ADVERTISEMENT

ದಿ–ವಿಲನ್: ವಾರದ ಕಲೆಕ್ಷನ್‌ ₹50 ಕೋಟಿ, 2ನೇ ವಾರದ್ದು ₹20 ಕೋಟಿಗೂ ಹೆಚ್ಚು

ವಿಲನ್‌ ಕಲೆಕ್ಷನ್: ಸಾರ್ವಕಾಲಿಕ ದಾಖಲೆ?

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 10:02 IST
Last Updated 30 ಅಕ್ಟೋಬರ್ 2018, 10:02 IST
   

ಶಿವಣ್ಣ – ಸುದೀಪ್‌ ಅಭಿನಯದ ‘ದಿ ವಿಲನ್‌’ ಚಿತ್ರ ಬಿಡುಗಡೆಯಾದ ನಂತರ ಇಡೀ ಚಿತ್ರತಂಡ ಸುದ್ದಿಗೋಷ್ಠಿ ಕರೆದು, ಗೆಲುವಿನ ಖುಷಿಯನ್ನು ಹಂಚಿಕೊಂಡಿತ್ತು. ಅಂದು ನಡೆದ ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ಸಿ.ಆರ್. ಮನೋಹರ್ ಅವರು ‘ಈ ಚಿತ್ರ ಮಾಡಿರುವ ಕಲೆಕ್ಷನ್ ಬಹುಶಃ ಮೂವತ್ತು ಕೋಟಿ ರೂಪಾಯಿ’ ಎಂದು ಹೇಳಿದ್ದರು.

ಅವರು ಅಂದು ನೀಡಿದ್ದು ಅಕ್ಟೋಬರ್‌ 21ರವರೆಗಿನ ಕಲೆಕ್ಷನ್ನಿನ ಮಾಹಿತಿ. ಈಗ ಇನ್ನಷ್ಟು ಹೊಸ ಮಾಹಿತಿಗಳು ಹೊರಬರುತ್ತಿವೆ. ‘ಮೊದಲ ವಾರದಲ್ಲಿ ವಿಲನ್‌ ಚಿತ್ರ ನಂಬಲು ಅಸಾಧ್ಯ ಎನ್ನುವಂತಹ ಕಲೆಕ್ಷನ್‌ ಮಾಡಿದೆ. ಕನ್ನಡ ಸಿನಿಮಾ ಉದ್ಯಮದ ಮಟ್ಟಿಗೆ ವಿಲನ್‌ ಚಿತ್ರದ ಕಲೆಕ್ಷನ್‌ ಸಾರ್ವಕಾಲಿಕ ದಾಖಲೆ’ ಎನ್ನುತ್ತಿವೆ ಮೂಲಗಳು.

ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ – ಧಾರವಾಡಗಳಂತಹ ಪ್ರಮುಖ ನಗರಗಳನ್ನು ಹೊರತುಪಡಿಸಿದರೆ, ಸಣ್ಣ ಪಟ್ಟಣಗಳಲ್ಲಿ ‘ಒಳ್ಳೆಯ ಸಿನಿಮಾ ಬಂದರೆ ಮಾತ್ರ ಬಾಗಿಲು ತೆರೆಯುವ’ ಚಿತ್ರಮಂದಿರಗಳು ಕೆಲವು ಇವೆಯಂತೆ. ‘ದಿ ವಿಲನ್‌’ ಚಿತ್ರ ಅಂತಹ ಚಿತ್ರಮಂದಿರಗಳ ಬಾಗಿಲು ತೆರೆಸುವಲ್ಲಿ ಯಶಸ್ಸು ಕಂಡಿದೆ ಎನ್ನುತ್ತಿವೆ ಮೂಲಗಳು.

ADVERTISEMENT

ದಿ ವಿಲನ್‌ ಚಿತ್ರದ ಮೊದಲ ವಾರದ ಕಲೆಕ್ಷನ್‌ ₹ 50 ಕೋಟಿಗಿಂತ ಹೆಚ್ಚಿದೆ. ಎರಡನೆಯ ವಾರದ ಕಲೆಕ್ಷನ್‌ ₹ 20 ಕೋಟಿಗೂ ಹೆಚ್ಚು. ಎರಡನೆಯ ವಾರ ಕೊನೆಗೊಳ್ಳಲು ಇನ್ನೂ ಕೆಲವು ದಿನಗಳು ಇವೆ. ಹಾಗಾಗಿ, ಕಲೆಕ್ಷನ್‌ ಮೊತ್ತ ಇನ್ನಷ್ಟು ಹೆಚ್ಚಬಹುದು ಎನ್ನಲಾಗುತ್ತಿದೆ.

ಚಿತ್ರದ ವೀಕ್ಷಣೆಗೆ ನಿಗದಿ ಮಾಡಿರುವ ಟಿಕೆಟ್‌ ದರ ಹೆಚ್ಚು ಎಂಬ ಆಕ್ಷೇಪ ಆರಂಭದಲ್ಲಿ ಒಮ್ಮೆ ವ್ಯಕ್ತವಾಗಿತ್ತು. ‘ಒಳ್ಳೆಯ ಸಿನಿಮಾ ಮಾಡಿದ್ದೇವೆ. ಹಾಗಾಗಿ ಒಂಚೂರು ಹೆಚ್ಚು ಹಣ ನೀಡಿ’ ಎಂದು ಚಿತ್ರತಂಡ ಆಗ ಮನವಿ ಮಾಡಿತ್ತು. ಆಗಿನ ಆಕ್ಷೇಪಕ್ಕೆ ಹೆಚ್ಚಿನ ಬಲ ದೊರೆತಿಲ್ಲ ಎಂಬ ರೀತಿಯಲ್ಲಿ ಇದೆ ಈಗ ಆಗಿರುವ ಕಲೆಕ್ಷನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.