ADVERTISEMENT

’ವಿಷ್ಣು ಸರ್ಕಲ್‘ ಅಸ್ತವ್ಯಸ್ತ ಪ್ರೇಮ ಪುರಾಣ

ದುರ್ಬಲ ಚಿತ್ರಕಥೆ, ಜಾಳು ಪಾತ್ರ ಪೋಷಣೆ

ಕೆ.ಎಚ್.ಓಬಳೇಶ್
Published 6 ಸೆಪ್ಟೆಂಬರ್ 2019, 10:18 IST
Last Updated 6 ಸೆಪ್ಟೆಂಬರ್ 2019, 10:18 IST
‘ವಿಷ್ಣು ಸರ್ಕಲ್‌’ ಚಿತ್ರದಲ್ಲಿ ಗುರುರಾಜ್‌ ಜಗ್ಗೇಶ್‌
‘ವಿಷ್ಣು ಸರ್ಕಲ್‌’ ಚಿತ್ರದಲ್ಲಿ ಗುರುರಾಜ್‌ ಜಗ್ಗೇಶ್‌   

ಚಿತ್ರ: ವಿಷ್ಣು ಸರ್ಕಲ್‌

ನಿರ್ಮಾಣ: ಆರ್‌.ಬಿ. ಮೂವೀಸ್‌

ನಿರ್ದೇಶನ: ಲಕ್ಷ್ಮಿ ದಿನೇಶ್‌

ADVERTISEMENT

ತಾರಾಗಣ: ಗುರುರಾಜ್‌ ಜಗ್ಗೇಶ್‌, ದಿವ್ಯಾಗೌಡ, ಡಾ.ಜಾನವಿ, ಸಂಹಿತಾ ವಿನ್ಯಾ, ದತ್ತಣ್ಣ

**

ಸಾಲ ವಸೂಲಿ ಮಾಡುವುದು ವಿಷ್ಣುವಿನ ಕೆಲಸ. ಆತನ ಅಪ್ಪ ಮದ್ಯದ ಅಂಗಡಿಯಲ್ಲಿ ಕ್ಯಾಷಿಯರ್‌. ಸಂಸ್ಕೃತಿ(ಡಾ.ಜಾನವಿ)ಯ ಮೇಲೆ ಅವನಿಗೆ ಪ್ರೀತಿ ಮೂಡುತ್ತದೆ. ಅವಳು ನೀಡುವ ಉಪ್ಪಿಟ್ಟಿನ ಮೇಲೂ ಆತನಿಗೆ ಅಷ್ಟೇ ಪ್ರೀತಿ. ಉದ್ಯೋಗ ಅರಸಿ ಆಕೆ ಅಮೆರಿಕಕ್ಕೆ ಹಾರುತ್ತಾಳೆ. ಆಗ ವಿಷ್ಣು ಕುಡಿತದ ದಾಸನಾಗುತ್ತಾನೆ.

ಈಗಾಗಲೇ, ಹಲವು ಬಾರಿಸವಕಲಾಗಿರುವ ತಂತ್ರಗಳನ್ನೇ ಬಳಸಿ ‘ವಿಷ್ಣು ಸರ್ಕಲ್‌’ನಲ್ಲಿ ಪ್ರೀತಿಯ ಸಂದೇಶ ಹೇಳಲು ಪ್ರಯಾಸಪಟ್ಟಿದ್ದಾರೆ ನಿರ್ದೇಶಕ ಲಕ್ಷ್ಮಿ ದಿನೇಶ್‌. ದುರ್ಬಲ ಚಿತ್ರಕಥೆ, ಜಾಳು ಪಾತ್ರ ಪೋಷಣೆಯಿಂದ ಚಿತ್ರ ಸೊರಗಿದೆ. ಎಷ್ಟು ಹೊತ್ತಿನವರೆಗೆ ನೋಡಿದರೂ ಪ್ರೇಕ್ಷಕರಿಗೆ ಕಾಡುವ, ಅವರ ಕಂಗಳು ತುಂಬಿಸುವ ಒಂದೇ ಒಂದು ಆಪ್ತವಾದ ದೃಶ್ಯವೂ ಇಲ್ಲ. ಅಂತಹ ಹಲವು ಸಾಧ್ಯತೆಗಳನ್ನು ನಾಯಕಿ ನೀಡುವ ಉಪ್ಪಿಟ್ಟಿನ ಡಬ್ಬಿಯೇ ನುಂಗಿ ಹಾಕಿದೆ.

