ಬೆಂಗಳೂರು: ನಟ ಸುದೀಪ್ ಅವರ ನೇತೃತ್ವದಲ್ಲಿ ಕೆಂಗೇರಿ ಸಮೀಪ ನಿರ್ಮಾಣವಾಗಲಿರುವ ‘ಡಾ. ವಿಷ್ಣುವರ್ಧನ್ ಅಭಿಮಾನ ಕ್ಷೇತ್ರ’ದ ನೀಲನಕ್ಷೆಯನ್ನು ಡಾ.ವಿಷ್ಣು ಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ್ ಗುರುವಾರ(ಸೆ.18) ಬಿಡುಗಡೆಗೊಳಿಸಿದರು.
‘ಡಾ.ವಿಷ್ಣುವರ್ಧನ್ ಅಭಿಮಾನ ಕ್ಷೇತ್ರ’ದ ನಿರ್ಮಾಣಕ್ಕೆ ಸುದೀಪ್, ಅಶೋಕ್ ಖೇಣಿ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣ ಗೌಡ, ನೈಸ್ ಸಂಸ್ಥೆಯ ಎಂ.ರುದ್ರೇಶ್ ಹಾಗೂ ಅಭಿಮಾನಿಗಳು ಕೈಜೋಡಿಸಿದ್ದಾರೆ. ‘ಕಲಾವಿದರೊಬ್ಬರ ಹೆಸರಿನಲ್ಲಿ ಅವರ ಅಭಿಮಾನಿಗಳು ನಿರ್ಮಿಸುತ್ತಿರುವ ದೇಶದ ಮೊಟ್ಟ ಮೊದಲ ಅಭಿಮಾನ ಕ್ಷೇತ್ರವಿದು’ ಎಂದಿದ್ದಾರೆ ಶ್ರೀನಿವಾಸ್.
‘ಜ್ಞಾನ, ಧ್ಯಾನ ಮತ್ತು ದರ್ಶನ’ ಎಂಬ ವಿಷಯವನ್ನಿಟ್ಟುಕೊಂಡು ಈ ಕೇಂದ್ರ ನಿರ್ಮಾಣವಾಗಲಿದ್ದು, ಇಲ್ಲಿ ವಿಷ್ಣುವರ್ಧನ್ ಅವರ 25 ಅಡಿಯ ಅಮೃತ ಶಿಲೆಯ ಪ್ರತಿಮೆಯ ಜೊತೆಗೆ ಧ್ಯಾನ ಮಂದಿರವಿರಲಿದೆ. ಈ ಧ್ಯಾನ ಮಂದಿರದ ವಿಶೇಷತೆ ಏನೆಂದರೆ ಮಧ್ಯಾಹ್ನ ಎರಡು ಗಂಟೆಗೆ ಸೂರ್ಯನ ಕಿರಣಗಳು ಪ್ರತಿಮೆಯ ಮೇಲೆ ಮೂಡುವಂತೆ ಇದನ್ನು ವಿನ್ಯಾಸ ಮಾಡಲಾಗುವುದು. ಗ್ರಂಥಾಲಯ, ಫೋಟೋ ಗ್ಯಾಲರಿ ಕೂಡ ವಿಶೇಷವಾಗಿ ವಿನ್ಯಾಸಗೊಂಡಿದೆ. ಜೊತೆಗೆ ಪ್ರತಿದಿನ ಸಂಜೆ 6.30ಕ್ಕೆ ಲೇಸರ್ ಶೋ ನಡೆಯುವಂತೆ ವ್ಯವಸ್ಥೆಯನ್ನು ಮಾಡಲಾಗಿದೆ’ ಎಂದರು ಶ್ರೀನಿವಾಸ್.
‘ಮುಂದಿನ ಒಂದು ವರ್ಷದಲ್ಲಿ ಈ ಕ್ಷೇತ್ರದ ನಿರ್ಮಾಣ ಮುಗಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಲಾಗುತ್ತಿದ್ದು, ಮುಂಜಾಗ್ರತೆ ಕಾರಣಕ್ಕಾಗಿ ಆ ಜಾಗ ಎಲ್ಲಿದೆ ಎನ್ನುವ ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ’ ಎಂದರು.
ಜನ್ಮದಿನಾಚರಣೆ: ಅಭಿಮಾನ್ ಸ್ಟುಡಿಯೊದ ಆವರಣದಲ್ಲಿದ್ದ ವಿಷ್ಣುವರ್ಧನ್ ಅವರ ಸ್ಮಾರಕ ತೆರವುಗೊಂಡಿರುವ ಕಾರಣ, ಅಲ್ಲಿಗೆ ಸಮೀಪದಲ್ಲೇ ಇರುವ ಜಾಗವೊಂದರಲ್ಲಿ ತಾತ್ಕಾಲಿಕ ಮಂಟಪವನ್ನು ನಿರ್ಮಿಸಿ ಅಭಿಮಾನಿಗಳು ವಿಷ್ಣುವರ್ಧನ್ ಅವರ 75ನೇ ಜನ್ಮದಿನಾಚರಣೆಯನ್ನು ಆಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.