ಯಶ್ ಜನ್ಮದಿನಕ್ಕೆ ‘ಟಾಕ್ಸಿಕ್’ ಬರ್ತಡೇ ಪೀಕ್ ಬಿಡುಗಡೆ: ಪಾರ್ಟಿ ಹಾರ್ಡ್!
ಬೆಂಗಳೂರು: ನಟ ಯಶ್ ಜನ್ಮದಿನದ ಪ್ರಯುಕ್ತ ಇಂದು ‘ಟಾಕ್ಸಿಕ್’ ಚಿತ್ರದ ಟೈಟಲ್ ಟೀಸರ್ (ಬರ್ತಡೇ ಪೀಕ್) ಬಿಡುಗಡೆಯಾಗಿದೆ.
59 ಸೆಕೆಂಡುಗಳ ಟೀಸರ್ ಅನ್ನು ಕೆವಿಎನ್ ಪ್ರೊಡಕ್ಷನ್ಸ್ ತನ್ನ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆ ಮಾಡಿದೆ. ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಈ ಮೂಲಕ ನಾಯಕನ ಪಾತ್ರವನ್ನು ಚಿತ್ರತಂಡ ಪರಿಚಯಿಸಿದೆ.
ಗ್ಯಾಂಗ್‌ಸ್ಟರ್ ಪಾತ್ರದಂತೆ ತೋರುವ ಯಶ್ ದೊಡ್ಡ ಪಾರ್ಟಿ ಒಂದಕ್ಕೆ ಪ್ರವೇಶ ಮಾಡಿ ಖಡಕ್ ಲುಕ್‌ನಲ್ಲಿ ಮಿಂಚಿದ್ದಾರೆ. ಹಿನ್ನೆಲೆ ಸಂಗೀತವೂ ಗಮನ ಸೆಳೆಯುವಂತಿದೆ.
ಸಿನಿಮಾ ಕೆಲಸದ ನಿಮಿತ್ತ ಯಶ್ ಬೆಂಗಳೂರಿನಿಂದ ಹೊರಗಿದ್ದಾರೆ. ಹೀಗಾಗಿ ಅಭಿಮಾನಿಗಳಿಗೆ ನಿರಾಸೆಯಾದರೂ ‘ಟಾಕ್ಸಿಕ್’ ಸಿನಿಮಾದ ಅಪ್‌ಡೇಟ್ ಹೊಸ ಹುರುಪು ನೀಡಿದೆ.
‘ಕೆ.ಜಿ.ಎಫ್. ಚಾಪ್ಟರ್–2’ ಸಿನಿಮಾ ಬಳಿಕ ಯಶ್ ನಟನೆಯ ಸಿನಿಮಾ ಇದಾಗಿದ್ದು, ಗೀತು ಮೋಹನ್‌ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ‘ಟಾಕ್ಸಿಕ್’ ಯಶ್ ನಟನೆಯ 19ನೇ ಸಿನಿಮಾವಾಗಿದೆ. 2023ರ ಡಿಸೆಂಬರ್ 8ರಂದು ಘೋಷಣೆಯಾಗಿದ್ದ ಈ ಚಿತ್ರದ ಚಿತ್ರೀಕರಣ ಆಗಸ್ಟ್ 8ರಂದು ಆರಂಭವಾಗಿತ್ತು.
ಬೆಂಗಳೂರಿನ ಎಚ್‌ಎಂಟಿ ಮೈದಾನದಲ್ಲಿ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿ ಚಿತ್ರತಂಡ ಮುಂಬೈನಲ್ಲೂ ಚಿತ್ರೀಕರಣ ನಡೆಸಿದೆ.
‘A fairy tale for grown-ups’ ಎಂಬ ಅಡಿಬರಹವಿರುವ ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಾಣ ಮಾಡುತ್ತಿದೆ. 2025ರ ಏಪ್ರಿಲ್ 10ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.