ಬೆಂಗಳೂರು: ನಾನು ಕನ್ನಡದ ಬಗ್ಗೆ ನೀಡಿದ ಹೇಳಿಕೆ ಪ್ರೀತಿಯಿಂದ ನೀಡಿದ್ದಾಗಿದ್ದು, ರಾಜಕಾರಣಿಗಳು ಭಾಷೆಯ ಬಗ್ಗೆ ಮಾತನಾಡಲು ಅರ್ಹರಲ್ಲ ಎಂದು ಕನ್ನಡದ ಕುರಿತಾದ ತಮ್ಮ ಹೇಳಿಕೆ ವಿವಾದದ ಕುರಿತಂತೆ ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಹೇಳಿದ್ದಾರೆ.
‘ಕನ್ನಡ ತಮಿಳಿನಿಂದ ಹುಟ್ಟಿರುವುದು’ಎಂದು ನಟ ಕಮಲ್ ಹಾಸನ್ ‘ಥಗ್ ಲೈಫ್’ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ನೀಡಿದ್ದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾದಿಯಾಗಿ ಹಲವು ರಾಜಕಾರಣಿಗಳು, ಕನ್ನಡಪರ ಸಂಘಟನೆಗಳು ತೀವ್ರ ಟೀಕೆಗೈದಿದ್ದಾರೆ.
ಕನ್ನಡಕ್ಕೆ ಬಹಳ ದೀರ್ಘ ಕಾಲದ ಇತಿಹಾಸವಿದೆ, ಪಾಪ ಕಮಲ್ ಹಾಸನ್‌ಗೆ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರೆ, ಮಾತೃಭಾಷೆಯನ್ನು ವೈಭವೀಕರಿಸುವ ನೆಪದಲ್ಲಿ ಕನ್ನಡವನ್ನು ಅಪಮಾನಿಸಿರುವುದು ಸರಿಯಲ್ಲ. ಕಮಲ್ ಹಾಸನ್ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ. ಕಮಲ್ ಅವರ ಥಗ್ ಲೈಫ್ ಚಿತ್ರಕ್ಕೆ ನಿಷೇಧ ಹೇರಬೇಕೆಂದು ಕನ್ನಡಪರ ಸಂಘಟನೆಗಳು ಒತ್ತಾಯಿಸಿವೆ.
ವಿವಾದದ ಬಳಿಕ ಇಂದು ಮತ್ತೊಂದು ಕಾರ್ಯಕ್ರಮದಲ್ಲಿ ಪ್ರತಿಕ್ರಿಯಿಸಿರುವ ಕಮಲ್ ಹಾಸನ್, ಕನ್ನಡದ ಬಗ್ಗೆ ನಾನು ಪ್ರೀತಿಯಿಂದ ಹೇಳಿಕೆ ನೀಡಿದ್ದೇನೆ. ರಾಜಕಾರಣಿಗಳು ಭಾಷೆಯ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ ಎಂದಿದ್ದಾರೆ.
ಹಲವು ಇತಿಹಾಸಕಾರರು ನನಗೆ ಭಾಷೆಯ ಚರಿತ್ರೆ ಹೇಳಿದ್ದಾರೆ. ಅದು ನನ್ನ ಅಭಿಪ್ರಾಯವಲ್ಲ. ತಮಿಳುನಾಡು ಅತ್ಯಂತ ವಿರಳ ರಾಜ್ಯಗಳಲ್ಲಿ ಒಂದು. ಒಬ್ಬ ರೆಡ್ಡಿ, ಮೆನನ್, ಮಂಡ್ಯದ ಕನ್ನಡಿಗ ಅಯ್ಯಂಗಾರ್ ಇಲ್ಲಿ ಮುಖ್ಯಮಂತ್ರಿಯಾಗಿದ್ದಾರೆ. ಚೆನ್ನೈನಲ್ಲಿ ವಿವಾದ ಸೃಷ್ಟಿಯಾದಾಗ ಕರ್ನಾಟಕದ ಮುಖ್ಯಮಂತ್ರಿಗಳು ನನಗೆ ಬೆಂಬಲ ನೀಡಿದ್ದರು. ಕರ್ನಾಟಕಕ್ಕೆ ಬನ್ನಿ ಮನೆ ಕೊಡುತ್ತೇವೆ ಎಂದು ಕನ್ನಡಿಗರು ಹೇಳಿದ್ದರು. ನನ್ನ ಮತ್ತು ಥಗ್ ಲೈಫ್ ಚಿತ್ರವನ್ನು ಜನರೇ ನೋಡಿಕೊಳ್ಳುತ್ತಾರೆ. ವಿವಾದಕ್ಕೆ ಅವರೇ ಉತ್ತರ ಕೊಡುತ್ತಾರೆ. ಭಾಷೆಯ ಬಗ್ಗೆ ಮಾತನಾಡುವ ಅರ್ಹತೆ ನಾನೂ ಸೇರಿದಂತೆ ರಾಜಕಾರಣಿಗಳಿಗಿಲ್ಲ. ರಾಜಕಾರಣಿಗಳಿಗೆ ಅಷ್ಟು ವಿದ್ಯಾಭ್ಯಾಸ ಇಲ್ಲ. ಈ ಕುರಿತಾದ ಗಾಢ ಚರ್ಚೆಯನ್ನು ಇತಿಹಾಸಕಾರರು, ಪುರಾತತ್ವಶಾಸ್ತ್ರಜ್ಞರು ಮತ್ತು ಭಾಷಾತಜ್ಞರಿಗೆ ಬಿಡೋಣ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.