ADVERTISEMENT

ಚರ್ವಿತ ಚರ್ವಣ ಲೋಕ (ಚಿತ್ರ: ಲೋಕವೆ ಹೇಳಿದ ಮಾತಿದು)

ಸಂದೀಪ ನಾಯಕ
Published 1 ಅಕ್ಟೋಬರ್ 2011, 19:30 IST
Last Updated 1 ಅಕ್ಟೋಬರ್ 2011, 19:30 IST
ಚರ್ವಿತ ಚರ್ವಣ ಲೋಕ (ಚಿತ್ರ: ಲೋಕವೆ ಹೇಳಿದ ಮಾತಿದು)
ಚರ್ವಿತ ಚರ್ವಣ ಲೋಕ (ಚಿತ್ರ: ಲೋಕವೆ ಹೇಳಿದ ಮಾತಿದು)   

ಈಗಾಗಲೇ ತಮಿಳು ಸಿನಿಮಾ ಒಂದರಲ್ಲಿ ನಟಿಸಿರುವ ನಾಯಕ ನಟ ರವಿತೇಜ ಕನ್ನಡದಲ್ಲಿ ಮೊದಲ ಬಾರಿಗೆ ನಟಿಸಿರುವ ಸಿನಿಮಾ `ಲೋಕವೆ ಹೇಳಿದ ಮಾತಿದು~. ಕನ್ನಡದಲ್ಲಿ ಹೊಸಬರ ಪ್ರವೇಶಕ್ಕೆ ರೌಡಿಗಳ ಕತೆಯೇ ಸೂಕ್ತ ಎಂಬ ನಂಬಿಕೆ ನಿರ್ದೇಶಕ ರಮಣ ಅವರನ್ನೂ ಬಿಟ್ಟಂತೆ ಕಾಣುವುದಿಲ್ಲ. ಅವರು, ಅಮಾಯಕ ನಾಯಕ ಭೂಗತ ಜಗತ್ತನ್ನು ಪ್ರವೇಶಿಸಿ ಅಲ್ಲೇ ನಾಶವಾಗುವ ಕತೆಯನ್ನು ಈಗಾಗಲೇ ಬಂದು ಹೋಗಿರುವ ಅನೇಕ ಭೂಗತ ಜಗತ್ತಿನ ಕತೆಯ ರೀತಿಯಲ್ಲೇ ಹೇಳಿ ಪ್ರೇಕ್ಷಕರನ್ನು ನಿರಾಶೆಯ ನೀರಿನಲ್ಲಿ ಅದ್ದಿದ್ದಾರೆ.

ಸಿನಿಮಾಕ್ಕೆ ನಿರ್ದೇಶಕ ರಮಣರ ಕತೆ, ಚಿತ್ರಕತೆ, ಸಂಭಾಷಣೆ ಇದೆ. ಬಡ ಕುಟುಂಬದ ಹುಡುಗ ತನ್ನ ತಾಯಿಯ ಮೇಲೆ ದುಷ್ಟರು ಹಲ್ಲೆ ಮಾಡಿದರು ಎಂಬ ಏಕೈಕ ಕಾರಣದಿಂದ ಅವರ ವಿರುದ್ಧ ತಿರುಗಿ ಬೀಳುತ್ತಾನೆ. ಇದು ಆರಂಭ. ಬಳಿಕ ಒಂದೊಂದಾಗಿ ಹೊಡೆದಾಟಗಳು ನಡೆಯುತ್ತಾ ಹೋಗುತ್ತವೆ. ಸರಣಿ ಹೊಡೆದಾಟಗಳಲ್ಲಿ ನಾಯಕ ಯಾವುದೇ ಕಾರಣಕ್ಕೂ ಸುಸ್ತಾಗುವುದಿಲ್ಲ. ರೌಡಿಗಳು ಮಾತ್ರ ನೆಲಕಚ್ಚುತ್ತಾರೆ. ಇಷ್ಟರಲ್ಲಿ ಪ್ರೇಕ್ಷಕ ಸುಸ್ತಾಗುತ್ತಾನೆ. ಈ ಸಾಮಾನ್ಯ ಕತೆಯನ್ನು ನಾಯಕನ ರೋಷದ, ಆವೇಶದ ಕತೆಯನ್ನಾಗಿ ಹೇಳಿದ್ದಾರೆ ನಿರ್ದೇಶಕ ರಮಣ. ಈ ರೋಷಕ್ಕೆ, ಆವೇಶಕ್ಕೆ ನಿರ್ದಿಷ್ಟ ಕಾರಣವೇನೂ ಇಲ್ಲ. ಸಿನಿಮಾಕ್ಕೆ ನೆಪಕ್ಕೊಂದು ಕತೆ ಎಂಬಂತೆ ಇದೆ.

