ಇಂದು (ಜ.8) ನಟ ಯಶ್ ಜನ್ಮದಿನ. ಇದೇ ಸಂದರ್ಭದಲ್ಲಿ ಯಶ್ ಮುಂದಿನ ಸಿನಿಮಾ ‘ಟಾಕ್ಸಿಕ್’ನ ಗ್ಲಿಮ್ಸ್ ಬಿಡುಗಡೆಯಾಗಲಿದೆ. ನಾಯಕನ ಪಾತ್ರವನ್ನು ಈ ಮೂಲಕ ಚಿತ್ರತಂಡ ಪರಿಚಯಿಸಲಿದೆ.
ಸಿನಿಮಾ ಕೆಲಸದ ನಿಮಿತ್ತ ಯಶ್ ಬೆಂಗಳೂರಿನಿಂದ ಹೊರಗಿದ್ದಾರೆ. ಹೀಗಾಗಿ ಅಭಿಮಾನಿಗಳಿಗೆ ನಿರಾಸೆಯಾದರೂ ‘ಟಾಕ್ಸಿಕ್’ ಸಿನಿಮಾದ ಅಪ್‌ಡೇಟ್ ಹೊಸ ಹುರುಪು ನೀಡಿದೆ. ‘ಕೆ.ಜಿ.ಎಫ್. ಚಾಪ್ಟರ್–2’ ಸಿನಿಮಾ ಬಳಿಕ ಯಶ್ ನಟನೆಯ ಸಿನಿಮಾ ಇದಾಗಿದ್ದು, ಗೀತು ಮೋಹನ್‌ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ‘ಟಾಕ್ಸಿಕ್’ ಯಶ್ ನಟನೆಯ 19ನೇ ಸಿನಿಮಾವಾಗಿದೆ. 2023ರ ಡಿಸೆಂಬರ್ 8ರಂದು ಘೋಷಣೆಯಾಗಿದ್ದ ಈ ಚಿತ್ರದ ಚಿತ್ರೀಕರಣ ಆಗಸ್ಟ್ 8ರಂದು ಆರಂಭವಾಗಿತ್ತು. ಬೆಂಗಳೂರಿನ ಎಚ್‌ಎಂಟಿ ಮೈದಾನದಲ್ಲಿ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿ ಚಿತ್ರತಂಡ ಮುಂಬೈನಲ್ಲೂ ಚಿತ್ರೀಕರಣ ನಡೆಸಿದೆ.
‘A fairy tale for grown-ups’ ಎಂಬ ಅಡಿಬರಹವಿರುವ ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಾಣ ಮಾಡುತ್ತಿದೆ. 2025ರ ಏಪ್ರಿಲ್ 10ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.