ADVERTISEMENT

ಅಡುಗೆಯಿಂದ ನಿರ್ದೇಶನದತ್ತ ‘ವಿಕಾಸ’ ಯಾತ್ರೆ

Vikas khanna chef to cannes film Festival

ಮಂಜುಶ್ರೀ ಎಂ.ಕಡಕೋಳ
Published 26 ಮೇ 2019, 19:30 IST
Last Updated 26 ಮೇ 2019, 19:30 IST
ವಿಕಾಸ್ ಖನ್ನಾ
ವಿಕಾಸ್ ಖನ್ನಾ   

72ನೇ ಕಾನ್ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಬಾಲಿವುಡ್ ತಾರೆಯರಾದ ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಸೋನಂ ಕಪೂರ್, ಕಂಗನಾ ಸೇರಿದಂತೆ ಹಲವರು ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದರು. ಈ ಎಲ್ಲಾ ತಾರೆಯರ ನಡುವೆ ಸದ್ದಿಲ್ಲದೇ, ಸರಳ ಉಡುಪಿನಲ್ಲಿ ಮಾಸ್ಟರ್ ಷೆಫ್ ವಿಕಾಸ್ ಖನ್ನಾ ಹೆಜ್ಜೆ ಹಾಕಿದ್ದು ಬಹುತೇಕರಿಗೆ ಗೊತ್ತೇ ಆಗಲಿಲ್ಲ.

ಅರೆ ಷೆಫ್‌ಗೂ ಸಿನಿಮೋತ್ಸವಕ್ಕೂ ಎತ್ತಣಿಂದೆತ್ತಣ ಸಂಬಂಧವಯ್ಯಾ ಅನ್ನುವ ಪ್ರಶ್ನೆ ಸಹಜವೇ. ಆದರೆ, ವಿಕಾಸ್ ಹೋದದ್ದು ಅಲ್ಲಿ ತಾವು ನಿರ್ದೇಶಿಸಿದ ಪ್ರಥಮ ಚಿತ್ರ ‘ದಿ ಲಾಸ್ಟ್ ಕಲರ್’ ಪ್ರದರ್ಶಿಸಲು! ಈ ಸಿನಿಮಾ ವಿಶೇಷ ಪ್ರದರ್ಶನದ ಅದೃಷ್ಟಕ್ಕೆ ಭಾಜನವಾಗಿದ್ದಲ್ಲದೇ ವಿಕಾಸ್, ಒಂದು ಸಂವಾದ ಕಾರ್ಯಕ್ರಮದಲ್ಲಿ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಜೊತೆಗೆ ವೇದಿಕೆ ಹಂಚಿಕೊಂಡರು.

ಯಾರೀ ಖನ್ನಾ?

ADVERTISEMENT

ಇವರು ರಾಜೇಶ್ ಖನ್ನಾ ಸಂಬಂಧಿಯಂತೂ ಖಂಡಿತ ಅಲ್ಲ. ಅಮೃತಸರದಲ್ಲಿ ಹುಟ್ಟಿ ಬೆಳೆದ ವಿಕಾಸ್‌ಗೆ ಬಾಲ್ಯ ನಿಜಕ್ಕೂ ಸುಖಕರವಾಗಿರಲಿಲ್ಲ. ಹುಟ್ಟುತ್ತಲೇ ಕಾಲೊಂದು ಊನವಾಗಿತ್ತು. 13 ವರ್ಷಗಳ ತನಕ ಆ ಕಾಲಿಗೆ ಭೂಮ್ತಾಯಿಯ ಸ್ಪರ್ಶ ಭಾಗ್ಯವಿರಲಿಲ್ಲ. ತೀವ್ರ ಸಂಕೋಚ ಮತ್ತು ಕೀಳರಿಮೆಯಿಂದ ಬಳಲುತ್ತಿದ್ದ ವಿಕಾಸ್, ಶಾಲೆಗೆ ಹೋಗಿದ್ದು ಕಡಿಮೆಯೇ. ಅಮ್ಮನ ಮುದ್ದುಮಗನಾಗಿ ಬೆಳೆದ ಅವರಿಗೆ ಅಜ್ಜಿಯ ಕೈತ್ತುತ್ತಿನ ರುಚಿಯೇ ಷೆಫ್ ಆಗಲು ಪ್ರೇರಣೆ ನೀಡಿತು. ಅಜ್ಜಿ–ಅಮ್ಮ ಪ್ರೀತಿ–ವಾತ್ಸಲ್ಯ ಬೆರೆಸಿ ಮಾಡುತ್ತಿದ್ದ ರುಚಿಕರ ಅಡುಗೆಗಳು ವಿಕಾಸ್‌ಗೆ 19ರ ಹರೆಯದಲ್ಲೇ ಸಣ್ಣದೊಂದು ಸ್ವಂತ ಹೋಟೆಲ್ ಆರಂಭಿಸಲು ಸ್ಫೂರ್ತಿ. ನಿಶ್ಚಿತಾರ್ಥ, ಮದುವೆ, ನಾಮಕರಣ ಕಾರ್ಯಗಳಿಗೆ ಕೇಟರಿಂಗ್ ಮಾಡುತ್ತಿದ್ದ ವಿಕಾಸ್ ಹೋಟೆಲ್ ಉದ್ಯಮವನ್ನೇ ವೃತ್ತಿಯನ್ನಾಗಿಸಿಕೊಳ್ಳಬೇಕೆಂಬ ಹಂಬಲದಿಂದ ತಲುಪಿದ್ದು ಕರ್ನಾಟಕ ಮಣಿಪಾಲಕ್ಕೆ.

