ADVERTISEMENT

‘ಮಾಸ್ಟರ್’ ಟ್ರೇಲರ್ ಬಿಡುಗಡೆ ಯಾವಾಗ? ದಳಪತಿ ಅಭಿಮಾನಿಗಳ ದುಂಬಾಲು

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2020, 8:56 IST
Last Updated 17 ಏಪ್ರಿಲ್ 2020, 8:56 IST
ವಿಜಯ್
ವಿಜಯ್   

‘ಬಿಗಿಲ್’ -ತಮಿಳಿನ ದಳಪತಿ ವಿಜಯ್ ಅವರ ವೃತ್ತಿಬದುಕಿನಲ್ಲಿಯೇ ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆ ಬರೆದ ಚಿತ್ರ. ಲೋಕೇಶ್ ಕನಕರಾಜ್ ಮತ್ತು ವಿಜಯ್ ಕಾಂಬಿನೇಷನ್ ನಡಿ ತೆರೆಗೆ ಸಿದ್ಧವಾಗಿರುವ ‘ಮಾಸ್ಟರ್’ ಚಿತ್ರದ ಮೇಲೂ ಈಗ ನಿರೀಕ್ಷೆ ಇಮ್ಮಡಿಗೊಂಡಿದೆ. ಕಳೆದ ಏಪ್ರಿಲ್ 9ರಂದೇ ಈ ಸಿನಿಮಾ ಬಿಡುಗಡೆಯಾಗಬೇಕಿತ್ತು. ಕೊರೊನಾ ಮಹಾಮಾರಿಯು ಚಿತ್ರತಂಡದ ಆಸೆಗೆ ತಣ್ಣೀರೆರಚಿದೆ. ಹಾಗಾಗಿ, ಇದರ ಬಿಡುಗಡೆಯ ದಿನಾಂಕ ‌ಮುಂದಕ್ಕೆ‌ ಹೋಗಿದೆ.

ಇದು ದಳಪತಿಯ ಅಭಿಮಾನಿಗಳಿಗೂ‌ ನಿರಾಸೆ ಮೂಡಿಸಿದೆ. ಆದರೆ, ಚಿತ್ರದ ಟ್ರೇಲರ್‌ ಬಿಡುಗಡೆಗೊಳಿಸುವಂತೆ ಅಭಿಮಾನಿಗಳು ಚಿತ್ರತಂಡಕ್ಕೆ‌ ದುಂಬಾಲು ಬಿದ್ದಿದ್ದಾರೆ‌‌. ಹಾಗಾಗಿ, ಲಾಕ್ ಡೌನ್ ಅವಧಿ‌ ಮುಗಿದ ಬಳಿಕ ಟ್ರೇಲರ್‌ ಬಿಡುಗಡೆಗೊಳಿಸಿ ಅಭಿಮಾನಿಗಳ ಆಸೆ ಈಡೇರಿಸಲು ನಿರ್ಮಾಪಕರು‌ ನಿರ್ಧರಿಸಿದ್ದಾರಂತೆ. ಅದಕ್ಕಾಗಿ ಸೂಕ್ತ ದಿನಾಂಕದ‌ ಹುಡುಕಾಟದಲ್ಲಿದ್ದಾರೆ ಎಂಬುದು ಕಾಲಿವುಡ್ ಅಂಗಳದಿಂದ ಕೇಳಿಬರುತ್ತಿರುವ ಹೊಸ ಸುದ್ದಿ.

ಬೇಸಿಗೆ ರಜೆಯ ಅವಧಿಯಲ್ಲಿ 'ಮಾಸ್ಟರ್' ಸಿನಿಮಾವನ್ನು ಬಿಡುಗಡೆಗೊಳಿಸಿ ಜನರನ್ನು ಚಿತ್ರಮಂದಿರದತ್ತ ಸೆಳೆಯಲು ಚಿತ್ರತಂಡ‌ ತೀರ್ಮಾನಿಸಿತ್ತು. ಈಗ ಬಿಡುಗಡೆಯ ದಿನಾಂಕ ಮುಂದೂಡಿಕೆಯಾಗಿದೆ. ಹೊಸ ದಿನಾಂಕ ಘೋಷಿಸುವುದು ನಿರ್ಮಾಪಕರಿಗೆ ತಲೆನೋವು‌ ತಂದಿದೆಯಂತೆ. ಯಾವುದಾದರೂ ಹಬ್ಬದ ವಾರಾಂತ್ಯದಲ್ಲಿ ಸಿನಿಮಾ ಬಿಡುಗಡೆಗೆ ಚಿತ್ರತಂಡ ಸಿದ್ಧತೆ‌ ನಡೆಸಿದೆ.

ADVERTISEMENT

ಈ ನಡುವೆಯೇ ‘ನಾವು ಬದುಕುವುದು‌ ಮುಖ್ಯ‌‌. ಸಂಭ್ರಮ ಇದ್ದೇ ಇರುತ್ತದೆ. ಸೂಕ್ತ‌ ದಿನದಂದು ‘ಮಾಸ್ಟರ್’ ಚಿತ್ರ ತೆರೆ ಕಾಣಲಿದೆ. ಅಲ್ಲಿಯವರೆಗೂ ಮನೆಯಲ್ಲಿದ್ದು, ಆರೋಗ್ಯದ ಬಗ್ಗೆ ಗಮನಹರಿಸಿ’ ಎಂದು‌ ನಿರ್ದೇಶಕ ಲೋಕೇಶ್ ಕನಕರಾಜ್ ಟ್ವೀಟ್‌‌‌ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಈ ಚಿತ್ರದಲ್ಲಿ ವಿಜಯ್ ಅವರದ್ದು ಕಾಲೇಜು ಪ್ರೊಫೆಸರ್ ಪಾತ್ರ. ಗ್ಯಾಂಗ್‌ಸ್ಟರ್ ವಿರುದ್ಧ ಅವರು ಸೆಣಸಾಟ ನಡೆಸಲಿದ್ದಾರಂತೆ‌‌. ಅವರಿಗೆ‌ ಮಾಳವಿಕಾ‌ ಮೋಹನ್ ಜೋಡಿಯಾಗಿದ್ದಾರೆ. ವಿಜಯ್ ಸೇತುಪತಿ ಖಳನಟನಾಗಿ ಬಣ್ಣ ಹಚ್ಚಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.