ADVERTISEMENT

ಚಿತ್ರ: ಸೂಪರ್ ಶಾಸ್ತ್ರಿ

ಪ್ರಜಾವಾಣಿ ವಿಶೇಷ
Published 10 ನವೆಂಬರ್ 2012, 19:30 IST
Last Updated 10 ನವೆಂಬರ್ 2012, 19:30 IST

ನವಿರು ಕಥೆಗೆ ಹಾಸ್ಯದ ಪೆಟ್ಟು!

ನಿರ್ಮಾಪಕ : ಜಿ. ರಾಮಚಂದ್ರನ್
ನಿರ್ದೇಶಕ : ರವಿರಾಜ್
ತಾರಾಗಣ : ಪ್ರಜ್ವಲ್ ದೇವರಾಜ್, ಹರಿಪ್ರಿಯಾ, ಬುಲೆಟ್ ಪ್ರಕಾಶ್, ಉಮಾಶ್ರೀ, ರಂಗಾಯಣ ರಘು, ಕೋಟೆ ನಾಗರಾಜ್, ಇತರರು.

ತೆಲುಗಿನ `ಸೀಮಾ ಶಾಸ್ತ್ರಿ~ ಚಿತ್ರದ ಕನ್ನಡ ರೂಪ `ಸೂಪರ್ ಶಾಸ್ತ್ರಿ~. ಚಿತ್ರದ ಶೀರ್ಷಿಕೆಯಲ್ಲಿಯೇ `ಸೂಪರ್~ ಎನ್ನುವ ವಿಶೇಷಣ ಇದೆ. ಸಿನಿಮಾ ನೋಡಿದ ನಂತರ ಸಹೃದಯರ ಪ್ರತಿಕ್ರಿಯೆ ಹೇಗಿರುತ್ತದೋ ಏನೋ ಎನ್ನುವ ಆತಂಕದಿಂದ ಈ ವಿಶೇಷಣವನ್ನು ಚಿತ್ರತಂಡ ಬಳಸಿದಂತಿದೆ!

ನಿರ್ದೇಶಕ ರವಿರಾಜ್ ಆರಿಸಿಕೊಂಡಿರುವ ಸಿದ್ಧ ಕಥೆಯಲ್ಲಿ ಹಾಸ್ಯದ ಸರಕು ಸಮೃದ್ಧವಾಗಿದೆ. ಚಿತ್ರದ ನಾಯಕ ಅರ್ಚಕರ ಮಗ. ಮನೆಯ ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಶಾಸ್ತ್ರಿಯದು ಕೆಂಪು ಬಾವುಟ. ಜಾತಿಯ ಹಂಗಿಲ್ಲದೆ, ಪ್ರೇಮಿಸಿ ಮದುವೆ ಆಗುವುದು ಆತನ ಸಂಕಲ್ಪ. ಸಾಧನೆಯ ಹಾದಿಯಲ್ಲಿ ಗೌಡರ ಮನೆ ಹುಡುಗಿ ಶಾಸ್ತ್ರಿಗೆ ಆರಾಧ್ಯ ದೇವತೆಯಂತೆ ಕಾಣಿಸುತ್ತಾಳೆ. ತನ್ನನ್ನು `ಕರೆಂಟ್~ ಜೊತೆ ಸಮೀಕರಿಸಿಕೊಳ್ಳುವ ಆ ಹುಡುಗಿ ಎದೆಗಾರ್ತಿ. ಈ ಇಬ್ಬರ ಪ್ರೇಮವೂ ಬಂಡಾಯವೂ ಮದುವೆಯೂ ಚಿತ್ರದ ಕಥೆ. ದೇವಸ್ಥಾನದಲ್ಲಿ ಶುರುವಾಗುವ ಪ್ರೇಮ `ದೇವಿ ಕೃಪೆ~ಯೊಂದಿಗೆ ಮುಂದುವರೆಯುತ್ತದೆ.

