ADVERTISEMENT

ಫ್ಯಾಷನ್‌ ಲೋಕದಲ್ಲಿ ‘ಅಂಥದ್ದೇನಿಲ್ಲ’

ಸತೀಶ ಬೆಳ್ಳಕ್ಕಿ
Published 14 ನವೆಂಬರ್ 2018, 19:30 IST
Last Updated 14 ನವೆಂಬರ್ 2018, 19:30 IST
ಯಶಸ್ವಿನಿ ರಾಜ್
ಯಶಸ್ವಿನಿ ರಾಜ್   

ಮುಗ್ಧ ಭಾವ ತುಳುಕಿಸುವ ಬಟ್ಟಲು ಕಂಗಳು, ರ‍್ಯಾಂಪ್ ತುದಿಯಲ್ಲಿ ನಿಂತು ನಡು ಬಳುಕಿಸಿ, ನಗು ಸೂಸುವ ಕಂಗಳು, ನಿಲುವನ್ನು ಸಮರ್ಥಿಸುವ ನೀಳ ಕಾಲುಗಳು, ಮಾಡರ್ನ್ ಹಾಗೂ ಸಾಂಪ್ರದಾಯಿಕ ಎರಡೂ ಬಗೆಯ ದಿರಿಸುಗಳಿಗೂ ಹೊಂದುವ ದೇಹಸಿರಿ ಹೊಂದಿರುವ ರೂಪದರ್ಶಿ ಯಶಸ್ವಿನಿ ರಾಜ್.

ನಾಲ್ಕು ವರ್ಷಗಳಿಂದ ಫ್ಯಾಷನ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಯಶಸ್ವಿನಿ, ರ‍್ಯಾಂಪ್ ಮೇಲೆ ನಿಂತುಕೊಂಡೇ ಚಿತ್ರೋದ್ಯಮಕ್ಕೆ ಜಿಗಿಯುವ ಕನಸು ಹೊಸೆಯುತ್ತಿದ್ದಾರೆ. ಚಂದನವನದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಂದರೆ ಯಶಸ್ವಿನಿಗೆ ಪಂಚಪ್ರಾಣ. ಅವರ ಸಿನಿಮಾದಲ್ಲಿ ನಾಯಕನಟಿಯಾಗಿ ಕಾಣಿಸಿಕೊಳ್ಳಬೇಕು ಎಂಬುದು ಅವರ
ಹೆಬ್ಬಯಕೆ.

ಬಿಬಿಎಂ ಪದವೀಧರೆಯಾದ ಯಶಸ್ವಿನಿ ರಾಜ್ ಬೆಂಗಳೂರಿನಲ್ಲೇ ಹುಟ್ಟಿ, ಬೆಳೆದವರು. ಪದವಿ ಓದಿನ ಜತೆಗೆ ಮಾಡೆಲಿಂಗ್ ಸಖ್ಯದಿಂದಅಧಿಕೃತವಾಗಿ ಈ ಕ್ಷೇತ್ರಕ್ಕೆ ಬಂದಿದ್ದು ಫ್ಯಾಷನ್ ಗುರು ಪ್ರಸಾದ್ ಬಿದಪ್ಪ ಅವರ ಗರಡಿ ಮುಖೇನ.

ADVERTISEMENT

ಐದು ಅಡಿ ಒಂಬತ್ತು ಇಂಚು ಎತ್ತರದ, ಚೆಲುವೆಯನ್ನು ಫ್ಯಾಷನ್ ಕ್ಷೇತ್ರ ಕೈ ಹಿಡಿಯಿತು. ರ‍್ಯಾಂಪ್ ತುದಿಯಲ್ಲಿ ನಿಂತು, ಆತ್ಮವಿಶ್ವಾಸದಿಂದ ನಗು ಚೆಲ್ಲುತ್ತಿದ್ದ ಇವರ ಒನಪಿಗೆ ಅವಕಾಶಗಳ ದಿಡ್ಡಿಬಾಗಿಲು ತೆರೆದುಕೊಂಡಿತು. ಜನಪ್ರಿಯ ಬ್ರಾಂಡ್‌ಗಳಿಗೆ ರೂಪದರ್ಶಿಯಾದರು. ಬೆಂಗಳೂರು, ಮೈಸೂರು ಫ್ಯಾಷನ್ ವೀಕ್, ಬ್ಲೆಂಡಸರ್‌ ಪ್ರೈಡ್ ಫ್ಯಾಷನ್ ಟೂರ್ ಮೊದಲಾದ ಫ್ಯಾಷನ್ ಷೋಗಳಲ್ಲಿ ಸೂಪರ್ ಮಾಡೆಲ್ ಆಗಿ ಮಿಂಚಿದರು.

