ಅಯ್ಯನ ಮನೆ ವೆಬ್ ಸರಣಿ
ಕನ್ನಡದಲ್ಲಿ ಇಲ್ಲಿಯವರೆಗೆ ಬೆರಳೆಣಿಕೆಯಷ್ಟು ವೆಬ್ ಸರಣಿಗಳು ಬಂದಿವೆ. ಆದರೆ ಒಟಿಟಿ ವೇದಿಕೆಗಳು ನೇರವಾಗಿ ಭಾಗವಹಿಸಿ ಕನ್ನಡ ವೆಬ್ ಸರಣಿಯೊಂದನ್ನು ನಿರ್ಮಾಣ ಮಾಡಿರಲಿಲ್ಲ. ಜೀ5 ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟು ‘ಅಯ್ಯನ ಮನೆ’ಯನ್ನು ಪ್ರೇಕ್ಷಕರ ಎದುರಿಗೆ ಇರಿಸಿದೆ. ವೀಕ್ಷಕರು ಹೆಚ್ಚಾಗಿ ನೋಡಬಯಸುವ ಸಸ್ಪೆನ್ಸ್, ಥ್ರಿಲ್ಲರ್ ಜಾನರ್ ಇಟ್ಟುಕೊಂಡೇ ಈ ಸರಣಿ ನಿರ್ಮಾಣವಾಗಿದೆ. ಈ ಮೂಲಕ ಕನ್ನಡಿಗರಿಗೆ ಕನ್ನಡ ವೆಬ್ ಸರಣಿಯ ರುಚಿ ಹತ್ತಿಸುವ ಕೆಲಸವಾಗಿದೆ.
‘ಕಾಂತಾರ’ದ ಬಳಿಕ ದೈವ ಹಾಗೂ ಅದರ ನಂಬಿಕೆ, ಸ್ಥಳೀಯ ಸಂಸ್ಕೃತಿಗಳನ್ನಿಟ್ಟುಕೊಂಡು ಕಥೆ ಹೆಣೆಯಲಾಗುತ್ತಿದೆ. ಈ ಸರಣಿಯೂ ಇವೇ ಅಂಶಗಳನ್ನು ಹೊಂದಿದೆ.
ಎರೆ ಮಲ್ಲಿಕಾರ್ಜುನ ಸ್ವಾಮಿ ಮತ್ತು ನಾಗಮ್ಮ(ಮಾನಸಿ ಸುಧೀರ್) ದಂಪತಿ ಉಳುಮೆ ಮಾಡುವಾಗ ಕೊಂಡಯ್ಯನ ವಿಗ್ರಹ ಸಿಗುತ್ತದೆ. ಇದಾದ ಬಳಿಕ ಅವರು ಶ್ರೀಮಂತರಾಗುತ್ತಾರೆ. ಚಿಕ್ಕಮಗಳೂರಿನ ಬಾಳೂರಿನಲ್ಲಿ ಅವರ ಮನೆ. ಮನೆಯೊಳಗೇ ಕೊಂಡಯ್ಯನ ದೈವಸ್ಥಾನ. ಹೀಗಾಗಿ ಆ ಮನೆಗೆ ‘ಅಯ್ಯನ ಮನೆ’ ಎಂಬ ಹೆಸರು. ಇವರಿಗೆ ಸೇರಿದಂತೆ ಮೂವರು ಗಂಡು ಮಕ್ಕಳು. ‘ದುಷ್ಯಂತ’(ಅಕ್ಷಯ್) ಕಿರಿಯವ. ಚಿಕ್ಕಮಗಳೂರಿನ ಸಂಪಿಗೆಹಾರದ ‘ಜಾಜಿ’ಯನ್ನು (ಖುಷಿ ರವಿ) ‘ದುಷ್ಯಂತ’ನಿಗೆ(ಅಕ್ಷಯ್) ಮದುವೆ ಮಾಡಿಕೊಡುವ ದೃಶ್ಯದಿಂದ ಚಿತ್ರದ ಕಥೆ ಆರಂಭವಾಗುತ್ತದೆ. ನೇಮ ನಿಷ್ಠೆ ಹೆಚ್ಚಿರುವ ಅಯ್ಯನ ಮನೆಯಲ್ಲಿ ಮುಂದೆ ನಡೆಯುವ ಘಟನೆಗಳೇ ಈ ಸರಣಿಯ ಕಥೆ.
ತಲಾ 18 ರಿಂದ 20 ನಿಮಿಷದ ಅವಧಿಯ ಆರು ಕಂತುಗಳು ಇಲ್ಲಿವೆ. ಒಂದು ಸಿನಿಮಾದ ಅವಧಿಯಷ್ಟೇ ಇದರ ಒಟ್ಟು ಅವಧಿಯಿದ್ದು, ಎಲ್ಲಾ ಕಂತುಗಳನ್ನು ಒಮ್ಮೆಯೇ ನೀಡಲಾಗಿದೆ. ಇದು ಕಥೆಯೊಳಗಿನ ಕುತೂಹಲ ಕಡಿಮೆಯಾಗಿಸಿದೆ. ವೆಬ್ ಸರಣಿಯ ಬರವಣಿಗೆ ಹಾಗೂ ನಿರೂಪಣೆ ಚೆನ್ನಾಗಿದೆ. ಆಯಾ ಕಂತುಗಳ ಅಂತ್ಯದಲ್ಲಿ ಮುಂದಿನ ಕಂತಿನ ವೀಕ್ಷಣೆಗೆ ಪ್ರೇರೇಪಿಸುವಂಥ ಅಂಶಗಳು ಇವೆ. ಸರಣಿಯಲ್ಲಿ ಬರುವ ಉಪಕಥೆಗಳ ಬರವಣಿಗೆಯನ್ನು ಇನ್ನಷ್ಟು ಗಟ್ಟಿಗೊಳಿಸಬಹುದಿತ್ತು. ಕೆಲವೆಡೆ ಪ್ರೇಕ್ಷಕರಿಗೆ ಒಂದು ಪಾತ್ರದ ಮೇಲೆ ಗುಮಾನಿ ಹುಟ್ಟಿಸಲೇಬೇಕು ಎನ್ನುವ ಉದ್ದೇಶದಿಂದ ದೃಶ್ಯಗಳನ್ನು ಬರೆದಿರುವಂತೆ ಭಾಸವಾಗುತ್ತದೆ. ಇನ್ನಷ್ಟು ಪರಿಣಾಮಕಾರಿಯಾಗಿ ಕೆಲ ದೃಶ್ಯಗಳನ್ನು ಚಿತ್ರೀಕರಿಸಬಹುದಿತ್ತು. ಚಿತ್ರೀಕರಣ ನಡೆದಿರುವ ಸ್ಥಳ, ಸರಣಿಯ ಅವಧಿ, ಪಾತ್ರಗಳ ಸಂಖ್ಯೆ, ದೃಶ್ಯಗಳನ್ನು ಗಮನಿಸಿದರೆ ಕೆಲವು ಮಿತಿಗಳಲ್ಲಿ ಈ ಸರಣಿಯನ್ನು ನಿರ್ಮಾಣ ಮಾಡಿದಂತಿದೆ.
ನಟನೆಯಲ್ಲಿ ಖುಷಿ ರವಿ ಇಡೀ ಸರಣಿಯನ್ನು ಆವರಿಸಿಕೊಂಡಿದ್ದಾರೆ. ಜಾಜಿ ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ. ಮಾನಸಿ ಸುