ADVERTISEMENT

ಕ್ಲಿನಿಕಲಿ ಡೆಡ್ ಆಗಿದ್ದೆ: 'ಕೂಲಿ' ಚಿತ್ರದ ಅಪಘಾತ ಮೆಲುಕು ಹಾಕಿದ ಅಮಿತಾಬ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಮಾರ್ಚ್ 2023, 11:11 IST
Last Updated 6 ಮಾರ್ಚ್ 2023, 11:11 IST
ಅಮಿತಾಬ್
ಅಮಿತಾಬ್   

ಮುಂಬೈ: ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ ಮುಖ್ಯ ಭೂಮಿಕೆಯಲ್ಲಿರುವ ಪ್ರಾಜೆಕ್ಟ್ ಕೆ ಚಿತ್ರದ ಸಾಹಸ ದೃಶ್ಯದ ಶೂಟಿಂಗ್‌ ವೇಳೆ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರಿಗೆ ಗಂಭೀರ ಗಾಯವಾಗಿದೆ.

ತಮ್ಮ ಬಲ ಪಕ್ಕೆಲುಬು ಹರಿದಿದ್ದು, ಕಾರ್ಟಿಲೆಜ್ ಕೂಡ ಹಾನಿಗೊಳಗಾಗಿದೆ ಎಂದು ತಮ್ಮ ಬ್ಲಾಗ್ ಪೋಸ್ಟ್‌ನಲ್ಲಿ ಅವರು ಹೇಳಿಕೊಂಡಿದ್ದಾರೆ.

ಅಂದಹಾಗೆ, ಅಮಿತಾಬ್ ಬಚ್ಚನ್ ಗಾಯಗೊಳ್ಳುತ್ತಿರುವುದು ಇದೇ ಮೊದಲಲ್ಲ. 1982ರಲ್ಲಿ ಕೂಲಿ ಚಿತ್ರದ ಚಿತ್ರೀಕರಣದ ಸಂದರ್ಭವೂ ಅವರಿಗೆ ತೀವ್ರ ಗಾಯವಾಗಿತ್ತು. ಅಂದು ಇಡೀ ದೇಶ ಅವರಿಗಾಗಿ ಮರುಗಿತ್ತು. ಅಮಿತಾಬ್ ಚೇತರಿಕೆಗೆ ಪ್ರಾರ್ಥಿಸಿತ್ತು.

ADVERTISEMENT

ಬೆಂಗಳೂರಿನಲ್ಲಿ ಪುನೀತ್ ಇಸ್ಸಾರ್ ಜೊತೆ ಸಾಹಸ ದೃಶ್ಯವೊಂದರ ಶೂಟಿಂಗ್‌ನಲ್ಲಿ ತೊಡಗಿದ್ದ ವೇಳೆ ಅಮಿತಾಬ್ ತೀವ್ರ ಗಾಯಗೊಂಡಿದ್ದರು. ಪ್ರಮುಖ ಘಟ್ಟದಲ್ಲಿ ಅಮಿತಾಬ್ ತಪ್ಪಾಗಿ ಜಂಪ್ ಮಾಡಿದ್ದರಿಂದ ಸಹ ನಟ ಪುನೀತ್ ಇಸ್ಸಾರ್ ಅವರ ಪಂಚ್ ಬಿಗ್‌ಬಿ ಹೊಟ್ಟೆಭಾಗಕ್ಕೆ ಬಿದ್ದು ಕರುಳಿಗೆ ಪೆಟ್ಟಾಗಿತ್ತು. ಕೂಡಲೇ ಅಮಿತಾಬ್ ಪ್ರಜ್ಞೆ ತಪ್ಪಿದ್ದರು. ಬಳಿಕ, ಸೆಂಟ್ ಫಿಲೋಮಿನಾ ಆಸ್ಪತ್ರೆಯಲ್ಲಿ ತುರ್ತು ಶಸ್ತ್ರಚಿಕಿತ್ಸೆ ಬಳಿಕ ಅವರನ್ನು ಮುಂಬೈಗೆ ಶಿಫ್ಟ್ ಮಾಡಲಾಗಿತ್ತು.