‘ಪದವಿ ಓದುವಾಗ ಅಂತರ ಕಾಲೇಜು ಫ್ಯಾಷನ್ ಶೋಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ಒಂದು ಸ್ಪರ್ಧೆಗಾಗಿ ನಾನೇ ಕೋರಿಯೊಗ್ರಾಫ್ ಮಾಡಿ, ಕಾಸ್ಟ್ಯೂಮ್ಸ್ ತಯಾರಿಸಿಕೊಂಡು ರ‍್ಯಾಂಪ್ ಷೋ ಮಾಡಿದ್ದೆ. ಅಲ್ಲಿ ನನಗೆ ಮೊದಲ ಬಹುಮಾನದ ಜತೆಗೆ, ಬೆಸ್ಟ್ ಮಾಡೆಲ್ ಟೈಟಲ್ ಸಿಕ್ಕಿತು. ಮಾಡೆಲಿಂಗ್‌ನಲ್ಲಿ ಭವಿಷ್ಯವಿದೆ. ಅದರಲ್ಲೇ ಮುಂದುವರಿಯಬೇಕು ಅಂತ ಅಸಿನಿತು. ನನ್ನ ಮನಸ್ಸಿನೊಳಗೆ ಫ್ಯಾಷನ್ ಜಗತ್ತಿನ ಬಗ್ಗೆ ಮೋಹ ಕುಡಿಯೊಡೆದಿದ್ದು ಹೀಗೆ...

‘ಮನೀಶ್ ಮಲ್ಹೋತ್ರ ಬ್ರೈಡಲ್ ಕಲೆಕ್ಷನ್ ಧರಿಸಿ, ರ‍್ಯಾಂಪ್‌ವಾಕ್ ಮಾಡಬೇಕು ಎಂಬುದು ಪ್ರತಿಯೊಬ್ಬ ರೂಪದರ್ಶಿಯ ಕನಸಾಗಿರುತ್ತದೆ. ನನಗೂ ಅಷ್ಟೇ’ ಎನ್ನುತ್ತಾರೆ ಅವರು.

ದೇಶದೆಲ್ಲೆಡೆ ಮೀ ಟೂ ಅಭಿಯಾನ ಜೋರಾಗಿದೆ. ಫ್ಯಾಷನ್ ಕ್ಷೇತ್ರದಲ್ಲಿ ನಿಮಗೂ ‘ಅಂತಹ’ ಅನುಭವ ಆಗಿದೆಯೇ ಎಂಬ ಪ್ರಶ್ನೆಗೆ ಯಶಸ್ವಿನಿ ರಾಜ್ ಉತ್ತರಿಸಿದ್ದು ಹೀಗೆ:

‘ನಾಲ್ಕು ವರ್ಷಗಳಿಂದ ನಾನು ಫ್ಯಾಷನ್ ಇಂಡಸ್ಟ್ರಿಯಲ್ಲಿ ಇದ್ದೇನೆ. ವೈಯಕ್ತಿವಾಗಿ ನಾನು ‘ಅಂತಹ’ ಸಂದರ್ಭವನ್ನು ಇದುವರೆಗೂ ಎದುರಿಸಿಲ್ಲ. ಕೆಲಸದ ಬಗ್ಗೆ ಶ್ರದ್ಧೆ, ಪ್ರೀತಿ ಬೆಳೆಸಿಕೊಂಡಿರುವ ಜನರು ಯಾವತ್ತಿಗೂ ಆ ರೀತಿ ನಡೆದುಕೊಳ್ಳುವುದಿಲ್ಲ. ಅವಕಾಶ ಕೊಡುತ್ತೇನೆ ಎಂದು ಹೇಳಿ ದುರುಪಯೋಗ ಮಾಡಿಕೊಳ್ಳುವುದಿಲ್ಲ. ಇಂಡಸ್ಟ್ರಿಯಲ್ಲಿದ್ದುಕೊಂಡು ಶೋ-ಆಫ್ ಮಾಡುವ ಕೆಲವರು ಮಾತ್ರ ಇಂತಹ ಕೃತ್ಯ ಎಸಗುತ್ತಾರೆ ಎನ್ನುವುದು ನನ್ನ ಅಭಿಪ್ರಾಯ. ಈವರೆಗೆ ಸಾಕಷ್ಟು ಜನ ವಸ್ತ್ರ ವಿನ್ಯಾಸಕರು, ಕೋ- ಆರ್ಡಿನೇಟರ್ಸ್ ಜತೆಗೆ ಬೆಂಗಳೂರು, ಮುಂಬೈ, ಚೆನ್ನೈ, ಕೊಚ್ಚಿ, ಹೈದರಾಬಾದ್‌ನ ಷೋಗಳಲ್ಲಿ ಕೆಲಸ ಮಾಡಿದ್ದೇನೆ, ಅವರೆಲ್ಲರೂ ತುಂಬ ಪ್ರೊಫೆಷನಲ್. ಫ್ಯಾಷನ್ ಕ್ಷೇತ್ರ ತುಂಬ ಚೆನ್ನಾಗಿದೆ. ಇಲ್ಲೀವರೆಗೆ ನನಗೆ ಯಾವುದೇ ಕೆಟ್ಟ ಅನುಭವ ಆಗಿಲ್ಲ’.

