
ಬಹುತೇಕ ಹೊಸಬರಿಂದಲೇ ಕೂಡಿರುವ ‘ವಿಕಲ್ಪ’ ಚಿತ್ರ ಜ.30ಕ್ಕೆ ತೆರೆಗೆ ಬರಲಿದೆ. ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಬಿಡುಗಡೆಗೊಂಡಿದೆ. ಸೈಕಾಲಜಿಕಲ್, ಥ್ರಿಲ್ಲರ್ ಕಥಾಹಂದರದ ಚಿತ್ರಕ್ಕೆ ಪೃಥ್ವಿರಾಜ್ ಪಾಟೀಲ್ ಆ್ಯಕ್ಷನ್ ಕಟ್ ಹೇಳುವುದರ ಜತೆಗೆ ನಾಯಕನಾಗಿ ನಟಿಸಿದ್ದಾರೆ.
ನಿರ್ದೇಶಕ ಜಯತೀರ್ಥ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿ, ‘ಕನ್ನಡ ಚಿತ್ರರಂಗಕ್ಕೆ ಹೊಸಪ್ರತಿಭೆಗಳು ಬರುತ್ತಿರುವುದು ನಿಜಕ್ಕೂ ಖುಷಿಯ ವಿಷಯ. ಹೊಸಬರ ಮೂಲಕ ಹೊಸ ಹೊಸ ಕಲ್ಪನೆ, ಆಲೋಚನೆಗಳು ಸಿನಿಮಾವಾಗಿ ತೆರೆಮೇಲೆ ಅನಾವರಣವಾಗುತ್ತದೆ. ಹೊಸಬರು ಯಾವಾಗಲೂ ಚಿತ್ರರಂಗದ ಜೀವಂತಿಕೆಯನ್ನು ಹಿಡಿದಿಡುತ್ತಾರೆ. ಈ ಸಿನಿಮಾದ ಕಥಾಹಂದರ, ಮೇಕಿಂಗ್, ಟೀಸರ್, ಹಾಡುಗಳು ಎಲ್ಲವೂ ಚಿತ್ರದ ಬಗ್ಗೆ ಒಂದಷ್ಟು ಭರವಸೆ ಮೂಡಿಸುವಂತಿದೆ. ಚಿತ್ರ ಬಿಡುಗಡೆಯಾಗಿ ಯಶಸ್ವಿಯಾಗಲಿ’ ಎಂದು ಹಾರೈಸಿದರು.
ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್(ಪಿಟಿಎಸ್‌ಡಿ) ಎಂಬ ಮಾನಸಿಕ ವ್ಯಾಧಿಯ ಎಳೆಯನ್ನು ಆಧರಿಸಿದ ಕಥೆ ಎಂದು ಚಿತ್ರತಂಡ ಹೇಳಿದೆ. ಶ್ರೀಮತಿ ಇಂದಿರಾ ಶಿವಸ್ವಾಮಿ ಬಂಡವಾಳ ಹೂಡಿದ್ದಾರೆ. ನಾಗಶ್ರೀ ಹೆಬ್ಬಾರ್, ಹರಿಣಿ ಶ್ರೀಕಾಂತ್, ಸಂಧ್ಯಾ ವಿನಾಯಕ್, ಗಣಪತಿ ವಡ್ಡಿನಗದ್ದೆ ಮುಂತಾದವರು ಚಿತ್ರದಲ್ಲಿದ್ದಾರೆ. ಚಿತ್ರಕ್ಕೆ ಸಂವತ್ಸರ ಸಂಗೀತ, ಅಭಿರಾಮ್ ಗೌಡ ಛಾಯಾಚಿತ್ರಗ್ರಹಣ, ಸುರೇಶ್ ಆರ್ಮುಗಂ ಸಂಕಲನವಿದೆ.