ADVERTISEMENT

ಮ್ಯಾಗಿ ನೋಡಿ; ದಿಕ್ಕಾಪಾಲಾಗಿ ಓಡಿ!

ಪದ್ಮನಾಭ ಭಟ್ಟ‌
Published 15 ಜೂನ್ 2018, 10:16 IST
Last Updated 15 ಜೂನ್ 2018, 10:16 IST
ಮ್ಯಾಗಿ ನೋಡಿ; ದಿಕ್ಕಾಪಾಲಾಗಿ ಓಡಿ!
ಮ್ಯಾಗಿ ನೋಡಿ; ದಿಕ್ಕಾಪಾಲಾಗಿ ಓಡಿ!   

ಸಿನಿಮಾ: ಮೇಘ ಅಲಿಯಾಸ್ ಮ್ಯಾಗಿ
ನಿರ್ಮಾಪಕ: ವಿನಯ್ ಕುಮಾರ್
ನಿರ್ದೇಶಕ: ವಿಶಾಲ್ ಪುಟ್ಟಣ್ಣ
ತಾರಾಗಣ: ತೇಜ್ ಗೌಡ, ನೀತು ಬಾಲ, ಸುಕೃತಾ ವಾಗ್ಲೆ

‘ಮೇಘ ಅಲಿಯಾಸ್ ಮ್ಯಾಗಿ’ ಚಿತ್ರದ ಕಥೆಯನ್ನು ಅತಿ ಸಂಕ್ಷಿಪ್ತವಾಗಿ ಹೀಗೆ ಹೇಳಬಹುದು: ನಾಯಕ ಸಿಗರೇಟು ಸೇದುತ್ತಾನೆ. ಆಮೇಲೆ ಕೋಪದಿಂದ ನೆಲಕ್ಕೆ ಬಿಸಾಕುತ್ತಾನೆ. ‘ಖಳ’ನಾಯಕಿ ಸಿಗರೇಟು ಸೇದುತ್ತಾಳೆ. ಕೋಪದಿಂದ ನೆಲಕ್ಕೆ ಬಿಸಾಕುತ್ತಾಳೆ. ಮತ್ತೆ ನಾಯಕ ಸಿಗರೇಟು ಸೇದುತ್ತಾನೆ. ಕೋಪದಿಂದ...

ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ಫಾರ್ವರ್ಡ್‌ ಮಾಡುವಂಥ ಹಲವು ‘ಮೆಸೇಜ್‌’ಗಳನ್ನೂ ನಿರ್ದೇಶಕರು ನೀಡಿದ್ದಾರೆ.