ನಾಯಕ ರವಿತೇಜ ಹೊಸಬರಾದುದರಿಂದಲೊ ಏನೋ ತುಸು ಅಳುಕುತ್ತ, ಮುಖದಲ್ಲಿ ಭಾವನೆಗಳನ್ನು ವ್ಯಕ್ತಪಡಿಸದೆ ನಟಿಸಿದ್ದಾರೆ. ನಾಯಕಿ ಕೀರ್ತಿ ಕೂಡ ಈ ವಿಷಯದಲ್ಲಿ ನಾಯಕನ ಹಾಗೆಯೇ. ಖಳರಾಗಿ ಕಾಣಿಸಿಕೊಂಡಿರುವ ಪೆಟ್ರೋಲ್ ಪ್ರಸನ್ನ ಮತ್ತಿತರರ ಅರಚಾಟದಲ್ಲಿ, ದಿಕ್ಕೇ ಇರದ ಸಿನಿಮಾ ನಿರೂಪಣೆ ಪ್ರೇಕ್ಷಕನಿಗೆ ಕಡೆಗೂ ಗೊತ್ತಾಗುವುದಿಲ್ಲ. ಲೋಕದಲ್ಲಿ ಹಿಂಸೆಯಿಂದ ಏನನ್ನೂ ಗೆಲ್ಲಲಾಗುವುದಿಲ್ಲ. ಹಿಂಸಕರಿಗೆ ಶಿಕ್ಷೆ ಕಾದಿದೆ ಎಂಬ ಸಂದೇಶವನ್ನು ಹೇಳಲು ನಿರ್ದೇಶಕರು ಇಷ್ಟು ಸುತ್ತುಬಳಸಿನ ದಾರಿ ಹಿಡಿದಿದ್ದಾರೆ.

ವೆಂಕಟ್ ನಾರಾಯಣ್ ಸಿನಿಮಾಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಗೀತೆಗಳಿಗೂ ಮತ್ತು ಅವರ ಸಂಗೀತಕ್ಕೂ ಯಾವುದೇ ಸಂಬಂಧವಿಲ್ಲ. ಅವರ ಒಂದು ಹಾಡು `ರಾ ರಾ ರಾಮಾಪುರ~ ಮಾತ್ರ ಪಡ್ಡೆಗಳು ಇಷ್ಟಪಡುವಂತಿದೆ.

ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ಭೂಗತ ಜಗತ್ತಿನ ಕತೆಯನ್ನು ಹೇಳುವುದು ಕಷ್ಟದ್ದು. ಅದಕ್ಕೆ ರಾಮ್‌ಗೋಪಾಲ್ ವರ್ಮಾ, ಉಪೇಂದ್ರರಂಥ ಅಸಲು ಕಸುಬುದಾರರು ಬೇಕಾಗುತ್ತಾರೆ. ಇಲ್ಲಿ ಅಂಥ ಕಸುಬುಗಾರಿಕೆಯೇ ಕಾಣೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.