ಉಡುಪಿಯಲ್ಲಿದ್ದುಕೊಂಡು ಮಣಿಪಾಲದಲ್ಲಿ ಹೋಟೆಲ್ ಮ್ಯಾನೇಜ್‌ ಮೆಂಟ್ ಕೋರ್ಸ್ ಕಲಿತ ವಿಕಾಸ್‌ಗೆ ಇಂಗ್ಲಿಷ್ ಇರಲಿ, ಹಿಂದಿ ಕೂಡಾ ಸರಿಯಾಗಿ ಮಾತನಾಡಲು ಬರುತ್ತಿರಲಿಲ್ಲವಂತೆ. ಅಡುಗೆ ಕಲಿಯಲು ಯಾವ ಭಾಷೆ? ಕಷ್ಟಪಟ್ಟು ಪದವಿ ಗಳಿಸಿ ನ್ಯೂಯಾರ್ಕ್‌ನತ್ತ ಹಾರಿದ ವಿಕಾಸ್ ನೋಡನೋಡುತ್ತಿದ್ದಂತೆ ಅಲ್ಲಿಯೇ ಸ್ವಂತ ಹೋಟೆಲ್ ತೆರೆಯುವಷ್ಟು ಬೆಳೆದರು. ಆಮೇಲಿನದು ಇತಿಹಾಸ. ಸೆಲೆಬ್ರಿಟಿ ಷೆಫ್ ಆಗಿ ರೂಪುಗೊಂಡ ವಿಕಾಸ್ ಅವರ ಅಡುಗೆ ಕಾರ್ಯಕ್ರಮಗಳು ಗಂಡಸರು, ಹೆಂಗಸರು ಎನ್ನದೇ ಪುಟ್ಟ ಮಕ್ಕಳೂ ಮುಗಿಬಿದ್ದು ನೋಡುವಷ್ಟು ಪ್ರಸಿದ್ಧ. ಅಮೆರಿಕದ ಪ್ರಸಿದ್ಧ ಟಿವಿ ಷೋ ‘ಕಿಚನ್ ನೈಟ್‌ ಮೇರ್ಸ್‌’ನಲ್ಲೂ ತಮ್ಮ ಅಡುಗೆ ಕಲೆ ಪ್ರದರ್ಶಿಸಿದ್ದಾರೆ. ಬಾಲಿವುಡ್‌ನ ಸೆಲೆಬ್ರಿಟಿಗಳಷ್ಟೇ ಅಲ್ಲ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಕೂಡಾ ವಿಕಾಸ್ ಅವರ ಕೈರುಚಿ ಸವಿದಿದ್ದಾರೆ. ವಿವಿಧ ಚಾನೆಲ್‌ಗಳಲ್ಲಿ ಅಡುಗೆ ಸಂಬಂಧಿ ನೂರಾರು ಷೋಗಳನ್ನು ನೀಡಿರುವ ವಿಕಾಸ್ ಒಳ್ಳೆಯ ಬರಹಗಾರ ಕೂಡ. 30ಕ್ಕೂ ಹೆಚ್ಚು ಕೃತಿಗಳನ್ನು ಬರೆದಿರುವ ವಿಕಾಸ್, ಸಾಕ್ಷ್ಯಚಿತ್ರ ಮತ್ತು ಸಿನಿಮಾ ನಿರ್ದೇಶನದಲ್ಲೂ ಆಸಕ್ತಿ ಹೊಂದಿದವರು.

