ADVERTISEMENT

ಮತ್ತೆ ಸದ್ದು ಮಾಡುತ್ತಿದೆ ಭೋಜರಾಜರ ಕಂಠಸಿರಿ

ಪ್ರದೀಶ್ ಎಚ್.ಮರೋಡಿ
Published 27 ಫೆಬ್ರುವರಿ 2020, 19:45 IST
Last Updated 27 ಫೆಬ್ರುವರಿ 2020, 19:45 IST
ಭೋಜರಾಜ ವಾಮಂಜೂರು
ಭೋಜರಾಜ ವಾಮಂಜೂರು   

ತುಳು ರಂಗಭೂಮಿಯ ಮೇರು ಕಲಾವಿದ ಭೋಜರಾಜ ವಾಮಂಜೂರು ಅವರು ನಾಲ್ಕು ವರ್ಷಗಳ ಹಿಂದೆ ಸ್ವರ ನೀಡಿದ್ದ ‘ಏಸ’ ತುಳು ಸಿನಿಮಾದ ‘ತುಳುನಾಡ ಪೆರ್ಮೆದ ಆನ್‌ಕಲೆ ಯಕ್ಷಗಾನ’ ಹಾಡು ತುಳುನಾಡಿನಲ್ಲಿ ಭಾರಿ ಸದ್ದು ಮಾಡಿತ್ತು. ಮದುವೆ, ಮೆಹಂದಿ ಇನ್ನಿತರ ಕಾರ್ಯಕ್ರಮಗಳಲ್ಲಿ ಇದೇ ಹಾಡು ಕೇಳುತ್ತಿತ್ತು. ಇದೀಗ ‘ಪೆಪ್ಪೆರೆರೆ ಪೆರೆರೆರೆ’ ಸಿನೆಮಾದ ಹಾಡೊಂದಕ್ಕೆ ಭೋಜರಾಜ ವಾಮಂಜೂರು ಸ್ವರ ನೀಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

‘ಅತಳ ವಿತಳ ಶೂರ, ಮರ್ವಾಯಿ ಮಗಧೀರಾ... ಉಗು ರುಡು ನೆಲ ಕೀರ.. ಕುಲಶೇಖರ’ ಎಂಬ ವಿಭಿನ್ನ ಹಾಡು ಕರಾವಳಿಯೆಲ್ಲೆಡೆ ಇದೀಗ ಕೇಳಿ ಬರುತ್ತಿದೆ. ಶೀಘ್ರದಲ್ಲೇ ಬಿಡುಗಡೆ ಆಗಲಿರುವ ಶೋಭರಾಜ್‌ ಪಾವೂರು ನಿರ್ದೇಶನದ ‘ಪೆಪ್ಪೆರೆರೆ ಪೆರೆರೆರೆ’ ಸಿನೆಮಾದ ಈ ಹಾಡಿಗೆ ಭೋಜರಾಜ ಅವರು ಕಂಠಸಿರಿ ನೀಡಿದ್ದಾರೆ. ಮೆಹಂದಿ ಕಾರ್ಯಕ್ರಮಗಳಲ್ಲಿ ಈ ಹಾಡು ಎಲ್ಲರ ಫೆವರಿಟ್‌ ಆಗುತ್ತಿದೆ.

ಯೂಟ್ಯೂಬ್‌ನಲ್ಲಿ ಈ ಹಾಡನ್ನು 2.65 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿ, 11 ಸಾವಿರಕ್ಕೂ ಅಧಿಕ ಮಂದಿ ಲೈಕ್‌ ಕೊಟ್ಟಿದ್ದಾರೆ. ಇದೊಂದು ರೀತಿಯಲ್ಲಿ ಸಿನಿಮಾದ ಪ್ರಚಾರ ಮಾಧ್ಯಮವಾಗಿಯೂ ಹೊರಹೊಮ್ಮಿದೆ. ಸಿನಿಮಾದ ಹಾಡಿಗೆ ತುಳು ಸಿನಿರಸಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ಚಿತ್ರತಂಡ ಕೂಡ ಖುಷಿಯಲ್ಲಿದೆ. ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರಲು ಸಿದ್ಧತೆ ನಡೆಸುತ್ತಿದೆ.