ADVERTISEMENT

ಅವುಗಳನ್ನು ಹೀಗೆ ಪಟ್ಟಿ ಮಾಡಬಹುದು: 1. ಹೆಣ್ಮಕ್ಕಳು ತಲೆತಗ್ಗಿಸಿ ನಡೆಯಬೇಕು; ಗಂಡಸರ ಥರ ವೇಷ ಮಾಡಿಕೊಂಡಿರಬಾರದು. ಯಾಕೆಂದರೆ ಯಾವ ಗಂಡಸನ್ನು ಇನ್ನೊಂದು ಗಂಡಸನ್ನು ಇಷ್ಟಪಡಲ್ಲ. 2. ಹುಡುಗರು ಹುಡುಗಿಯರನ್ನು ಲವ್ ಮಾಡಿ ಕೈಬಿಡಬಹುದು; ರೇಪ್‌ ಮಾಡಬಾರದು. 3.  ಹಾಗೇನಾದ್ರೂ ಹುಡುಗ ಕೈಕೊಟ್ಟು ಹೋಗಿ ಬೇರೆ ಮದುವೆ ಆದರೆ ಅವನ ಮೇಲೆ ಕೋಪ ಗೀಪ ಮಾಡಿಕೊಳ್ಳುವುದೆಲ್ಲ ಬಿಟ್ಟು ಹುಡುಗಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಬೇಕು. 4. ಹುಡುಗಿ ಸೀರೆ ಉಟ್ಟುಕೊಂಡು, ತುಟಿಗೆ ರಂಗು ಬಳಿದುಕೊಂಡು, ಹಣೆಗೆ ಬೊಟ್ಟನ್ನಿಟ್ಟು ‘ಹುಡುಗಿಯ ಹಾಗೆ’ ಕಾಣಿಸಿಕೊಳ್ಳುತ್ತಿರಬೇಕು. ಆಗ ಜಗತ್ತಿನ ಯಾವುದಾದರೂ ಮೂಲೆಯಿಂದ ಅವಳಿಗಾಗಿಯೇ ಹುಟ್ಟಿರುವ ಒಳ್ಳೆ ಹುಡುಗ ಸುಯ್ಯನೆ ಬಂದು ಟಪಕ್‌ ಎಂದು ಅವಳನ್ನು ಮದುವೆಯಾಗುತ್ತಾನೆ. 5. ಹೆಂಡತಿ ತುಂಡುಡುಗೆ ಉಟ್ಟು, ಮಳೆಯಲಿ ನೆಂದು ಕುಣಿದಾಡಬಹುದು. ಆದರೆ ಬೇರೆ ಹೆಣ್ಣುಮಕ್ಕಳು ಗೌರಮ್ಮನಾಗಿರಬೇಕು.

ಮೇಲಿನ ಘನ ಸಂದೇಶಗಳನ್ನು ವ್ಯಕ್ತಗೊಳಿಸುವ ಈ ಸಿನಿಮಾದ ಘನತೆಯನ್ನು ಎತ್ತಿತೋರಿಸುವಂಥ ಕೆಲವು ಸಂಭಾಷಣೆಗಳು ಹೀಗಿವೆ: ‘ಜೀನ್ಸ್‌ ಹಾಕಿಕೊಂಡು, ಗಂಡಸರ ಹಾಗೆ ಸಿಗರೇಟು ಸೇದ್ಕೊಂಡು, ಬೀದಿ ಬೀದಿ ಅಲೆದಾಡ್ತಾ ಇದ್ದೀಯಲ್ಲೇ...ಥೂ...’ (ಗಂಡಸರ ಹಾಗಿರುವುದು ‘ಥೂ...’ ಎನ್ನುವಷ್ಟು ನಿಕೃಷ್ಟವಾ ಎಂಬ ಪ್ರಶ್ನೆಗಳನ್ನೆಲ್ಲ ಕೇಳಬಾರದು). ‘ಗಂಡ್ಸಿನ ಥರ ಇದಿಯಲ್ಲೇ, ಯಾರಾದ್ರೂ ಗಂಡಸು ಇನ್ನೊಂದು ಗಂಡಸನ್ನೇ ಇಷ್ಟಪಡಕ್ಕಾಗತ್ತಾ?’, ‘ತಲೆಯೆತ್ತಿ ನಡೆಯೋಳು ಮ್ಯಾಗಿ, ತಲೆ ತಗ್ಸಿ ನಡೆಯೋಳು ಮೇಘ. ಇನ್ಮೇಲಾದ್ರೂ ತಲೆಗ್ಗಿಸಿ ನಡೆಯುವುದ ಕಲಿ. ನೀನು ಮೇಘ ಆಗಿಯೇ ಇರು’.

