ADVERTISEMENT

ಚಿತ್ರ ದಿಗ್ಗಜರನ್ನು ಒಂದಾಗಿಸಿದ ‘ವಿಕ್ರಾಂತ್‌ ರೋಣ’

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 13:20 IST
Last Updated 22 ಜೂನ್ 2022, 13:20 IST
ವಿಕ್ರಾಂತ್‌ ರೋಣ ಹಿಂದಿ ಆವೃತ್ತಿ ವಿತರಣೆ ಕುರಿತ ಪೋಸ್ಟರ್‌
ವಿಕ್ರಾಂತ್‌ ರೋಣ ಹಿಂದಿ ಆವೃತ್ತಿ ವಿತರಣೆ ಕುರಿತ ಪೋಸ್ಟರ್‌   

‘ನನ್ನ ಮಗನ ಜಾಗದಲ್ಲಿ ಇರುವವನಿಗೆ ಭಯ ಹೇಗೆ ಬರಬೇಕು? ಅದೆಲ್ಲಾ ಏನೂ ಇಲ್ಲ. ವಿಕ್ರಾಂತ್‌ ರೋಣದಲ್ಲಿ ಬರೆದ ಸಂಭಾಷಣೆಯ ಪ್ರಕಾರ ಸುದೀಪ್‌ಗೆ ಭಯ ಅನ್ನುವುದು ಇಲ್ಲವೇ ಇಲ್ಲ. ಖಂಡಿತವಾಗಿಯೂ ಈ ಚಿತ್ರ ಗೆಲ್ಲುತ್ತದೆ...’

– ಹೀಗೆಂದು ಸುದೀಪ್‌ ಬೆನ್ನು ತಟ್ಟಿ ಆತ್ಮವಿಶ್ವಾಸ ತುಂಬಿದವರು ವಿ. ರವಿಚಂದ್ರ.ಇದು ವಿಕ್ರಾಂತ್‌ ರೋಣ ಚಿತ್ರದ ಟೀಸರ್‌ ಬಿಡುಗಡೆ ಸಮಾರಂಭದಲ್ಲಿ ಅವರ ನುಡಿ. ಇನ್ನೂ ವಿಶೇಷವೆಂದರೆ ಹಿರಿಯರಿಂದ ಹಿಡಿದು ಇಂದಿನ ಯುವ ತಲೆಮಾರಿನವರೆಗೂ ಎಲ್ಲ ಚಿತ್ರ ನಟ, ನಿರ್ದೇಶಕರು ಹಾಜರಿದ್ದು ವಿಕ್ರಾಂತ್‌ ರೋಣನಿಗೆ ಶುಭ ಕೋರಿದರು.

ರವಿಚಂದ್ರ, ಶಿವರಾಜ್‌ ಕುಮಾರ್‌, ರಮೇಶ್‌ ಅರವಿಂದ್‌, ನಂದ ಕಿಶೋರ್‌, ಯೋಗರಾಜ್‌ ಭಟ್‌, ಇಂದ್ರಜಿತ್‌ ಲಂಕೇಶ್‌,ರಕ್ಷಿತ್‌ ಶೆಟ್ಟಿ, ರಿಷಬ್‌ ಶೆಟ್ಟಿ, ರಾಜ್‌ ಬಿ. ಶೆಟ್ಟಿ, ಅರ್ಜುನ್‌ ಜನ್ಯ, ಡಾಲಿ ಧನಂಜಯ ಸಹಿತ ಅನೇಕ ದಿಗ್ಗಜರ ಸಮಾಗಮ ಈ ಸಮಾರಂಭದಲ್ಲಿನಡೆಯಿತು. ಈ ಮೂಲಕ ಎಲ್ಲ ಗೋಡೆಗಳನ್ನು ದಾಟಿ ನಾವು ಒಂದಾಗಿಯೇ ಇದ್ದೇವೆ ಎಂಬ ಸಂದೇಶ ಸಾರಿತು.

ADVERTISEMENT

‘ನನಗೆ ಸುಲಭಕ್ಕೆ ಅಳು ಬರುವುದಿಲ್ಲ. ಅತ್ಯುತ್ತಮ ಚಿತ್ರ ನೀಡುವ ಮೂಲಕ ನನ್ನನ್ನು ಅಳುವಂತೆ ಮಾಡಿ’ ಎಂದು ರವಿಚಂದ್ರ ಸವಾಲೆಸೆದರು.