ಹೊಟ್ಟೆಯ ಕೆಳಭಾಗದಲ್ಲಿ ಅಧಿಕ ರಕ್ತಸ್ರಾವವಾಗುತ್ತಿದ್ದ ಬಿಗ್‌ಬಿಯನ್ನು ಆರಂಭದಲ್ಲಿ 'ಕ್ಲಿನಿಕಲಿ ಡೆಡ್' ಎಂದು ಘೋಷಿಸಲಾಗಿತ್ತು. ಆದರೆ, ವೈದ್ಯರು ಅವರಿಗೆ ಅಡ್ರಿನಾಲಿನ್ ಚುಚ್ಚುಮದ್ದನ್ನು ನೀಡುವ ಮೂಲಕ ಮರುಜೀವ ನೀಡಿದ್ದರು. ಆಸ್ಪತ್ರೆಯಲ್ಲಿದ್ದಾಗ ಅಭಿಮಾನಿಗಳು ನಟನಿಗೆ ರಕ್ತದಲ್ಲಿ ಪತ್ರ ಬರೆದಿದ್ದರು. ದೊಡ್ಡ ರಾಜಕಾರಣಿಗಳೂ ಅವರ ಚೇತರಿಕೆಗೆ ಪ್ರಾರ್ಥಿಸಿದ್ದರು.

ಕೆಲ ಸಮಯದ ಬಳಿಕ ಚೇತರಿಸಿಕೊಂಡ ಬಿಗ್‌ಬಿ, ಕೂಲಿ ಚಿತ್ರದ ಚಿತ್ರೀಕರಣ ಮುಗಿಸಿಕೊಟ್ಟಿದ್ದರು.

ಅಪಘಾತದ ಕಾರಣ ಚಿತ್ರದ ಕ್ಲೈಮ್ಯಾಕ್ಸ್ ಅನ್ನು ಬದಲಾಯಿಸಲಾಯಿತು. ಬಿಗ್ ಬಿ ಪಾತ್ರವು ಅಂತ್ಯದಲ್ಲಿ ಸಾಯುವುದು ಮೂಲ ಯೋಜನೆಯಾಗಿತ್ತು, ಆದರೆ, ನಿರ್ಮಾಪಕರು ಅದನ್ನು ಬದಲಾಯಿಸಿದ್ದರು.

ಬ್ಲಾಗ್‌ ಪೋಸ್ಟ್‌ನಲ್ಲಿ ಕೂಲಿ ಅಪಘಾತ ನೆನಪಿಸಿಕೊಂಡ ಬಿಗ್‌ಬಿ

‘ಅಂದು ನಾನು ಬಹುತೇಕ ಕೋಮಾಸ್ಥಿತಿಗೆ ತಲುಪಿದ್ದೆ. ಬ್ರೀಚ್‌ಕ್ಯಾಂಡಿ ಆಸ್ಪತ್ರೆಗೆ ಬಂದ ಬಳಿಕ ನನಗೆ ಮತ್ತೊಂದು ಶಸ್ತ್ರಚಿಕಿತ್ಸೆ ನಡೆಯಿತು. ಆದರೂ ನಾನು ಆ ಪರಿಸ್ಥಿತಿಯಿಂದ ಹೊರಬರಲಿಲ್ಲ. ಕೆಲ ನಿಮಿಷಗಳ ಕಾಲ ಕ್ಲಿನಿಕಲ್ ಡೆಡ್ ಆಗಿದ್ದೆ. ನನ್ನನ್ನು ನೋಡಿಕೊಳ್ಳುತ್ತಿದ್ದ ಡಾ. ವಾಡಿಯಾ ನಿಜವಾಗಿಯೂ ನನ್ನ ಜೀವ ರಕ್ಷಕರು. ನಾನು ಕೊನೆಯ ಪ್ರಯತ್ನವನ್ನು ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದ ಅವರು, ಏನೋ ಚಮತ್ಕಾರ ಆಗಬಹುದು ಎಂಬ ನಂಬಿಕೆಯಲ್ಲಿ ಕೊರ್ಟಿಸೋನ್ ಮತ್ತು ಆಡ್ರಿನಾಲಿನ್ ಚುಚ್ಚುಮದ್ದುಗಳನ್ನು ಒಂದರ ಹಿಂದೊಂದರಂತೆ 40 ಡೋಸ್ ಚುಚ್ಚಿದರು. ಕೊನೆಗೂ ನಾನು ಚೇತರಿಸಿಕೊಂಡೆ’ ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.