ADVERTISEMENT

ವಿಶ್ವ ಆರ್ಥಿಕ ವೇದಿಕೆ: ನಟಿ ದೀಪಿಕಾ ಪಡುಕೋಣೆಗೆ ಕ್ರಿಸ್ಟಲ್ ಪ್ರಶಸ್ತಿ ಪ್ರದಾನ

ಏಜೆನ್ಸೀಸ್
Published 21 ಜನವರಿ 2020, 6:30 IST
Last Updated 21 ಜನವರಿ 2020, 6:30 IST
ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಕ್ರಿಸ್ಟಾಲ್ 2020 ಪ್ರಶಸ್ತಿ ಸ್ವೀಕರಿಸಿದ ನಟಿ ದೀಪಿಕಾ ಪಡುಕೋಣೆ.
ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಕ್ರಿಸ್ಟಾಲ್ 2020 ಪ್ರಶಸ್ತಿ ಸ್ವೀಕರಿಸಿದ ನಟಿ ದೀಪಿಕಾ ಪಡುಕೋಣೆ.   

ನವದೆಹಲಿ: ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರಿಗೆ ದಾವೋಸ್‌ನಲ್ಲಿ ಭಾನುವಾರ ವಿಶ್ವ ಆರ್ಥಿಕ ವೇದಿಕೆಯ ಕ್ರಿಸ್ಟಲ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

34 ವರ್ಷದ ದೀಪಿಕಾ ಅವರಿಗೆ ವಿಶ್ವ ಆರ್ಥಿಕ ವೇದಿಕೆಯ ವಿಶ್ವ ಕಲಾ ವೇದಿಕೆ ಅಧ್ಯಕ್ಷೆ ಮತ್ತು ಸಹ-ಸಂಸ್ಥಾಪಕಿ ಹಿಲ್ಡೆ ಶ್ವಾಬ್ ಅವರು ಪ್ರದಾನ ಮಾಡಿದರು.

ಖಿನ್ನತೆಯಿಂದ ಬಳಲುತ್ತಿದ್ದ ದೀಪಿಕಾ ಅವರು 2015ರಲ್ಲಿ ಅದರಿಂದ ಹೊರಬಂದಿದ್ದರು. ಅದೇ ಪ್ರೇರಣೆಯಿಂದ ‘ದಿ ಲೈವ್, ಲವ್, ಲಾಫ್ ಫೌಂಡೇಶನ್’ಅನ್ನು ಸ್ಥಾಪಿಸಿರುವ ಅವರು, ಈ ಮೂಲಕ ಮಾನಸಿಕ ಅಸ್ವಸ್ಥತೆಯನ್ನು ಎದುರಿಸುತ್ತಿರುವವರಿಗೆ ನೆರವಾಗುತ್ತಿದ್ದಾರೆ.

ADVERTISEMENT

ವಿಶ್ವ ಆರ್ಥಿಕ ವೇದಿಕೆಯ ಅಧಿಕೃತ ಟ್ವಿಟರ್ ಖಾತೆಯು ದೀಪಿಕಾ ಅವರ ಪ್ರಶಸ್ತಿ ಸ್ವೀಕಾರ ಭಾಷಣದ ತುಣುಕನ್ನು ಹಂಚಿಕೊಂಡಿದೆ. ತಮ್ಮ ಭಾಷಣದಲ್ಲಿ ದೀಪಿಕಾ, ಮಾನಸಿಕ ಆರೋಗ್ಯದ ಪ್ರಾಮುಖ್ಯತೆಯನ್ನುತೆರೆದಿಟ್ಟರು.

‘ನಮಗೆಲ್ಲರಿಗೂ ಗೊತ್ತಿರುವಂತೆ ಈ ವರ್ಷದ ವಿಶ್ವ ಆರ್ಥಿಕ ವೇದಿಕೆಯ ಆಶಯ ‘ಸುಸ್ಥಿರಮತ್ತು ಸಂಯೋಜಿತ ಜಗತ್ತಿಗಾಗಿ ಪಾಲ್ಗೊಳ್ಳುವಿಕೆ’. ಈ ಹಿಂದಿನ ವರ್ಷಗಳಿಗಿಂತಲೂ ಹೆಚ್ಚಿನದ್ದನ್ನು ನಾವು ಈ ವರ್ಷ ಸಾಧಿಸಲು, ಜನರಆದ್ಯತೆಗಳನ್ನು ಸ್ಪಷ್ಟವಾಗಿ ಗುರುತಿಸಿಕೊಳ್ಳುವುದು ಅಗತ್ಯ. ಇಂಥ ಪಟ್ಟಿಯಲ್ಲಿ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿರುವವರ ವಿಚಾರವೂ ಸೇರಿರಬೇಕು’ ಎಂದು ದೀಪಿಕಾ ಹೇಳಿದರು.

