ADVERTISEMENT

ಪ್ರಧಾನಿ ಮೋದಿ ಭೇಟಿ ಬಳಿಕ ಯಶ್‌, ರಿಷಬ್‌ ಹೇಳಿದ್ದೇನು?

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2023, 10:54 IST
Last Updated 13 ಫೆಬ್ರುವರಿ 2023, 10:54 IST
ಮೋದಿ ಅವರೊಂದಿಗೆ ಯಶ್‌
ಮೋದಿ ಅವರೊಂದಿಗೆ ಯಶ್‌   

ಬೆಂಗಳೂರು: ಏರೋ ಇಂಡಿಯಾ–2023ರ ಉದ್ಘಾಟನೆಗಾಗಿ ಭಾನುವಾರ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ರಾಜಭವನದಲ್ಲಿ ನಟರಾದ ಯಶ್‌ ಹಾಗೂ ರಿಷಬ್‌ ಶೆಟ್ಟಿ ಅವರನ್ನು ಭೇಟಿಯಾಗಿದ್ದರು. ಈ ಭೇಟಿ ಬಳಿಕ ಇಬ್ಬರೂ ನಟರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

10–12 ನಿಮಿಷಗಳ ಕಾಲ ರಿಷಬ್‌, ಯಶ್‌, ನಟಿ ಶ್ರದ್ಧಾ ಜೈನ್‌, ನಿರ್ಮಾಪಕ ವಿಜಯ್‌ ಕಿರಗಂದೂರು, ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರೊಂದಿಗೆ ಮೋದಿ ಮಾತುಕತೆ ನಡೆಸಿದ್ದರು. ಇದಾದ ಬಳಿಕ ಅವರು ಹಂಚಿಕೊಂಡ ಅನುಭವವನ್ನು ಮೋದಿ ಅವರ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದೆ.

‘ಇದು ನನ್ನ ಕನಸು ನನಸಾದ ಕ್ಷಣ. ಪ್ರಧಾನ ಮಂತ್ರಿ ಮೋದಿಯವರನ್ನು ನಾನು ಮಹಾನ್‌ ನಾಯಕರಾಗಿ ಕಾಣುತ್ತೇನೆ. ಅವರನ್ನು ಭೇಟಿಯಾಗಿ ಖುಷಿಯಾಗಿದೆ. ಕನ್ನಡ ಚಿತ್ರರಂಗ ಹಾಗೂ ಭಾರತೀಯ ಚಿತ್ರರಂಗದಲ್ಲಿ ಏನಾಗುತ್ತಿದೆ, ಬೇಕಾದ ಸೌಲಭ್ಯಗಳ ಬಗ್ಗೆ ಮಾತುಕತೆ ವೇಳೆ ಚರ್ಚೆಯಾಗಿದೆ. ಮುಂದಿನ ದಿನಗಳಲ್ಲಿ ಇವುಗಳನ್ನು ಈಡೇರಿಸುವ ಬಗ್ಗೆ ಭರವಸೆಯನ್ನೂ ಅವರು ನೀಡಿದ್ದಾರೆ. ‘ಕಾಂತಾರ’ ಸಿನಿಮಾದ ಬಗ್ಗೆಯೂ ಮೋದಿ ಅವರು ಚರ್ಚೆ ನಡೆಸಿದರು. ಮಣ್ಣಿನ ಕಥೆ, ಭಾರತೀಯ ಸಂಸ್ಕೃತಿಯ ಬಗ್ಗೆ ಸಿನಿಮಾ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ಹಲವು ಬಾರಿ ‘ಕಾಂತಾರ’ ಎನ್ನುವ ಪದ ಅವರ ಬಾಯಿಂದ ಬಂದಿದ್ದನ್ನು ಕೇಳಿ ಖುಷಿಪಟ್ಟೆ’ ಎಂದಿದ್ದಾರೆ ರಿಷಬ್‌.

ADVERTISEMENT

‘ನಮ್ಮೆಲ್ಲರ ಮಾತುಗಳೆಲ್ಲವನ್ನೂ ಬಹಳ ಸೂಕ್ಷ್ಮವಾಗಿ ಮೋದಿ ಅವರು ಕೇಳಿದರು. ನಂತರದಲ್ಲಿ ತಮ್ಮ ಮನಸ್ಸಿನಲ್ಲಿ ಇರುವ ವಿಷಯವನ್ನೂ, ಕನ್ನಡ ಚಿತ್ರರಂಗದ ಬಗ್ಗೆ ತಮಗಿದ್ದ ಮಾಹಿತಿ ಹಾಗೂ ಕಲ್ಪನೆ, ದೂರದೃಷ್ಟಿಯನ್ನು ಹಂಚಿಕೊಂಡರು. ಕನ್ನಡ ಚಿತ್ರರಂಗಕ್ಕೆ ಬೇಕಿರುವ ಸೌಲಭ್ಯಗಳ ಬಗ್ಗೆಯೂ ಕೇಳಿ, ಸರ್ಕಾರದಿಂದ ಏನಾಗಬೇಕು ಎಂದೂ ಮಾಹಿತಿ ಪಡೆದುಕೊಂಡರು. ಚಿತ್ರರಂಗವು ದೇಶಕ್ಕಾಗಿ ಏನು ಮಾಡಬಹುದು ಎನ್ನುವ ಬಗ್ಗೆಯೂ ಚರ್ಚೆ ಮಾಡುವ ಅವಕಾಶ ಸಿಕ್ಕಿತು. ಚಿತ್ರರಂಗದ ಬಗ್ಗೆ ಮೋದಿ ಅವರಿಗೆ ತಿಳಿದಿದ್ದ ಸೂಕ್ಷ್ಮ ವಿಷಯಗಳನ್ನು ಕಂಡು ಆಶ್ಚರ್ಯಪ‍ಟ್ಟೆ. ನಮ್ಮ ಕೆಲಸವನ್ನು ಅವರು ಶ್ಲಾಘಿಸಿದರು. ಎಂದಿನಂತೆ ಪ್ರಧಾನಿ ಅವರು ಬಹಳ ಸ್ಫೂರ್ತಿಯಾಗಿದ್ದರು’ ಎಂದು ಯಶ್‌ ಹೇಳಿದರು.

ಲಿಂಕ್‌:

https://www.youtube.com/watch?v=PQ1BKzGTNK0

https://www.youtube.com/watch?v=yEywALxkdFE

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.