ADVERTISEMENT

War 2 v/s Coolie: ‘ವಾರ್ 2’, ‘ಕೂಲಿ’ ಜುಗಲ್ಬಂದಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 23:30 IST
Last Updated 1 ಆಗಸ್ಟ್ 2025, 23:30 IST
   

ಎರಡು ದೊಡ್ಡ ಸಿನಿಮಾಗಳು ಏಕಕಾಲದಲ್ಲಿ ಬಿಡುಗಡೆಯಾಗುವುದನ್ನು ತಪ್ಪಿಸುವ ಲೆಕ್ಕಾಚಾರಗಳು ಈ ಹಿಂದೆ ನಡೆಯುತ್ತಿದ್ದವು. ಈಗ ಪರಿಸ್ಥಿತಿ ಹಾಗಿಲ್ಲ. ಚಿತ್ರಮಂದಿರಗಳಲ್ಲಿ ಇಂತಿಷ್ಟು ಪರದೆಗಳ ಮೇಲೆ ಸಿನಿಮಾ ತೆರೆಕಾಣಿಸಬೇಕು ಎನ್ನುವ ಗಣಿತವೊಂದಕ್ಕೇ ಈಗ ಗೆಲುವು. ಆಗಸ್ಟ್ ಎರಡನೇ ವಾರ ತಮಿಳಿನ ‘ಕೂಲಿ’ ಹಾಗೂ ಹಿಂದಿಯ ‘ವಾರ್ 2’ ಚಿತ್ರಗಳು ತೆರೆಕಾಣುತ್ತಿವೆ. ಎರಡೂ ಆಗಸ್ಟ್ 14ರಂದು ಬಿಡುಗಡೆಗೆ ದಿನಾಂಕ ಗೊತ್ತುಪಡಿಸಿವೆ. ಹೀಗಾಗಿ, ಈ ಚಿತ್ರಗಳ ಪೈಕಿ ಗೆಲುವು ಯಾವುದಕ್ಕೆ ಎನ್ನುವ ಕುತೂಹಲ ಮೂಡಿದೆ.

ಕೆಲವು ಯೂಟ್ಯೂಬರ್‌ಗಳು ಇದೇ ವಿಷಯವನ್ನು ಚರ್ಚೆಯ ವಸ್ತುವಾಗಿಸಿ, ತಮಿಳುನಾಡಿನಲ್ಲಿ ಪ್ರೇಕ್ಷಕರನ್ನು ಮಾತನಾಡಿಸಿ ಸುದ್ದಿ ಮಾಡುತ್ತಿದ್ದಾರೆ. ‘ಕೂಲಿ’ ಅಥವಾ ‘ವಾರ್ 2’ ಎರಡರಲ್ಲಿ ನಿಮ್ಮ ಆಯ್ಕೆ ಯಾವುದು’ ಎನ್ನುವ ಪ್ರಶ್ನೆ ಅದು. ಈ ಪ್ರಶ್ನೆಗೆ ಮಿಶ್ರ ಸ್ವರೂಪದ ಉತ್ತರ ದೊರೆಯುತ್ತಿದೆ. ಎರಡೂ ಸಿನಿಮಾಗಳನ್ನು ನೋಡಲು ಕಾತರದಿಂದ ಇರುವವರ ಸಂಖ್ಯೆ ಸಮನಾಗಿದೆ ಎನ್ನುವ ಅರ್ಥದ ಸುದ್ದಿಗಳೂ ಹೊಮ್ಮುತ್ತಿವೆ.

‘ವಾರ್ 2’ ಸಿನಿಮಾದಲ್ಲಿ ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್‌ಟಿಆರ್ ಅಭಿನಯಿಸಿದ್ದಾರೆ. ಕಿಯಾರಾ ಅಡ್ವಾಣಿ ಅವರ ಗ್ಲ್ಯಾಮರ್ ಚಿತ್ರದ ಬೋನಸ್ಸು.