ನಿರ್ದೇಶನದ ಆಸಕ್ತಿಯ ಫಲವಾಗಿಯೇ ‘ದಿ ಲಾಸ್ಟ್ ಕಲರ್’ ಸಿನಿಮಾ ತಯಾರಾಗಿದ್ದು. ವೃಂದಾವನದ ವಿಧವೆಯೊಬ್ಬಳು ಹೋಳಿ ಆಡಬೇಕೆಂಬ ಆಸೆ ಇಟ್ಟುಕೊಂಡೇ ಸಾವನ್ನಪ್ಪುವ ಮನಕಲಕುವ ಕಥಾ ಹಂದರದ ‘ದಿ ಲಾಸ್ಟ್ ಕಲರ್’ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ದೊಂಬರ ಹುಡುಗಿಯೊಬ್ಬಳು ವಿಧವೆಯೊಬ್ಬಳ ಆಸೆಯನ್ನು ಪೂರೈಸಲು ಪಡುವ ಕಷ್ಟಗಳು ಮತ್ತು ಅನಾಥ ವಿಧವೆಯರ ಬದುಕನ್ನು ಕಟ್ಟಿಕೊಡುವ ಈ ಚಿತ್ರದಲ್ಲಿ ನಟಿ ನೀನಾ ಗುಪ್ತ ವಿಧವೆ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರವೀಗ ಕಾನ್ ಚಿತ್ರೋತ್ಸವದಲ್ಲಿ ವಿಮರ್ಶಕರ ಗಮನ ಸೆಳೆದಿದೆ.

ಷೆಫ್ ವೃತ್ತಿಯೇ ಜೀವನ ಸಂಗಾತಿ

‘ನೀವೇಕೆ ಇನ್ನೂ ಮದುವೆಯಾಗಿಲ್ಲ’ ಎಂದು ಪ್ರಶ್ನಿಸಿದರೆ ‘ಷೆಫ್ ವೃತ್ತಿಗೆ ಬಹಳ ಇಷ್ಟಪಟ್ಟು ಬಂದೆ. ನನ್ನ ಮೊದಲ ಪ್ರೀತಿ ಅಡುಗೆ. ಅದರ ಸ್ಥಾನವನ್ನು ಯಾರೂ ತುಂಬಲಾಗದು. ನಾನು ಮದುವೆಯಾದರೆ ನನ್ನ ಷೆಫ್ ವೃತ್ತಿಗೆ ಬದ್ಧನಾಗಿರಲು ಸಾಧ್ಯವಿಲ್ಲ ಅನಿಸ್ತು ಅದಕ್ಕೆ ಮದುವೆಯಾಗಲಿಲ್ಲ’ ಅನ್ನೋದು ವಿಕಾಸ ವಾದ.

ಆರೋಗ್ಯದ ಗುಟ್ಟು

ನಿತ್ಯವೂ ಯೋಗ ಮಾಡುವ ವಿಕಾಸ್‌. ಮನಸನ್ನು ತಾಜಾ ಆಗಿಟ್ಟುಕೊಳ್ಳಲು ಸಂಗೀತದ ಮೊರೆ ಹೋಗುತ್ತಾರಂತೆ. ದುಶ್ಚಟಗಳಿಂದ ವಿಕಾಸ್ ಸದಾ ಅಂತರ ಕಾಪಾಡಿಕೊಂಡಿದ್ದಾರೆ. ಬೆಳಿಗ್ಗೆ ಮೊಟ್ಟೆಯ ಬಿಳಿ ಭಾಗ, ಮುಸ್ಲಿ ಸೇವಿಸುವ ಅವರು ರಾತ್ರಿಯೂಟದಲ್ಲಿ ಅನ್ನ ಮತ್ತು ದಾಲ್‌ ತಿನ್ನುತ್ತಾರಂತೆ. ರಾತ್ರಿಯೂಟ ಬೇಗನೇ ಮಾಡಬೇಕೆನ್ನುವುದು ವಿಕಾಸ್ ಆರೋಗ್ಯದ ಗುಟ್ಟಂತೆ.

