ಈಗಾಗಲೇ ‘ಅಯ್ಯನ ಮನೆ’, ‘ಶೋಧ’ ವೆಬ್‌ಸರಣಿಗಳ ಮೂಲಕ ಸದ್ದು ಮಾಡಿರುವ ಜೀ5ನ ಮತ್ತೊಂದು ಕನ್ನಡ ವೆಬ್‌ಸರಣಿ ಪ್ರೇಕ್ಷಕರೆದುರಿಗೆ ಬರಲು ದಿನಾಂಕ ನಿಗದಿಯಾಗಿದೆ. ಅ.31ರಿಂದ ಈ ಸರಣಿ ಸ್ಟ್ರೀಮ್ ಆಗಲಿದ್ದು, ವಿಶೇಷವೇನೆಂದರೆ ನಟ ದಿವಂಗತ ಪುನೀತ್ ರಾಜ್‌ಕುಮಾರ್ ಎಐ ಮೂಲಕ ಜೀವತಳೆದಿದ್ದಾರೆ.
‘ಪಿಆರ್‌ಕೆ ಪ್ರೊಡಕ್ಷನ್ಸ್’ ಸಹಯೋಗದಲ್ಲಿ ‘ಮಾರಿಗಲ್ಲು’ ವೆಬ್‌ಸರಣಿ ನಿರ್ಮಾಣವಾಗಿದೆ. ಕನ್ನಡದ ಮೊಟ್ಟಮೊದಲ ರಾಜಮನೆತನ ಕದಂಬರ ರಾಜ ಮಯೂರವರ್ಮನಾಗಿ ಪುನೀತ್ ಇಲ್ಲಿ ಕಾಣಿಸಿಕೊಂಡಿದ್ದಾರೆ. ಕದಂಬರ ಸಿರಿ ಸಂಪತ್ತು ಹುಡುಕಿದರೆ ಮತ್ತೆ ಸಿಗಬಹುದೇ ಎನ್ನುವ ಪ್ರಶ್ನೆಯನ್ನೆತ್ತುತ್ತಾ ಈ ಸರಣಿಯ ಟೀಸರ್ ಬಿಡುಗಡೆಯಾಗಿದೆ. ನಟ ಧನಂಜಯ ನಿರೂಪಣೆ ಈ ಟೀಸರ್‌ಗಿದೆ. 4ನೇ ಶತಮಾನದ ಕದಂಬರ ಆಳ್ವಿಕೆಯ ಕಾಲದ ಕಥೆ ಇದರಲ್ಲಿ ಇರಲಿದೆ. ಕದಂಬರ ಕಾಲದ ನಿಧಿ ಹುಡುಕಲು ಹೊರಟ ಶಿರಸಿಯ ಹುಡುಗರ ಕಥೆಯನ್ನು ಇಲ್ಲಿ ಹೆಣೆಯಲಾಗಿದೆ. ಅಲ್ಲದೇ ಶಿರಸಿಯ ಪ್ರಖ್ಯಾತ ಬೇಡರ ವೇಷ ಈ ಸರಣಿಯಲ್ಲಿ ಕಾಣಬಹುದು.
‘ಮಾರಿಗಲ್ಲು’ ವೆಬ್‌ಸರಣಿಯಲ್ಲಿ ನಟರಾದ ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ ಮತ್ತು ಪ್ರವೀಣ್ ತೇಜ್ ನಟಿಸಿದ್ದಾರೆ. ಎ.ಎಸ್.ಸೂರಜ್, ಪ್ರಶಾಂತ್ ಸಿದ್ದಿ ಮತ್ತು ನಿನಾದ ಹೃತ್ಸಾ ತಾರಾಬಳಗದಲ್ಲಿದ್ದಾರೆ. ಈ ವೆಬ್‌ಸರಣಿಯನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿರ್ಮಿಸಿದ್ದು, ದೇವರಾಜ್ ಪೂಜಾರಿ ಬರೆದು ನಿರ್ದೇಶಿಸಿದ್ದಾರೆ. ಎಸ್.ಕೆ.ರಾವ್ ಛಾಯಾಚಿತ್ರಗ್ರಹಣ, ಎಲ್.ವಿ. ಮುತ್ತು ಮತ್ತು ಎಲ್.ವಿ. ಗಣೇಶ್ ಸಂಗೀತ ನಿರ್ದೇಶನ ಸರಣಿಗಿದೆ.
‘ಈ ಸರಣಿ ಅಪ್ಪು ಅವರ ಕನಸುಗಳಲ್ಲಿ ಒಂದನ್ನು ಪ್ರತಿಬಿಂಬಿಸುತ್ತದೆ. ಪುನೀತ್ ಯಾವಾಗಲೂ ನಮ್ಮ ಕಥೆಗಳನ್ನು ವೆಬ್‌ಸರಣಿ ಮೂಲಕ ಹೇಳಲು ಬಯಸುತ್ತಿದ್ದರು. ಈ ಕಥೆಗಳು ನಮ್ಮ ನೆಲದಲ್ಲಿ ಬೇರೂರಿದ್ದರೂ ಭಾವನೆಯಲ್ಲಿ ಅವು ಸಾರ್ವತ್ರಿಕ’ ಎನ್ನುತ್ತಾರೆ ಅಶ್ವಿನಿ ಪುನೀತ್ ರಾಜ್‌ಕುಮಾರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.