‘ಹೊಸ ಬಗೆಯಲ್ಲಿ ಯೋಚಿಸಿ, ಉತ್ಕೃಷ್ಟವಾಗಿರುವಂತಹದ್ದನ್ನು ಏನು ಕೊಡುತ್ತೇವೋ ಅದೇ ಫ್ಯಾಷನ್. ಇನ್ನೊಬ್ಬರನ್ನು ಅನುಕರಿಸಬಾರದು, ನಾವೇ ಟ್ರೆಂಡ್ ಸೆಟ್ಟರ್ ಆಗಬೇಕು. ದೇಹ ಮತ್ತು ಮನಸ್ಸಿಗೆ ಆರಾಮದಾಯಕ ಅನುಭೂತಿ ನೀಡುವ ದಿರಿಸುಗಳನ್ನು ಧರಿಸಬೇಕು’ ಎಂಬುದೇ ಯಶಸ್ವಿನಿ ಅವರ ಫ್ಯಾಷನ್ ಮಂತ್ರ.

‘ನಿರಂತರವಾಗಿ ಷೋಗಳು ಇದ್ದಾಗ ಕಟ್ಟುನಿಟ್ಟಾಗಿ ವರ್ಕೌಟ್ ಸಾಧ್ಯವಾಗುವುದಿಲ್ಲ. ಅಂತಹ ಸಮಯದಲ್ಲಿ ನಾನು ಡಯೆಟ್‌ನಲ್ಲಿಯೇ ಸರಿದೂಗಿಸಿಕೊಂಡು ಹೋಗುತ್ತೇನೆ. ಹಣ್ಣು, ಜ್ಯೂಸ್, ತರಕಾರಿ, ನೀರು ಹೆಚ್ಚಾಗಿ ಸೇವಿಸುತ್ತೇನೆ. ಗ್ರೀನ್ ಟೀ ಕುಡಿಯುತ್ತೇನೆ. ವರ್ಕೌಟ್ ಅಂತ ಬಂದಾಗ ಬೆಳಿಗ್ಗೆ ಜಾಗಿಂಗ್ ಮಾಡುತ್ತೇನೆ. ಹತ್ತು ನಿಮಿಷ ಕಾರ್ಡಿಯೋ ಮಾಡುತ್ತೇನೆ’ ಎಂದು ತಮ್ಮ ಚೆಲುವಿನ ಗುಟ್ಟು ಬಿಟ್ಟುಕೊಡುತ್ತಾರೆ ಅವರು.

‘ನಾನು ಕನ್ನಡದ ಹುಡುಗಿ, ಹಾಗಾಗಿ, ನನ್ನ ಮೊದಲ ಆದ್ಯತೆ ಏನಿದ್ದರೂ ಕನ್ನಡ ಸಿನಿಮಾಗಳಿಗೆ ಮಾತ್ರ. ನನ್ನ ಡೆಬ್ಯೂ ಸಿನಿಮಾ ಅತ್ಯುತ್ತಮವಾಗಿ ಇರಬೇಕು ಎಂಬುದು ನನ್ನ ಆಸೆ. ಅದಕ್ಕಾಗಿ ಕಾಯುತ್ತಿದ್ದೇನೆ. ‘ದಿ ಬೆಸ್ಟ್’ ಎನಿಸುವಂತಹ ಪ್ರದರ್ಶನ ಕೊಡಬೇಕು. ನನಗೆ ಕನಸಿನ ಪಾತ್ರ ಅಂತ ಯಾವುದೂ ಇಲ್ಲ. ಪಾತ್ರ ಯಾವುದಾದರೂ ಅದಕ್ಕೆ ಭಾವ ತುಂಬಿ ನಟಿಸಬೇಕು ಎಂಬುದಷ್ಟೇ ನನ್ನ ನಂಬಿಕೆ, ಸಿನಿಮಾದಲ್ಲಿ ನಟಿಸಬೇಕು ಎಂಬುದೇ ನನ್ನ ಡ್ರೀಂ’ ಎನ್ನುತ್ತಾರೆ ಯಶಸ್ವಿನಿ ರಾಜ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.