಪಾತ್ರ ಜನರ ಮನಸ್ಸಿನಲ್ಲಿ ಇನ್ನೂ ಅಚ್ಚೊತ್ತಿದೆ. ‘ಕೌರವ’, ‘ತಾಯವ್ವ’, ‘ಬೊಂಬಾಟ್ ಹುಡುಗ’, ‘ಸೂಪರ್ ನನ್ಮಗ’, ‘ಆಟ ಬೊಂಬಾಟ’, ‘ಗೆಲುವಿನ ಸರದಾರ’, ‘ಅಂಗೈಯಲ್ಲಿ ಅಪ್ಸರೆ’ ಮುಂತಾದ ಕನ್ನಡ ಸಿನಿಮಾಗಳು ಸೇರಿಂತೆ ತೆಲುಗು, ತಮಿಳು ಹಾಗೂ ತುಳು ಚಿತ್ರಗಳಲ್ಲೂ ಬಣ್ಣಹಚ್ಚಿದ್ದಾರೆ.
ಅವರು ನಟಿಸಿರುವ ಸಿನಿಮಾಗಳ ಸಂಖ್ಯೆ 800ಕ್ಕೂ ಅಧಿಕ. ರಾಜ್‌ಕುಮಾರ್, ವಿಷ್ಣುವರ್ಧನ್, ಅನಂತನಾಗ್, ದೇವರಾಜ್ ಸೇರಿದಂತೆ ಪ್ರಮುಖ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ.
ಅದ್ಭುತವಾದ ಕಲಾವಿದ ಸರಳ ಜೀವಿ. ನನ್ನ ಜೀವನದ ಮೊದಲ ಹೆಜ್ಜೆಯಲ್ಲಿ ಜೊತೆಗಿದ್ದರು. ಅವರಿದ್ದರೆ ಚಿತ್ರೀಕರಣದ ವಾತಾವರಣವೇ ಭಿನ್ನವಾಗಿರುತ್ತಿತ್ತು. ‘ತರ್‍ಲೆ ನನ್ಮಗ’ ‘ಶ್’ ಚಿತ್ರಗಳಲ್ಲಿ ತಮ್ಮ ಅದ್ಭುತ ಅಭಿನಯದಿಂದ ನನ್ನ ಸಿನಿ ಪಯಣದಲ್ಲಿ ಯಶಸ್ವಿ ಹೆಜ್ಜೆ ಇಡಲು ಕಾರಣಕರ್ತರಾದವರು.–ಉಪೇಂದ್ರ ನಟ
ಜನಾರ್ದನ್ ನಿಧನಕ್ಕೆ ನಟ ಜಗ್ಗೇಶ್ ಕಂಬನಿ ಮಿಡಿದಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, 'ಆತ್ಮೀಯ ಗೆಳೆಯ ಜನಾರ್ದನ್ ಹೋಗಿ ಬಾ. ನಾವಿಬ್ಬರು ಪಾತ್ರಕ್ಕಾಗಿ ಹಸಿದು ಅಲೆದು ಪಡೆದು ಗೆದ್ದವರು. ನಾನು ನಿನ್ನ ಚಿತ್ರದಲ್ಲಿ ಕರೆಯುತ್ತಿದ್ದ 'ಬಾಂಡ್ಲಿ ಫಾದರ್' ಪದ ನಿನ್ನ ಒಡನಾಟ ನೆನೆದು ಭಾವುಕನಾದೆ. ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.