ADVERTISEMENT

‘ಬಲೇ ತೆಲಿಪಾಲೆ’ ಖ್ಯಾತಿಯ ಉಮೇಶ್ ಮಿಜಾರ್ ಅವರು ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಗುರು ಬಾಯಾರ್ ಅವರು ಸಂಗೀತ ನೀಡಿದ್ದಾರೆ. ಈ ಹಾಡು ‘ತಪಲೆ ಮಂಡೆದ ಕುಪುಲುಗು ಮದಿಮಾಲೊಂಜಿ ಬೋಡುಗೆ’ ಎಂಬ ಧ್ವನಿಯೊಂದಿಗೆ ಆರಂಭವಾಗುತ್ತಿದೆ. ಈ ಹಾಡಿನ ನೃತ್ಯವೂ ಆಕರ್ಷಕವಾಗಿ ಮತ್ತು ವಿಭಿನ್ನವಾಗಿ ಮೂಡಿಬಂದಿದೆ. ಅರವಿಂದ ಬೋಳಾರ್, ನವೀನ್ ಡಿ.ಪಡೀಲ್, ಭೋಜರಾಜ್ ವಾಮಂಜೂರು, ಸಾಯಿಕೃಷ್ಣ ಮುಂತಾದವರು ಹೆಜ್ಜೆ ಹಾಕಿದ್ದಾರೆ.

‘ಏಸ ಚಿತ್ರದ ಯಕ್ಷಗಾನದ ಹಾಡು ನನಗೆ ಉತ್ತಮ ಹೆಸರು ತಂದು ಕೊಟ್ಟಿತು. ನನ್ನ ನಿರೀಕ್ಷೆಗೂ ಮೀರಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದಾದ ಬಳಿಕ ತುಳು ಚಿತ್ರಕ್ಕೆ ಹಾಡಿದ ಎರಡನೇ ಹಾಡು ಇದು. ಇದು ಕೂಡ ಜನರಿಗೆ ಇಷ್ಟವಾಗಿರುವುದು ಖುಷಿಕೊಟ್ಟಿದೆ. ತುಂಬಾ ಮಂದಿ ಕರೆ ಮಾಡಿ ಅಭಿನಂದಿಸಿದ್ದಾರೆ. ಇದಕ್ಕಾಗಿ ಶೋಭರಾಜ್‌, ಉಮೇಶ್‌ ಮಿಜಾರು ಮತ್ತು ಗುರು ಬಾಯಾರ್‌ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎನ್ನುತ್ತಾರೆ ಭೋಜರಾಜ ವಾಮಂಜೂರು.

‘ನಾನು ಯಾವುದೇ ಸಂಗೀತ ಅಭ್ಯಾಸ ಮಾಡಿಲ್ಲ. ಸಂಗೀತದ ಗಂಧಗಾಳಿಯೂ ಇರಲಿಲ್ಲ. ಆದರೆ, ನಾಟಕಕ್ಕೆ ಬೇಕಿದ್ದ ಪದ್ಯಾವಳಿ ಬರೆಯುತ್ತಿದ್ದೆ. ಕನ್ನಡ ಚಿತ್ರಗೀತೆಗಳನ್ನು ತುಳುಗೆ ಭಾಷಾಂತರ ಮಾಡಿ ಸಾಹಿತ್ಯ ಬರೆಯುತ್ತಿದ್ದೆ. ಆಗ ನನ್ನ ಹೆಸರು ಕೆ.ಬಿ.ರಾಜ್‌. ಕೆತ್ತಿಕಲ್‌ ಎಂದಾಗಿತ್ತು. ನಂತರ ಆರ್ಕೆಸ್ಟ್ರಾ ತಂಡದಲ್ಲಿ ಹಿನ್ನೆಲೆ ಗಾಯನವನ್ನು ಹಾಡುತ್ತಿದ್ದೆ. ಅದಾದ ಬಳಿಕ ಯಕ್ಷಗಾನ, ನಾಟಕ, ಸಿನಿಮಾದಲ್ಲಿ ಬ್ಯುಸಿ ಆಗಿದ್ದರಿಂದ ಹಾಡಿನ ಕಡೆ ಗಮನ ಕೊಟ್ಟಿರಲಿಲ್ಲ’ ಎಂದು ನೆನೆಪು ಮಾಡಿಕೊಳ್ಳುತ್ತಾರೆ ಭೋಜರಾಜ.

‘ಇದೀಗ ಯಾವುದೇ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋದರೂ ಹಾಡೊಂದನ್ನು ಹಾಡಲು ಜನರು ಬೇಡಿಕೆ ಇಡುತ್ತಾರೆ. ನನ್ನನ್ನು ಈ ಮಟ್ಟಕ್ಕೆ ಬೆಳೆಸಿದವರು ಅವರೇ. ಹೀಗಾಗಿ, ಅವರನ್ನು ಖುಷಿ ಪಡಿಸುವುದು ನನ್ನ ಧರ್ಮ ಎನ್ನುತ್ತಾ ಹಾಡುತ್ತೇನೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.