ADVERTISEMENT

ಖ್ಯಾತ ನಿರ್ದೇಶಕ ಕೆ.ವಿ. ರಾಜು ನಿಧನ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2021, 17:19 IST
Last Updated 24 ಡಿಸೆಂಬರ್ 2021, 17:19 IST
ಕೆ.ವಿ. ರಾಜು
ಕೆ.ವಿ. ರಾಜು   

ಬೆಂಗಳೂರು: ‘ಬೆಳ್ಳಿ ಕಾಲುಂಗುರ’, ‘ಯುದ್ಧಕಾಂಡ’ ಮುಂತಾದ ಹಿಟ್‌ ಸಿನಿಮಾಗಳನ್ನು ನಿರ್ದೇಶಿಸಿದ್ದ ಚಂದನವನದ ಖ್ಯಾತ ನಿರ್ದೇಶಕ ಕೆ.ವಿ.ರಾಜು (67) ಶುಕ್ರವಾರ ನಿಧನರಾಗಿದ್ದಾರೆ.

ಮೃತರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ರಾಜಾಜಿನಗರದಲ್ಲಿರುವ ನಿವಾಸದಲ್ಲಿ ಶುಕ್ರವಾರ ಬೆಳಗ್ಗೆ ಕೊನೆಯುಸಿರೆಳೆದರು. ಮಧ್ಯಾಹ್ನದವರೆಗೆ ಪಾರ್ಥಿವ ಶರೀರವನ್ನು ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಸಂಜೆ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಸಂಸ್ಕಾರ ನಡೆಯಿತು.

ಖ್ಯಾತ ನಿರ್ದೇಶಕರಾಗಿದ್ದ ಕೆ.ವಿ. ಜಯರಾಮ್‌ ಅವರ ಸಹೋದರರಾಗಿದ್ದ ಕೆ.ವಿ.ರಾಜು, ಜಯರಾಮ್‌ ಅವರ ಸಿನಿಮಾಗಳ ಮೂಲಕವೇ ಚಿತ್ರರಂಗ ಪ್ರವೇಶಿಸಿದರು. 1982ರಲ್ಲಿ ತೆರೆಕಂಡ ‘ಬಾಡದ ಹೂ’ ಹಾಗೂ 1984ರಲ್ಲಿ ಬಿಡುಗಡೆಯಾದ ‘ಒಲವೇ ಬದುಕು’ ಚಿತ್ರದಲ್ಲಿ ಸಹ ನಿರ್ದೇಶಕನಾಗಿ ಕಾರ್ಯನಿರ್ವಹಿಸಿದ್ದ ರಾಜು ಅವರು, 50ಕ್ಕೂ ಹೆಚ್ಚು ಚಿತ್ರಗಳಿಗೆ ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದಾರೆ.

ADVERTISEMENT

1989ರಲ್ಲಿ ರಾಜು ಅವರು ನಿರ್ದೇಶಿಸಿದ್ದ, ಅಂಬರೀಷ್‌ ನಟನೆಯ ‘ಇಂದ್ರಜಿತ್‌’ ಸಿನಿಮಾ ಹಿಟ್‌ ಆಗಿತ್ತು. ಇದನ್ನು 1991ರಲ್ಲಿ ಬಾಲಿವುಡ್‌ಗೆ ಕೊಂಡೊಯ್ದು, ಅಮಿತಾಬ್‌ ಬಚ್ಚನ್‌, ಜಯಪ್ರದಾ ತಾರಾಗಣದಲ್ಲಿ ‘ಇಂದ್ರಜಿತ್‌’ ಎಂಬ ಹೆಸರಿನಲ್ಲೇ ರಾಜು ಅವರು ನಿರ್ದೇಶಿಸಿದ್ದರು.1996ರಲ್ಲಿ ನಟ ದೇವರಾಜ್‌ ಸಿನಿ ಬದುಕಿಗೆ ತಿರುವು ನೀಡಿದ ‘ಹುಲಿಯಾ’ ಸಿನಿಮಾ ರಾಜು ಅವರ ನಿರ್ದೇಶನಾ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ. ಖಡಕ್‌ ನಿರ್ದೇಶಕ ಎಂದೇ ಗುರುತಿಸಿಕೊಂಡಿದ್ದ ಅವರು ‘ಸುಂದರ ಕಾಂಡ’, ‘ಕದನ’. ‘ಪೊಲೀಸ್‌ ಲಾಕಪ್‌’, ‘ಬೊಂಬಾಟ್‌ ಹುಡುಗ’, ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದರು.

2017ರಲ್ಲಿ ‘ಬಿ.ಆರ್‌. ಪಂತುಲು ಪ್ರಶಸ್ತಿ’ಯನ್ನು ರಾಜು ಅವರು ನಿರಾಕರಿಸಿದ್ದು ದೊಡ್ಡ ಸುದ್ದಿಯಾಗಿತ್ತು. ‘ಶಾಲು-ಸನ್ಮಾನಗಳು ಅಂದರೆ ಅಲರ್ಜಿ ನನಗೆ. ಅದಕ್ಕಾಗಿ ತಪಸ್ಸು ಮಾಡುವವರ ದಂಡೇ ಇದೆ’ ಎಂದು ಹೇಳಿದ್ದ ರಾಜು, ಪ್ರಶಸ್ತಿಯನ್ನು ನಿರಾಕರಿಸಿದ್ದರು.

*
ನನಗೆ ಸಿನಿಮಾ ಜಗತ್ತಿಗೆ ಪರಿಚಯಿಸಿದ ಗುರುಗಳು ಕೆ.ವಿ.ಜಯರಾಮ್. ಕೆ.ವಿ.ರಾಜು ಅವರು ನನ್ನ ಎರಡನೇ ಗುರುಗಳು. ಅವರು ಕಾಲವಾದರು ಎಂದಾಗ ದುಃಖಿತನಾದೆ.
-ಜಗ್ಗೇಶ್‌, ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.