ವಿಷ್ಣುವಿನ ಪ್ರೀತಿಯ ಹುಡುಕಾಟ ಬಹುಬೇಗ ಬೇಸರ ಹುಟ್ಟಿಸುತ್ತದೆ. ಆತ ಖುಷಿ ಇದ್ದಾಗಲೂ ಮದ್ಯ, ಸಿಗರೇಟು ಸೇದುತ್ತಾನೆ. ಮೂರನೇ ಪ್ರೇಯಸಿ ಆತನಿಗೆ ಮದ್ಯ ಕುಡಿಸಿ ತನ್ನ ಪ್ರೀತಿ ನಿವೇದಿಸಿಕೊಳ್ಳುತ್ತಾಳೆ. ಪ್ರೀತಿ ವಂಚಿತರಾದಾಗ ನೋವು ಮರೆಯುವುದಕ್ಕೆ ಮದ್ಯ ವ್ಯಸನಿಯಾಗುವುದೊಂದೇ ಮಾರ್ಗ ಎಂದು ನಿರ್ದೇಶಕರು ಹೇಳಹೊರಟಿದ್ದಾರೆಯೇ ಎಂಬ ಅನುಮಾನ ಹುಟ್ಟುತ್ತದೆ.ಮದ್ಯದ ಅಮಲು, ಪ್ರೇಮದ ಭೂತ ಮೆಟ್ಟಿಕೊಂಡ ನಾಯಕನಿಗೆ ತನ್ನ ಪ್ರೀತಿಯ ಅತ್ತೆಯ ಚಿತೆಗೆ ತಾನೇ ಬೆಂಕಿ ಇಟ್ಟ ವಿಷಯವೂ ಗೊತ್ತಾಗುವುದಿಲ್ಲ.

ಗುರುರಾಜ್‌ ಜಗ್ಗೇಶ್‌ ಅವರ ಮುಖಭಾವ ಮದ್ಯ ಕುಡಿದಾಗಲೂ, ಸ್ನೇಹಿತರ ಜೊತೆಗೆ ಖುಷಿಯಿಂದ ಇದ್ದಾಗಲೂ ಒಂದೇ ತರಹ ಕಾಣುತ್ತದೆ. ನಿರ್ದೇಶಕರಿಗೆ ತಾವು ಹೇಳಲು ಹೊರಟಿರುವ ಕಥೆಯ ಮೇಲೆ ತಮಗೆ ನಂಬಿಕೆ ಇದ್ದಂತೆ ಕಾಣುವುದಿಲ್ಲ. ಇದಕ್ಕಾಗಿಯೋ ಏನೋ ನಟ ವಿಷ್ಣುವರ್ಧನ್ ಅವರ ಸಿನಿಮಾಗಳ ದೃಶ್ಯಗಳು, ಸಂಭಾಷಣೆ ತೋರಿಸಿ ಚಪ್ಪಾಳೆ ಗಿಟ್ಟಿಸಲು ಪ್ರಯತ್ನಿಸಿದ್ದಾರೆ.

‘ಕೈ, ಕಾಲುಗಳನ್ನು ಕಳೆದುಕೊಂಡವರು ಮಾತ್ರ ಅಂಗವಿಕಲರಲ್ಲ. ಪ್ರೀತಿಯಿಂದ ವಂಚಿತರಾದವರೂ ಅಂಗವಿಕಲರೇ’ ಎಂಬ ಡೈಲಾಗ್‌ ಚಿತ್ರದಲ್ಲಿದೆ. ಈ ಸಂಭಾಷಣೆ ಹೇಳುವ ಸನ್ನಿವೇಶವೇ ಸಿನಿಮಾದ ಅಭಿರುಚಿಗೆ ಕನ್ನಡಿ ಹಿಡಿಯುತ್ತದೆ. ಕೊನೆಯ ಅರ್ಧಗಂಟೆಯಲ್ಲಿ ಕಥೆಯ ದಾರಿಗೆತಿರುವು ನೀಡಲು ನಿರ್ದೇಶಕರು ಪಟ್ಟಿರುವ ಪ್ರಯತ್ನ ಫಲ ಕೊಟ್ಟಿಲ್ಲ.

ಸಂಹಿತಾ ವಿನ್ಯಾ, ಡಾ.ಜಾನವಿ ಮತ್ತು ದಿವ್ಯಾಗೌಡ ನಟನೆಯಲ್ಲಿ ಇನ್ನಷ್ಟು ಪಳಗಬೇಕಿದೆ. ಪಿ.ಎಲ್‌. ರವಿ ಅವರ ಛಾಯಾಗ್ರಹಣ ಮತ್ತು ಶ್ರೀವತ್ಸ ಅವರ ಸಂಗೀತ ಚಿತ್ರಕ್ಕೆ ಹೊಸದೇನನ್ನೂ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.