ಎರಡು ವರ್ಷಗಳ ಬಳಿಕ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುವ ‘ರಿಯಲ್ ಸ್ಟಾರ್’ ಉಪೇಂದ್ರ ಅಭಿನಯದ ‘ಐ ಲವ್ ಯು’ ಸಿನಿಮಾದ ಆಡಿಯೊ ಕಳೆದ ಭಾನುವಾರ ‘ಬೆಣ್ಣೆದೋಸೆ ನಗರಿ’ ದಾವಣಗೆರೆಯಲ್ಲಿ ಅದ್ದೂರಿಯಾಗಿ ಬಿಡುಗಡೆಗೊಂಡಿತು.
ದಾವಣಗೆರೆ ಜನ ತೋರಿದ ಅಭಿಮಾನಕ್ಕೆ ನಟ–ನಟಿಯರು, ಚಿತ್ರ ತಂಡದವರು ಬೆಣ್ಣೆಯಂತೆ ಕರಗಿದರು. ಉಪೇಂದ್ರ ಹಾಗೂ ನಟಿಯರಾದ ರಚಿತಾ ರಾಮ್, ಸೋನು ಗೌಡ ಅವರ ನೃತ್ಯಗಳಿಗೆ ಸಿನಿ ರಸಿಕರು ಹರ್ಷೋದ್ಗಾರದ ಮಳೆಗೆರೆದರು. ನಿರೂಪಕಿ ಅನುಶ್ರೀ ಮಾಡುತ್ತಿದ್ದ ಕೀಟಲೆಗಳಿಗೆ ಪಡ್ಡೆ ಹುಡುಗರು ಮನಸೋತರು. ಹುಡುಗರು ತೋರಿದ ಪ್ರೀತಿಗೆ ‘ಡಿಂಪಲ್ ಕ್ವೀನ್’ ರಚಿತಾ ‘ಬೋಲ್ಡ್’ ಆದರು!
‘ಐ ಲವ್ ಯು’ ಸಿನಿಮಾದಲ್ಲಿ ಆರು ಹಾಡುಗಳಿವೆ. ಈಗಾಗಲೇ ಐದು ಹಾಡುಗಳ ಚಿತ್ರೀಕರಣ ಮುಗಿದಿದೆ. ಆಡಿಯೊ ಹಕ್ಕು ಸ್ವಾಮ್ಯವನ್ನು ‘ಲಹರಿ’ ಸಂಸ್ಥೆ ಪಡೆದಿದೆ. ಡಾ. ಕಿರಣ್ ತೋಟಂಬೈಲು ಸಂಗೀತ ನಿರ್ದೇಶಕರಾಗಿದ್ದು, ಇದು ಅವರ ಚೊಚ್ಚಲ ಸಿನಿಮಾ. ‘ಒಂದಾನೊಂದು ಕಾಲದಲ್ಲಿ...’ ಹಾಡಿನ ಧ್ವನಿ ಸುರುಳಿ ಬಿಡುಗಡೆ ಮಾಡಲಾಯಿತು.
‘ಉಪೇಂದ್ರ ಮೆದುಳು ಹಾಗೂ ನನ್ನ ಹೃದಯ ಸೇರಿಕೊಂಡು ಈ ಸಿನಿಮಾ ನಿರ್ಮಿಸುತ್ತಿದ್ದೇವೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ಮಾಡುತ್ತಿರುವ ಸಿನಿಮಾವನ್ನು ಶೀಘ್ರದಲ್ಲೇ ಜನರ ಮುಂದೆ ಇಡುತ್ತೇವೆ’ ಎಂದು ಚಿತ್ರಕಥೆ, ಸಂಭಾಷಣೆಯನ್ನೂ ಬರೆದಿರುವ ನಿರ್ದೇಶಕಆರ್. ಚಂದ್ರು ಚುಟುಕಾಗಿ ಅನುಭವ ಹಂಚಿಕೊಂಡರು.
ಉಪೇಂದ್ರ ಜೊತೆ ಮೊದಲ ಬಾರಿಗೆ ಅಭಿನಯಿಸುತ್ತಿದ್ದೇನೆ. ಅವರೊಂದಿಗೆ ಕೆಲಸ ಮಾಡಿ ಸಾಕಷ್ಟು ವಿಷಯ ಕಲಿತೆ. ಇಂದಿನ ಯುವ ಪೀಳಿಗೆಯ ಸುತ್ತ ಇರುವ ಈ ಸಿನಿಮಾ ಅಚ್ಚುಕಟ್ಟಾಗಿ ಮೂಡಿಬರುತ್ತಿದೆ’ ಎಂದ ರಚಿತಾ ರಾಮ್, ಗುಳಿಕೆನ್ನೆಯ ನಗೆ ಬೀರಿದರು.
ಸಿನಿಮಾದ ‘ಒಂದಾನೊಂದು ಕಾಲದಲ್ಲಿ...’ ಹಾಡಿಗೆ ನೃತ್ಯ ಮಾಡುತ್ತ ವೇದಿಕೆ ಮೇಲೆ ಕಾಣಿಸಿಕೊಂಡ ಉಪೇಂದ್ರ, ‘ದಾವಣಗೆರೆ ಜನರ ಮನಸ್ಸು ಬೆಣ್ಣೆಯಂತೆ ಇದೆ. ನನ್ನ ‘A’ ಸಿನಿಮಾ 100ನೇ ದಿನದ ಕಾರ್ಯಕ್ರಮವನ್ನು ಇಲ್ಲೇ ಮಾಡಿದ್ದೆ. ದಾವಣಗೆರೆ ನನ್ನ ಅದೃಷ್ಟದ ತಾಣ. ಈಗಲೂ ನೀವೆಲ್ಲರೂ ನನಗೆ ಪ್ರೀತಿ ತೋರಿ ‘ಐ ಲವ್ ಯು’ ಹೇಳುತ್ತೀರಿ ಎಂಬ ವಿಶ್ವಾಸ ಇದೆ’ ಎಂದರು. ಆಗ ಅಭಿಮಾನಿಗಳೆಲ್ಲ ಕೈ ಮೇಲಕ್ಕೆ ಎತ್ತಿ, ಸಿನಿಮಾದಲ್ಲಿರುವ ‘ಐ ಲವ್ ಯು’ ಚಿಹ್ನೆಯನ್ನು ಮಾಡಿ ತೋರಿಸಿ ಪ್ರೀತಿಯ ಮಳೆಗರೆದರು.
ಸಂಗೀತ ನಿರ್ದೇಶಕ ಗುರುಕಿರಣ್ ಅವರು ಉಪೇಂದ್ರ ಅಭಿನಯದ ಸಿನಿಮಾ ಹಾಡುಗಳನ್ನು ಹೇಳಿ ರಂಜಿಸಿದರು. ಸುಮಾರು ಮೂರು ಗಂಟೆಗಳ ಕಾಲ ಚಿತ್ರ ತಂಡದವರು ಸಿನಿ ರಸಿಕರಿಗೆ ಸಂಗೀತ, ನೃತ್ಯದ ರಸದೌತಣ ಉಣಬಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.