ಮೇಲಿನ ವಿವರಗಳೇ ಈ ಸಿನಿಮಾದ ಉದ್ದೇಶದ ಕುರಿತು ಹೇಳುತ್ತವೆಯಾದ್ದರಿಂದ ಪ್ರತ್ಯೇಕವಾಗಿ ವಿವರಿಸುವ ಅಗತ್ಯ ಇಲ್ಲ. ನೀತು ಬಾಲ ಅವರ ನಟನೆಗಿಂತ ಪ್ರಯಣಗೀತೆಯಲ್ಲಿನ ಮಾದಕತೆಯೇ ಕೊಂಚ ಸಂಚಲನ ಹುಟ್ಟಿಸುವ ಹಾಗಿದೆ. ಪ್ರೇಕ್ಷಕ ಗುರ್ತಿಸುತ್ತಾನೋ ಇಲ್ಲವೋ ಎಂಬ ಅಂಜಿಕೆಯಿಂದಲೋ ಏನೋ, ಸುಕೃತಾ ವಾಗ್ಲೆ ಮತ್ತು ತೇಜ್ ಗೌಡ ಇಬ್ಬರೂ ತಮ್ಮ ನಟನಾಪ್ರತಿಭೆಯನ್ನು ತೆರೆಯ ಮೇಲೆ ತಾವೇ ಪೈಪೋಟಿಗೆ ಬಿದ್ದು ಹೊಗಳಿಕೊಂಡಿದ್ದಾರೆ. ಅದನ್ನು ನಂಬುವುದಷ್ಟೇ ಅಲ್ಲ, ಸಹಿಸಿಕೊಳ್ಳುವುದೂ ಕಷ್ಟ...

ತಾಂತ್ರಿಕ ವಿಭಾಗಕ್ಕೆ ಬಂದರೆ ಹಿನ್ನೆಲೆ ಸಂಗೀತ ನೀಡಿರುವ ವಿನು ಮನಸು ಅವರದೇ ಮೇಲುಗೈ. ಉಳಿದೆಲ್ಲ ಅಂಶಗಳಿಗಿಂತ ಅವರ ಹಿನ್ನೆಲೆ ಸಂಗೀತ ಎಷ್ಟು ಮೇಲುಗೈ ಸಾಧಿಸಿದೆಯೆಂದರೆ ಸಂಭಾಷಣೆಗಳೂ ಸರಿಯಾಗಿ ಕೇಳಿಸದಷ್ಟು! ಕೆಲಸ ಇಲ್ಲದ ಹುಡುಗನ ಕೈಗೆ ಖಾಲಿ ಬೆಲ್ಲದ ಡಬ್ಬಿ ಮತ್ತು ಕೋಲು ಕೊಟ್ಟು ಕೂಡಿಸಿದ ಹಾಗೆ ಒಂದೇ ಸಮನೆ ಸಿಕ್ಕ ಸಿಕ್ಕ ವಾದ್ಯಗಳನ್ನೆಲ್ಲ ಬಗೆಬಗೆಯಾಗಿ ಬಡಿಯುತ್ತಲೇ ಇರುತ್ತಾರೆ. ಅತಿಶಯ ಜೈನ್‌ ಅವರ ಸಂಯೋಜನೆಯ ಹಾಡುಗಳಲ್ಲಿ ಸಾಹಿತ್ಯ ಕೇಳಿಸುವುದೇ ಇಲ್ಲ.

ಬಂಧನದಲ್ಲಿರುವ ನಾಯಕ ಒಂದು ದೃಶ್ಯದಲ್ಲಿ ಹೀಗೆ ಹೇಳುತ್ತಾನೆ: ‘ಇಷ್ಟೊತ್ತು ಅವ್ಳು ಗೋಳು ಹೊಯ್ಕಂಡ್ಳು, ಈಗ ನೀನು ಬಂದು ತಲೆ ತಿಂತಿದೀಯಾ?... ಪ್ಲೀಸ್ ಬಿಟ್ಬಿಡಿ ನನ್ನ.. ಪ್ಲೀಸ್‌..’. ಚಿತ್ರ ಮುಗಿಯುವಷ್ಟರಲ್ಲಿ ಪ್ರೇಕ್ಷಕನೂ ಹೀಗೆ ಪ್ರಾರ್ಥಿಸಿಕೊಳ್ಳುತ್ತ ದಿಕ್ಕಾಪಾಲಾಗಿ ಹೊರಗೋಡುವಷ್ಟು ‘ಮ್ಯಾಗಿ...’ ಪರಿಣಾಮಕಾರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.