ADVERTISEMENT

ಬೇಹುಗಾರಿಕಾ ಲೋಕದ ಕಥನವನ್ನು ಒಳಗೊಂಡಿರುವ ಈ ಚಿತ್ರದಲ್ಲಿ ಮೈನವಿರೇಳಿಸುವ ಸಾಹಸ ದೃಶ್ಯಗಳು ಹಾಗೂ ಅದ್ಭುತ ಲಯದ ನೃತ್ಯವಿದೆ ಎಂದು ಯಶ್‌ರಾಜ್‌ ಫಿಲಂಸ್‌ ನಿರ್ಮಾಣ ಸಂಸ್ಥೆಯು ಪ್ರಚಾರ ಮಾಡುತ್ತಿದೆ. ಈ ಸಿನಿಮಾದ ಅವಧಿಯು ಮೂರು ತಾಸಿಗೂ ಹೆಚ್ಚು ಇರಲಿದೆ ಎನ್ನುವುದು ಕೂಡ ಚರ್ಚೆಯ ವಸ್ತುವಾಗಿದೆ. ಈ ಹಿಂದೆ ‘ಟೈಗರ್ ಜಿಂದಾ ಹೈ’ ಹಿಂದಿ ಸಿನಿಮಾ 162 ನಿಮಿಷ ಅವಧಿಯದ್ದಾಗಿತ್ತು. ಸಿನಿಮಾ ಅವಧಿ ಇಷ್ಟು ಸುದೀರ್ಘವಾಗಿ ಇರಬೇಕೆ ಎಂಬ ಚರ್ಚೆಯೂ ಸಾಮಾಜಿಕ ಮಾಧ್ಯಮದಲ್ಲಿ ನಡೆಯುತ್ತಿದೆ.

ಸಿನಿಮಾ ಹಿಡಿದಿಟ್ಟುಕೊಳ್ಳಬಹುದಾದಲ್ಲಿ ಎಷ್ಟು ಅವಧಿ ಇದ್ದರೂ ತೊಂದರೆ ಇಲ್ಲ ಎಂದು ಹೇಳುತ್ತಿರುವವರ ಸಂಖ್ಯೆ ಕಡಿಮೆ ಇದೆ. ಅಬ್ಬಬ್ಬಾ ಎಂದರೆ ಎರಡೂವರೆ ಗಂಟೆ ಕುಳಿತು ಸಿನಿಮಾ ನೋಡಬಹುದು, ಅದಕ್ಕಿಂತ ಹೆಚ್ಚು ಹೊತ್ತು ಎಳೆದಾಡಿದರೆ ತಾಳ್ಮೆ ಪರೀಕ್ಷಿಸಿದಂತೆ ಆಗುತ್ತದೆ ಎಂಬ ಅಭಿಪ್ರಾಯವನ್ನು ಹೆಚ್ಚು ಜನ ವ್ಯಕ್ತಪಡಿಸಿದ್ದಾರೆ.

‘ವಾರ್ 2’ ನಿರ್ದೇಶಕ ಅಯಾನ್ ಮುಖರ್ಜಿ ಅವರು ‘ವೇಕ್ ಅಪ್ ಸಿದ್’, ‘ಯೇ ಜವಾನಿ ಹೈ ದಿವಾನಿ’, ‘ಬ್ರಹ್ಮಾಸ್ತ್ರ–ಪಾರ್ಟ್ 1’ ಹಿಂದಿ ಸಿನಿಮಾಗಳನ್ನು ನಿರ್ದೇಶಿಸಿದ ಅನುಭವ ಇರುವವರು. ‘ಸಿನಿಮಾದಲ್ಲಿ ಸತ್ವ ಇದ್ದರೆ ಅವಧಿ ಎಷ್ಟು ಎನ್ನುವುದು ಮುಖ್ಯವಾಗುವುದೇ ಇಲ್ಲ. ಸಂಕಲನ ಮಾಡುವಾಗ ದೃಶ್ಯಗಳು ಹೇಗೆಲ್ಲ ಹಿಡಿದಿಟ್ಟುಕೊಳ್ಳಬೇಕು ಎನ್ನುವುದನ್ನೆಲ್ಲ ಅಂದಾಜು ಮಾಡಿರುತ್ತೇವೆ’ ಎನ್ನುವ ಅವರಿಗೆ ತಮ್ಮ ಸಿನಿಮಾ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ. ಪ್ರೀತಂ ಸ್ವರ ಸಂಯೋಜನೆ ಮಾಡಿರುವ ಹಾಡುಗಳು ಚಿತ್ರಕ್ಕೆ ಇಂಧನವಾಗಬಲ್ಲವು ಎಂದೂ ಅವರು ಹೇಳಿಕೊಂಡಿದ್ದಾರೆ.

