ADVERTISEMENT

ರಶ್ಮಿಕಾಗೆ ಡಬ್ಬಿಂಗ್‌ ತಲೆನೋವು!

​ಪ್ರಜಾವಾಣಿ ವಾರ್ತೆ
Published 15 ಜೂನ್ 2020, 8:28 IST
Last Updated 15 ಜೂನ್ 2020, 8:28 IST
ನಟಿ ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ   

ರಶ್ಮಿಕಾ ಮಂದಣ್ಣ ದಕ್ಷಿಣ ಭಾರತ ಚಿತ್ರರಂಗದ ಜನಪ್ರಿಯ ನಟಿ. ನಾಲ್ಕು ವರ್ಷದ ಹಿಂದೆ ಕನ್ನಡದ ‘ಕಿರಿಕ್‌ ಪಾರ್ಟಿ’ ಚಿತ್ರದಿಂದ ಆರಂಭಗೊಂಡ ಆಕೆಯ ಯಶಸ್ಸಿನ ನಾಗಾಲೋಟ ಚಂದನವನ ದಾಟಿ ಟಾಲಿವುಡ್‌ಗೆ ಅಡಿ ಇಟ್ಟು ವರ್ಷಗಳೇ ಉರುಳಿವೆ. ಈಗ ಕಾಲಿವುಡ್‌ನಲ್ಲೂ ಆ ಯಶಸ್ಸಿನ ಮ್ಯಾರಥಾನ್‌ ಮುಂದುವರಿಸುವ ಹೆಬ್ಬಯಕೆ ಆಕೆಯದ್ದು. ಇದಕ್ಕಾಗಿ ಆಕೆ ಸಾಕಷ್ಟು ತಯಾರಿ ಕೂಡ ನಡೆಸಿದ್ದಾರೆ.

ಮತ್ತೊಂದೆಡೆ ಸಿನಿಮಾದಿಂದ ಸಿನಿಮಾಕ್ಕೆ ಸಂಭಾವನೆಯ ಮೊತ್ತವನ್ನೂ ಹೆಚ್ಚಿಸಿಕೊಳ್ಳುತ್ತಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದಲ್ಲಿ ದುಬಾರಿ ಸಂಭಾವನೆ ಪಡೆಯುವ ಬೆರಳೆಣಿಕೆಯಷ್ಟು ನಟಿಯರ ಪೈಕಿ ರಶ್ಮಿಕಾ ಕೂಡ ಒಬ್ಬರು.

ಪ್ರಸ್ತುತ ಆಕೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆ ಪೈಕಿ ಸುಕುಮಾರ್‌ ನಿರ್ದೇಶನದ ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಚಿತ್ರಕ್ಕೂ ಆಕೆಯೇ ಹೀರೊಯಿನ್‌. ಇದರಲ್ಲಿ ಆಕೆಯದ್ದು ಚಿತ್ತೂರು ಹುಡುಗಿಯ ಪಾತ್ರ. ಇದೇ ಮೊದಲ ಬಾರಿಗೆ ಅಲ್ಲು ಅರ್ಜುನ್‌ ಜೊತೆಗೆ ಆಕೆ ತೆರೆ ಹಂಚಿಕೊಳ್ಳುತ್ತಿರುವ ಖುಷಿಯಲ್ಲಿದ್ದಾರೆ. ಜುಲೈನಿಂದ ಇದರ ಶೂಟಿಂಗ್‌ ಆರಂಭವಾಗುವ ನಿರೀಕ್ಷೆಯಿದೆ. ಆಗಸ್ಟ್‌ನಿಂದ ಅಲ್ಲು ಅರ್ಜುನ್‌ ಸೆಟ್‌ ಪ್ರವೇಶಿಸಲಿದ್ದಾರಂತೆ. ಚಿತ್ರದಲ್ಲಿ ಅವರದು ಲಾರಿ ಡ್ರೈವರ್‌ ಪಾತ್ರ.

ADVERTISEMENT

ಕನ್ನಡ ಮತ್ತು ತೆಲುಗಿನಲ್ಲಿ ಇಲ್ಲಿಯವರೆಗೆ ನಟಿಸಿರುವ ಸಿನಿಮಾಗಳಿಗೆ ರಶ್ಮಿಕಾ ಅವರೇ ತಮ್ಮ ಪಾತ್ರಗಳಿಗೆ ಕಂಠದಾನ ಮಾಡಿದ್ದಾರೆ. ಆದರೆ, ಈಗ ‘ಪುಷ್ಪ’ ಚಿತ್ರಕ್ಕೆ ಚಿತ್ತೂರು ಶೈಲಿಯಲ್ಲಿಯೇ ಡಬ್ಬಿಂಗ್‌ ಮಾಡಬೇಕಿದೆ. ಮತ್ತೊಂದೆಡೆ ಸುಕುಮಾರ್‌ ಕೂಡ ಚಿತ್ತೂರು ಭಾಗದ ತೆಲುಗು ಶೈಲಿಯಲ್ಲಿಯೇ ರಶ್ಮಿಕಾ ಪಾತ್ರಕ್ಕೆ ಡಬ್ಬಿಂಗ್‌ ಮಾಡಿಸಿದರೆ ಚೆನ್ನಾಗಿರುತ್ತದೆ ಎಂದು ನಿರ್ಧರಿಸಿದ್ದಾರೆ. ಆದರೆ, ರಶ್ಮಿಕಾಗೆ ಆ ಭಾಗದ ವಾಕ್ಚಾತುರ್ಯ ಇಲ್ಲ. ಹಾಗಾಗಿಯೇ, ಇದು ಆಕೆಗೆ ತಲೆನೋವು ತಂದಿದೆ ಎನ್ನುವುದು ಟಾಲಿವುಡ್‌ ಅಂಗಳದಲ್ಲಿ ಕೇಳಿಬರುತ್ತಿರುವ ಮಾತು.

‘ಪುಷ್ಪ’ ಚಿತ್ರದಲ್ಲಿ ಆಕೆಯದ್ದು ಸವಾಲಿನ ಪಾತ್ರ. ಮತ್ತೊಂದೆಡೆ ಪಾತ್ರಕ್ಕೆ ತಕ್ಕಂತೆ ಡಬ್ಬಿಂಗ್‌ ಸರಿಹೊಂದದಿದ್ದರೆ ಏನು ಮಾಡುವುದು ಎಂಬುದು ಆಕೆಯ ಚಿಂತೆ. ಆಕೆಯ ಕಂಠ ಪಾತ್ರಕ್ಕೆ ತಕ್ಕಂತೆ ಹೊಂದಾಣಿಕೆಯಾಗದಿದ್ದರೆ ಡಬ್ಬಿಂಗ್‌ ಕಲಾವಿದರ ಮೊರೆ ಹೋಗಲು ಸುಕುಮಾರ್‌ ನಿರ್ಧರಿಸಿದ್ದಾರೆ ಎಂಬ ಸುದ್ದಿಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.