ಮಣಿಪಾಲ–ಉಡುಪಿಯ ನಂಟು

ನಾಚಿಕೆ ಸ್ವಭಾವದವರಾದ ವಿಕಾಸ್ ಖನ್ನಾ ಅವರಿಗೆ ಆತ್ಮವಿಶ್ವಾಸ ನೀಡಿದ್ದು ಮಣಿಪಾಲ. ಮಾತನಾಡಲು ಸಂಕೋಚ ಪಡುತ್ತಿದ್ದ ಅವರ ಸ್ವಭಾವವನ್ನು ಬದಲಿಸಿದ ಕೀರ್ತಿಯೂ ಈ ಊರಿಗೆ ಸೇರುತ್ತದೆ. ದಕ್ಷಿಣ ಭಾರತೀಯ ಅದರಲ್ಲೂ ಉಡುಪಿ ಶೈಲಿಯ ಆಹಾರವೆಂದರೆ ವಿಕಾಸ್‌ಗೆ ಅಚ್ಚುಮೆಚ್ಚು.ಉಡುಪಿಯಲ್ಲಿದ್ದಾಗ ಅಲ್ಪಸ್ವಲ್ಪ ಕನ್ನಡವನ್ನೂ ಕಲಿತಿರುವ ವಿಕಾಸ್ ಕನ್ನಡ ಭಜನೆಯನ್ನೂ ಹಾಡಬಲ್ಲರು!

‘ಅಡುಗೆ ಕಲೆ’ ನಿರ್ಲಕ್ಷಿತವಾಗಿರುವ ಕ್ಷೇತ್ರ. ಇದನ್ನು ಮನಗಂಡೇ ವಿಕಾಸ್ 2018ರಲ್ಲಿ ಮಣಿಪಾಲದಲ್ಲಿ ಪಾಕಶಾಲೆಗೆ ಸಂಬಂಧಿಸಿದಂತೆ ಮ್ಯೂಸಿಯಂ ಅನ್ನು ತೆರೆದಿದ್ದಾರೆ.ಮುಂದಿನ ಪೀಳಿಗೆಗೆ ಪುರಾತನ ಪಾತ್ರೆಗಳ ಪರಂಪರೆ ಪರಿಚಯಿಸುವ ಉದ್ದೇಶದ ಈ ಮ್ಯೂಸಿಯಂ ವಿಶ್ವದಲ್ಲೇ ಮೊದಲಿರಬಹುದು ಅನ್ನೋದು ವಿಕಾಸ್ ಅಭಿಪ್ರಾಯ.

ವಿವೇಕ್ ಖನ್ನಾ ಬಗ್ಗೆ ಒಂದಿಷ್ಟು

ಹುಟ್ಟಿದ್ದು: ಪಂಜಾಬ್‌ನ ಅಮೃತಸರ, ನವೆಂಬರ್ 14, 1971

ಹವ್ಯಾಸ: ಸಂಗೀತ ಕೇಳುವುದು, ಯೋಗ

ಇಷ್ಟದ ಆಹಾರ: ಆಲೂ ಮೇಥಿ, ಕ್ರೀಮಿ ಚಿಕನ್ ಟಿಕ್ಕಾ ಮಸಾಲ

ಇಷ್ಟದ ಹೋಟೆಲ್: ಗುಜರಾತಿನ ಸಾಸುಮಾ

ಇಷ್ಟದ ಶೆಫ್: ಗೋರ್ಡನ್ ರ‍್ಯಾಮ್ಸೆ

ಬರೆದಿರುವ ಪುಸ್ತಕಗಳು: 30ಕ್ಕೂ ಹೆಚ್ಚು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.