ಚಿತ್ರರಂಗದ ಎಲ್ಲ ಪ್ರಮುಖರು ಸೇರಿರುವುದನ್ನು ಕಂಡು ಖುಷಿಯಾದ ರವಿಚಂದ್ರ, ‘ಇದು ಒಳ್ಳೆಯ ವಾತಾವರಣ. ಇದೊಂದು ಒಗ್ಗಟ್ಟು, ಅತ್ಯುತ್ತಮ ಚಿತ್ರಗಳನ್ನು ಕೊಡಬೇಕು ಎಂಬ ಕನಸು ಕಾಣುವ ಬಹಳಷ್ಟು ಜನ ನಮ್ಮೊಡನೆ ಇದ್ದಾರೆ. ಎಲ್ಲರೂ ದೊಡ್ಡದಾಗಿ ಬೆಳೆಯಬೇಕು. ಚಿತ್ರಮಂದಿರಗಳಿಗೆ ಜನ ಬರುವುದಿಲ್ಲ ಅನ್ನುವವರಿದ್ದರು. ಈಗ ಜನ ಬರುತ್ತಿದ್ದಾರೆ. ಚಿತ್ರಮಂದಿರಗಳೇ ಸಾಲುತ್ತಿಲ್ಲ’ ಎಂದು ಖುಷಿ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಗಡಂಗ್‌ ರಕ್ಕಮ್ಮನ್ ಹುಕ್‌ ಸ್ಟೆಪ್‌ ಹಾಡಿಗೆ ಎಲ್ಲ ದಿಗ್ಗಜರೂ ಹೆಜ್ಜೆ ಹಾಕಿದರು. ಗಡಂಗ್‌ ರಕ್ಕಮ್ಮನಾಗಿ ಕಾಣಿಸಿಕೊಂಡಿದ್ದ ಜಾಕ್ವೆಲಿನ್‌ ಅವರೂ ಹಾಜರಿದ್ದು ಸಣ್ಣದಾಗಿ ಹೆಜ್ಜೆ ಹಾಕಿದ್ದು ಇನ್ನೊಂದು ಆಕರ್ಷಣೆ.

3 ಡಿಯಲ್ಲಿ ಮೂಡಿಬಂದ ಟೀಸರ್‌ ಹೊಸ ವಿಶ್ವಾಸ ಮೂಡಿಸಿದೆ. ಸಂಭಾಷಣೆ, ಕಥೆಯ ಗಾಂಭೀರ್ಯ, ಫ್ಯಾಂಟಸಿ, ಸಸ್ಪೆನ್ಸ್‌ ಮತ್ತು ಲಘು ಸನ್ನಿವೇಶಗಳನ್ನೂ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದೆ. ಇಲ್ಲಿ ಕಿಚ್ಚ ಸುದೀಪ್‌ ಪೊಲೀಸ್‌ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಸುಮಾರು ಮೂರು ವರ್ಷಗಳ ಪರಿಶ್ರಮ, ಕೋವಿಡ್‌ ಕಾಲದಲ್ಲಿಯೂ ಚಿತ್ರೀಕರಣ ನಡೆಸಿದ್ದು, ತಂಡದ, ತಂತ್ರಜ್ಞರ ಪರಿಶ್ರಮವನ್ನು ಸುದೀಪ್‌ ಮತ್ತು ನಿರ್ಮಾಪಕ ಜಾಕ್‌ ಮಂಜು, ನಿರ್ದೇಶಕ ಅನೂಪ್‌ ಭಂಡಾರಿ ಕೊಂಡಾಡಿದರು.

ನಟ ಸುದೀಪ್‌ ಮಾತನಾಡಿ, ‘ಈ ಕಥೆಯನ್ನು ಕೇಳಲು ಮೂರು ದಿನ ತೆಗೆದುಕೊಂಡೆ. ಈ ಕಥೆಯನ್ನು ಸಲಹೆ ಮಾಡಿದವರು ನನ್ನ ಪತ್ನಿ ಪ್ರಿಯಾ. ಈಗ ಮೂಡಿಬಂದಿರುವುದು ನಿರ್ದೇಶಕರ ಕಲ್ಪನೆ ಮತ್ತು ತಂತ್ರಜ್ಞರು ಮಾಡಿದ ದೃಶ್ಯ ಸಾಕಾರ’ ಎಂದು ವಿನೀತರಾಗಿ ನುಡಿದರು.

ನಾಳೆ (ಜೂನ್‌ 23) ಚಿತ್ರದ ಟೀಸರ್‌ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಚಿತ್ರ ಜುಲೈ 28ಕ್ಕೆ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.