‘ಕೂಲಿ’ ಸಿನಿಮಾ ನಾಯಕ ಸೂಪರ್‌ಸ್ಟಾರ್ ರಜನೀಕಾಂತ್. ಅದರಲ್ಲಿ ಕನ್ನಡದ ಉಪೇಂದ್ರ, ತೆಲುಗಿನ ನಾಗಾರ್ಜುನ, ಮಲಯಾಳದ ಶೌಬಿನ್ ಶಹೀರ್, ತಮಿಳಿನ ಸತ್ಯರಾಜ್ ಅಭಿನಯಿಸಿದ್ದಾರೆ. ಅಮೀರ್ ಖಾನ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತವಿದೆ. ‘ಮೋನಿಕಾ’ ಹಾಡಿನಲ್ಲಿ ಪೂಜಾ ಹೆಗಡೆ ನೃತ್ಯ ಲಾಲಿತ್ಯವಿದ್ದರೂ ಅದರಲ್ಲಿ ಶೌಬಿನ್ ದಢೂತಿ ದೇಹ ಇಟ್ಟುಕೊಂಡೂ ಹಾಕಿರುವ ಹೆಜ್ಜೆಗಳು ಪ್ರೇಕ್ಷಕರಿಗೆ ಹಿಡಿಸಿವೆ.

‘ಜನಪ್ರಿಯ ಸಿನಿಮಾದಲ್ಲಿ ಸಿದ್ಧಮಾದರಿಗಳನ್ನು ಈ ರೀತಿಯೂ ಒಡೆಯಬಹುದು. ಶೌಬಿನ್ ಅವರು ನೆಗೆಟಿವ್ ಶೇಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರಿಂದ ನೃತ್ಯ ಮಾಡಿಸುವುದು ಭಿನ್ನ ಆಲೋಚನೆ. ಅದನ್ನು ಜನ ಒಪ್ಪಿದ್ದಾರೆ. ಸಿನಿಮಾದಲ್ಲಿ ಸಿಗಬಹುದಾದ ಹಲವು ಬಗೆಯ ಮನರಂಜನೆಗೆ ಇದೊಂದು ನಮೂನೆ ಅಷ್ಟೆ’ ಎನ್ನುತ್ತಾರೆ ಲೋಕೇಶ್ ಕನಕರಾಜ್.

ಒಂದು ಅಂದಾಜಿನ ಪ್ರಕಾರ, ‘ವಾರ್ 2’, ‘ಕೂಲಿ’ ಎರಡೂ ಸಿನಿಮಾಗಳ ಮೇಲೆ ತಲಾ ₹ 400 ಕೋಟಿ ಬಂಡವಾಳ ಹೂಡಲಾಗಿದೆ. ಸನ್‌ ಪಿಕ್ಚರ್ಸ್ ನಿರ್ಮಾಣದ ಕೂಲಿ ಒಂದು ಕಡೆ, ಯಶ್‌ರಾಜ್ ಬ್ಯಾನರ್‌ನ ‘ವಾರ್ 2’ ಇನ್ನೊಂದು ಕಡೆ. ಪ್ಯಾನ್–ಇಂಡಿಯಾ ಸಿನಿಮಾಗಳ ಭರಾಟೆ ಹೇಗಿರುತ್ತದೆ ಎನ್ನುವುದಕ್ಕೆ ಈ ಬೆಳವಣಿಗೆ ಇನ್ನೊಂದು ಉದಾಹರಣೆ. ‘ಕೂಲಿ’ ಸಿನಿಮಾ ಕೂಡ ಎರಡೂಮುಕ್ಕಾಲು ತಾಸಿಗೂ ಹೆಚ್ಚಿನ ಅವಧಿಯದ್ದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.