ADVERTISEMENT

ನಿರೀಕ್ಷೆ ಹುಸಿಗೊಳಿಸಿದ ಜೀರೊ: ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಕ್ಷಕರ ಗರಂ ಮಾತು

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2018, 8:35 IST
Last Updated 21 ಡಿಸೆಂಬರ್ 2018, 8:35 IST
   

ಬೆಂಗಳೂರು:ಸಾಲು ಸಾಲು ಸೋಲಿನ ರುಚಿ ಕಂಡಿದ್ದ‘ಬಾಲಿವುಡ್ ಬಾದ್​ಷಾ’ ಶಾರುಖ್ ಖಾನ್​ ಜೀರೊ ಮೇಲೆ ಬಹಳಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಅವರಷ್ಟೇ ಅಲ್ಲ, ಅವರ ಅಭಿಮಾನಿಗಳೂ ಸಹ ಜೀರೊಕ್ಕಾಗಿ ಕಾತರದಿಂದ ಕಾಯುತ್ತಿದ್ದರು. ಆದರೆ, ಸಿನಿಮಾ ನೋಡಿದ ಪ್ರಕ್ಷೇಕರು ಮಾತ್ರ ಫುಲ್‌ ಗರಂ ಆಗಿದ್ದಾರೆ.

ಕೆ.ಜಿ.ಎಫ್‌ ವರ್ಸಸ್‌ ಜಿರೋ ಎಂದೇ ಬಿಂತವಾಗಿದ್ದ ಸಿನಿಮಾ ಇಂದೇ (ಡಿ.21) ದೇಶದಾದ್ಯಂತ ಬಿಡುಗಡೆಯಾಗಿದೆ.ಮೊದಲ ಬಾರಿಗೆ ಶಾರುಕ್‌ ಕುಳ್ಳನಾಗಿ ನಟಿಸಿರುವುದು ಈ ಚಿತ್ರದ ವಿಶೇಷ ಆಕರ್ಷಣೆ. ಯಾವುದಕ್ಕೂ ಕೇರ್‌ ಮಾಡದೇ ಸಾಧನೆ ಮಾಡುವ ಕುಬ್ಜದೇಹಿಯ ಪಾತ್ರದಲ್ಲಿ ಶಾರುಕ್‌ ಹಿಂದೆಂದಿಗಿಂತಲೂ ವಿಭಿನ್ನವಾಗಿ ಅಭಿನಯಿಸಿದ್ದಾರೆ.

ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸಿರುವ ಜನರು ನಿರ್ದೇಶಕಆನಂದ್‌ ಎಲ್‌. ರೈ ಮತ್ತು ಶಾರುಕ್‌ ಜೋಡಿ ನಿರಾಸೆ ಮೂಡಿಸಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಜೀರೊ ಸಿನಿಮಾ ನೋಡಿ ಟ್ವೀಟ್‌ ಮಾಡಿರುವ ಹಿತೇಶ್‌, ‘ಜಬ್‌ ಹ್ಯಾರಿ ಮೆಟ್‌ ಸೇಗಲ್‌ ಮತ್ತು ಜೀರೊ ಸಿನಿಮಾಗಳಲ್ಲಿ ಯಾವುದನ್ನು ಆಯ್ಕೆ ಮಾಡುತ್ತೀರಾ ಎಂದು ಕೇಳಿದರೆ, ಬಹುಷ್ಯಾ ನಾನು ಹಿಂದಿನ ಸಿನಿಮಾಗೆ ಮತ ನೀಡುತ್ತೇನೆ’ಎಂದಿದ್ದಾರೆ.

‘ಕೊನೆಯ 30–35 ನಿಮಿಷ ಮಾತ್ರ ಸಿನಿಮಾ ಚೆನ್ನಾಗಿದೆ. ಮೊದಲಾರ್ಧದಲ್ಲಿ ಭಾರಿ ಗೊಂದಲ ಮೂಡಿಸುವಂತಿದೆ. ಭಾವನಾತ್ಮಕ ದೃಶ್ಯಗಳೇ ಶಾರುಕ್‌ ಸಾಮರ್ಥ್ಯ ಎನ್ನುವುದು ಇಲ್ಲಿ ಮತ್ತೊಮ್ಮೆ ಸಾಬೀತಾಗಿದೆ’ ಎಂದು ಶಾರುಕ್‌ ಅಭಿಮಾನಿಯೊಬ್ಬರು ಟ್ವೀಟ್‌ ಮಾಡಿದ್ದಾರೆ.

‘ಜೀರೊ ಬಗ್ಗೆ ಒಂದು ಪದದಲ್ಲಿ ವಿಮರ್ಶಿಸಬೇಕೆಂದರೆ ಅದನ್ನು ಅಧ್ವಾನ ಎಂದು ಹೇಳಬಹುದು’ ಎಂದು ಸಿನಿಮಾ ವಿಮರ್ಶಕ ತರಣ್‌ ಆದರ್ಶ್‌ ಟ್ವೀಟ್‌ ಮಾಡಿದ್ದಾರೆ.

’ಈಗಷ್ಟೇ ಜೀರೊ ಸಿನಿಮಾವನ್ನು ನೋಡಿದೆ. ಬಹಳ ವರ್ಷಗಳ ನಂತರ ಶಾರುಕ್‌ ಖಾನ್‌ ನಟನೆಯ ಸಿನಿಮಾ ವೀಕ್ಷಿಸುವ ಆಸಕ್ತಿ ಬಂದಿತ್ತು. ಆದರೆ, ಕೊನೆಗೆ ಸಿಕ್ಕ ಫಲಿತಾಂಶ ಮಾತ್ರ ಅದೇ (ಜೀರೊ). ಅತ್ಯಂತ ನೀರಸವಾದ ಸಿನಿಮಾ. ಸಲ್ಮಾನ್ ಖಾನ್‌ ಈ ಸಿನಿಮಾದಿಂದ ಹೊರಹೋಗಿದ್ದರಲ್ಲಿ ಅರ್ಥವಿದೆ. ನನ್ನ ಹಣ ವ್ಯರ್ಥವಾಯಿತು‘ ಎಂದು ವಿಫುಲ್‌ ಎನ್ನುವವರು ಟ್ವೀಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.