ಭಿನ್ನ ಧ್ರುವಗಳಂಥ ಎರಡು ಕುಟುಂಬಗಳಿಗೆ ಸೇರಿದ ತರುಣ ತರುಣಿಯಲ್ಲಿ ಅರಳುವ ಪ್ರೇಮಕಥೆಯಲ್ಲಿ ನವಿರುತನವಿದೆ. ಈ ನವಿರುತನವೇ ಶಾಸ್ತ್ರಿ ಸಿನಿಮಾಕ್ಕೆ ಶಕ್ತಿಮದ್ದು ಆಗಬೇಕಿತ್ತು. ಆದರೆ, ಯಡವಟ್ಟಾಗಿರುವುದು ಸಿನಿಮಾದ ಮರು ನಿರೂಪಣೆಯಲ್ಲಿ. ಅವಳ ತೊಡುಗೆಯನ್ನು ಇವಳಿಗಿಟ್ಟು ನೋಡಬಯಸುವ ಸೃಜನಶೀಲ ಕಸುಬುದಾರಿಕೆ ನಿರ್ದೇಶಕರಿಗೆ ಕೈ ಕೊಟ್ಟಿದೆ. ಇದರಿಂದಾಗಿ ಹಾಸ್ಯಚಿತ್ರ ಆಗಬೇಕಿದ್ದ `ಸೂಪರ್ ಶಾಸ್ತ್ರಿ~ ಹಾಸ್ಯಾಸ್ಪದ ಚಿತ್ರವಾಗಿದೆ.

ಸಿನಿಮಾದ ಮುಖ್ಯ ಸಮಸ್ಯೆ ಇರುವುದು ಚಿತ್ರಕಥೆಯಲ್ಲಿನ ತೆಲುಗು ಘಮವನ್ನು ಯಥಾವತ್ತು ಉಳಿಸಿಕೊಂಡಿರುವುದರಲ್ಲಿ. ಭಾವ, ವೇಷ, ಸನ್ನಿವೇಶ- ಎಲ್ಲದರಲ್ಲೂ ನಿರ್ದೇಶಕರು ಮೂಲಕ್ಕೆ ನಿಷ್ಠ. ನಿರ್ದೇಶಕರ ಈ `ಬದ್ಧತೆ~ ಪ್ರೇಕ್ಷಕರಿಗೆ ಅರಗಿಸಿಕೊಳ್ಳಲು ಕಷ್ಟವೆನ್ನಿಸುತ್ತದೆ.

ಸ್ವಂತಿಕೆಯಿಲ್ಲದ ಪಾತ್ರಗಳಲ್ಲಿ ನಟಿಸಿರುವ ನಾಯಕ ನಾಯಕಿ ಇಬ್ಬರೂ ಪ್ರೇಕ್ಷಕರ ಅನುಕಂಪಕ್ಕೆ ಅರ್ಹರು. ಶಾಸ್ತ್ರಿಯಾಗಿ ಪ್ರಜ್ವಲ್ ಸೂಪರ್ ಅನ್ನಿಸದೆ ಹೋದರೂ, ಸುಮಾರು ಎನ್ನಲಿಕ್ಕೆ ಅಡ್ಡಿಯೇನೂ ಇಲ್ಲ. ಹರಿಪ್ರಿಯಾ ಒಮ್ಮೆ ಕರೆಂಟು ಹೊಡೆಸುವಂತೆಯೂ ಇನ್ನೊಮ್ಮೆ ಕರೆಂಟು ಹೊಡೆಸಿಕೊಂಡಂತೆಯೂ ಕಾಣಿಸುತ್ತಾರೆ. ಬುಲೆಟ್ ಪ್ರಕಾಶ್ ಅವರ ಹಾಸ್ಯದಲ್ಲಿ ಕಚಗುಳಿ ಅಂಶವೇ ನಾಪತ್ತೆ! ಉಮಾಶ್ರೀ ಹಾಗೂ ರಂಗಾಯಣ ರಘು ಅವರಂಥ ಅನುಭವಿಗಳು ಕೂಡ ನಿರ್ದೇಶಕರ ಹಾಸ್ಯಪ್ರಜ್ಞೆಯ ಎದುರು ಪೇಲವವಾಗಿ ಕಾಣಿಸುತ್ತಾರೆ.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.