‘ಕವಲುದಾರಿ’, ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ನಿರ್ದೇಶಕ ಹೇಮಂತ್ ಎಂ.ರಾವ್ ನಿರ್ದೇಶನದ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾದ ಶೂಟಿಂಗ್ ಬೆಂಗಳೂರಿನಲ್ಲಿ ನಡೆಯುತ್ತಿದೆ. ಇದೀಗ ಈ ಸಿನಿಮಾ ಅಂಗಳಕ್ಕೆ ಡಬ್ಲ್ಯುಡಬ್ಲ್ಯುಇ ಸೂಪರ್‌ಸ್ಟಾರ್ ಸುಖ್ವಿಂದರ್ ಸಿಂಗ್ ಗ್ರೆವಾಲ್ ಪ್ರವೇಶಿಸಿದ್ದಾರೆ.
7.2 ಅಡಿ ಎತ್ತರವಿರುವ ಸುಖ್ವಿಂದರ್, ನಟ ಶಾರುಖ್ ಖಾನ್ ನಟನೆಯ ‘ಜವಾನ್’ ಹಾಗೂ ಆರ್ಯನ್ ಖಾನ್ ನಿರ್ದೇಶನದ ‘ಬ್ಯಾಡ್ಸ್ ಆಫ್ ಬಾಲಿವುಡ್’ನಲ್ಲಿ ನಟಿಸಿದ್ದಾರೆ. ಇದೀಗ ಸ್ಯಾಂಡಲ್‌ವುಡ್‌ಗೆ ಹೆಜ್ಜೆ ಇಟ್ಟಿದ್ದಾರೆ. ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಬಿರುಸಿನಿಂದ ನಡೆಯುತ್ತಿದ್ದು, ಸುಖಿ ಪಾತ್ರದ ಬಗ್ಗೆ ಮಾತನಾಡಿರುವ ಹೇಮಂತ್, ‘ನಮಗೆ ಭಯಾನಕವಾಗಿ ಕಾಣುವ ವ್ಯಕ್ತಿತ್ವದ ಪಾತ್ರಧಾರಿ ಬೇಕಿತ್ತು. ದೊಡ್ಡ ಪರದೆಯನ್ನೂ ಚಿಕ್ಕದಾಗಿ ಕಾಣುವಂತೆ ಮಾಡಿದ ವ್ಯಕ್ತಿ ಇವರು. ಅವರು ನೋಡಲಷ್ಟೇ ದೈತ್ಯ. ಅತ್ಯಂತ ಸೌಮ್ಯ ಸ್ವಭಾವದ ವ್ಯಕ್ತಿಗಳಲ್ಲಿ ಅವರೂ ಒಬ್ಬರು’ ಎಂದಿದ್ದಾರೆ.
‘ದಕ್ಷಿಣದ ಚಿತ್ರೋದ್ಯಮದ ಬಗ್ಗೆ ಬಹಳಷ್ಟು ಕೇಳಿದ್ದೇನೆ. ಇದೀಗ ಧನಂಜಯ ಮತ್ತು ಶಿವರಾಜ್‌ಕುಮಾರ್ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ಗೌರವ. ಕನ್ನಡ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಎದುರು ನೋಡುತ್ತಿದ್ದೇನೆ. ಬೆಂಗಳೂರಿನ ವಾತಾವರಣವನ್ನು ನಾನು ಹೆಚ್ಚು ಆನಂದಿಸಿದೆ. ನಾನು ನಗರವನ್ನು ಹೆಚ್ಚು ನೋಡಿಲ್ಲ, ಆದರೆ ಇಲ್ಲಿನ ಆಹಾರವನ್ನು ಆನಂದಿಸಿದೆ. ಅದಕ್ಕಾಗಿಯೇ ನಾನು ಜಿಮ್‌ನಲ್ಲಿ ಹೆಚ್ಚು ಸಮಯ ಕಳೆಯಬೇಕಾಯಿತು’ ಎಂದಿದ್ದಾರೆ ಸುಖ್ವಿಂದರ್.
ಈಗಾಗಲೇ ಸುಖ್ವಿಂದರ್ ಅವರ ಪಾತ್ರದ ಭಾಗದ ಆ್ಯಕ್ಷನ್ ಸೀಕ್ವೆನ್ಸ್ ಮುಕ್ತಾಯಗೊಂಡಿದೆ. ವೈಶಾಖ್ ಜೆ.ಗೌಡ ಅವರ ‘ವೈಶಾಖ್ ಜೆ.ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ರೆಟ್ರೋ ಶೈಲಿಯಲ್ಲಿ ಈ ಸಿನಿಮಾವಿದ್ದು, ಚರಣ್ ರಾಜ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.