‘ಮಾನಸಿಕ ಆರೋಗ್ಯವು ನಮ್ಮೆದುರು ದೊಡ್ಡ ಸವಾಲಾಗಿ ನಿಂತಿದೆ. ಆದರೆ ಮಾನಸಿಕ ಸಮಸ್ಯೆಯೊಂದಿಗೆ ನನ್ನ ಪ್ರೀತಿ ಮತ್ತು ದ್ವೇಷದ ಸಂಬಂಧವು ಸಾಕಷ್ಟು ಕಳಿಸಿದೆ. ಹಾಗೆ ಕಲಿತ ಪಾಠಗಳಲ್ಲಿ ತಾಳ್ಮೆಯಿಂದ ಇರುವುದೂ ಒಂದು. (ಇಂಥ ಸಮಸ್ಯೆ ಎದುರಿಸುತ್ತಿರುವವರು) ನೀವು ಒಬ್ಬರೇ ಅಲ್ಲ, (ನಿಮಗಾಗಿ) ಮುಖ್ಯವಾಗಿ ಸಾಕಷ್ಟು ಭರವಸೆಗಳಿವೆಎಂಬುದನ್ನು ಇಂಥವರಿಗೆ ಮನಗಾಣಿಸಬೇಕಿದೆ ಎಂದು ನುಡಿದರು.

‘ಜಗತ್ತಿನಲ್ಲಿ ಏನೆಲ್ಲಾ ಆಗಿದೆಯೋ ಅದು ಭರವಸೆಯಿಂದ ಆಗಿದೆ’ ಎಂಬ ಮಾರ್ಟಿನ್ ಲೂಥರ್‌ ಕಿಂಗ್ ಭಾಷಣದೊಂದಿಗೆ ದೀಪಿಕಾ ತಮ್ಮ ಮಾತು ಮುಗಿಸಿದರು.

ಭಾನುವಾರ ರಾತ್ರಿ, ದೀಪಿಕಾ ಪ್ರಶಸ್ತಿಯೊಂದಿಗಿನ ತಮ್ಮ ಚಿತ್ರವನ್ನು ‘ಕ್ರಿಸ್ಟಲ್ ಪ್ರಶಸ್ತಿ 2020ಕ್ಕಾಗಿ ಕೃತಜ್ಞತೆಗಳು’ ಎಂಬ ಒಕ್ಕಣೆಯೊಂದಿಗೆ ಹಂಚಿಕೊಂಡಿದ್ದಾರೆ. ಪತಿ ರಣವೀರ್ ಸಿಂಗ್ ಕೂಡ ಕಮೆಂಟ್ ಮಾಡಿದ್ದು, ‘ಅದ್ಭುತ! ನೀನು ನನ್ನನ್ನು ಬಹಳ ಹೆಮ್ಮೆ ಪಡುವಂತೆ ಮಾಡಿರುವೆ’ಎಂದು ಬರೆದಿದ್ದಾರೆ.

ದೀಪಿಕಾ ಪಡುಕೋಣೆ ಅವರು ಮೇಘನಾ ಗುಲ್ಜಾರ್ ನಿರ್ದೇಶನದ, ತಮ್ಮದೇ ನಿರ್ಮಾಣದ ಛಪಾಕ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಆಸಿಡ್ ದಾಳಿಯಿಂದ ಬದುಕುಳಿದ ಮಾಲತಿ ಎಂಬ ಪಾತ್ರದಾರಿಯ ಕಥೆ ಮತ್ತು ನ್ಯಾಯಕ್ಕಾಗಿ ಆಕೆಯ ಹೋರಾಟವನ್ನು ತೋರಿಸುತ್ತದೆ. ಆಸಿಡ್ ದಾಳಿಯಿಂದ ಬದುಕುಳಿದ ಲಕ್ಷ್ಮಿ ಅಗರ್ವಾಲ್ ಎಂಬವರ ಜೀವನಾಧರಿತ ಸಿನಿಮಾವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.