ADVERTISEMENT

ವಿಷ್ಣುವರ್ಧನ್‌ ನೆನೆದು ಕಣ್ಣೀರಿಟ್ಟ ಭಾರತಿ

‘ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣ ಮುಂದಿನ ವಾರ ಆರಂಭ’

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2019, 2:40 IST
Last Updated 31 ಡಿಸೆಂಬರ್ 2019, 2:40 IST
ಮೈಸೂರಿನ ಹೊರವಲಯದ ಎಚ್‌.ಡಿ.ಕೋಟೆ ರಸ್ತೆಯ ಹಾಲಾಳು ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ ‘ವಿಷ್ಣುವರ್ಧನ್ ಸ್ಮಾರಕ’ದ ಬಳಿ ಭಾರತಿ ವಿಷ್ಣುವರ್ಧನ್‌ ಪೂಜೆ ಸಲ್ಲಿಸಿದರು
ಮೈಸೂರಿನ ಹೊರವಲಯದ ಎಚ್‌.ಡಿ.ಕೋಟೆ ರಸ್ತೆಯ ಹಾಲಾಳು ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ ‘ವಿಷ್ಣುವರ್ಧನ್ ಸ್ಮಾರಕ’ದ ಬಳಿ ಭಾರತಿ ವಿಷ್ಣುವರ್ಧನ್‌ ಪೂಜೆ ಸಲ್ಲಿಸಿದರು   

ಮೈಸೂರು: ಚಿತ್ರನಟ ದಿ.ವಿಷ್ಣುವರ್ಧನ್ ಅವರ 10ನೇ ಪುಣ್ಯತಿಥಿಯಂದು ಅವರನ್ನು ನೆನಪಿಸಿಕೊಂಡು, ಪತ್ನಿ ಭಾರತಿ ಸೋಮವಾರ ಇಲ್ಲಿ ಭಾವುಕರಾದರು.

ಮೈಸೂರಿಗೆ ಬಂದಾಗಲೆಲ್ಲಾ ವಿಷ್ಣುವರ್ಧನ್ ಉಳಿದುಕೊಳ್ಳುತ್ತಿದ್ದ ಕಿಂಗ್ಸ್‌ ಕೋರ್ಟ್‌ ಹೋಟೆಲ್‌ನ 334, 335ನೇ ಕೊಠಡಿಗಳಿಗೆ ಭೇಟಿ ನೀಡಿದರು. ದಶಕದ ಹಿಂದೆ ವಿಷ್ಣು ಮೃತಪಟ್ಟ ಕೊಠಡಿಯಲ್ಲಿ ಕುಳಿತು ರೋಧಿಸಿದರು.

‘ವಿಷ್ಣು ಸಾಹಸಸಿಂಹ ಎಂದು ಹೆಸರು ಗಳಿಸಿದ್ದರೂ, ಮೃದು ಮನಸ್ಸಿನವರು. ಅವರು ಎಲ್ಲರ ಹೃದಯದಲ್ಲಿದ್ದಾರೆ’ ಎಂದು ಮಾಧ್ಯಮದವರಲ್ಲಿ ಹೇಳಿ ಗದ್ಗದಿತರಾದರು.

ADVERTISEMENT

ಪೂಜೆ: ಮೈಸೂರಿನ ಹೊರವಲಯದ ಎಚ್‌.ಡಿ.ಕೋಟೆ ರಸ್ತೆಯ ಹಾಲಾಳು ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ ‘ವಿಷ್ಣುವರ್ಧನ್ ಸ್ಮಾರಕ’ದ ಬಳಿ ತೆರಳಿ ಪೂಜೆ ಸಲ್ಲಿಸಿದರು.

‘ಇಷ್ಟು ವರ್ಷ ಒಳ್ಳೆಯ ಸಮಯಕ್ಕಾಗಿ ಕಾದಿದ್ದೆವು. ಅದೀಗ ಬಂದಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಮುಂದಿನ ವಾರ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ’ ಎಂದು ತಿಳಿಸಿದರು.

ವಿಷ್ಣುವರ್ಧನ್‌ ಅಭಿಮಾನಿಗಳು ಸ್ಮಾರಕ ಜಾಗದ ಬಳಿ ಆಯೋಜಿಸಿದ್ದ ರಕ್ತದಾನ, ಆರೋಗ್ಯ ತಪಾಸಣಾ ಶಿಬಿರಕ್ಕೆ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಚಾಲನೆ ನೀಡಿದರು.

ಬಳಿಕ ಮಾತನಾಡಿ, ‘ಎರಡೂವರೆ ಎಕರೆ ಜಾಗದಲ್ಲಿ ಸ್ಮಾರಕ ನಿರ್ಮಾಣಗೊಳ್ಳಲಿದೆ. ಗ್ಯಾಲರಿ, ಸಭಾಂಗಣ ನಿರ್ಮಿಸಲಾಗುವುದು. ಸಭಾಂಗಣದಲ್ಲಿ ರಂಗಭೂಮಿ, ಚಿತ್ರರಂಗದ ಚಟುವಟಿಕೆ ನಡೆಯಲಿದೆ. ಇನ್ನುಳಿದ ಜಾಗದಲ್ಲಿ ಪುಣೆಯಲ್ಲಿರುವ ಎಫ್‌ಟಿಐಐನ ಶಾಖೆ ಆರಂಭಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.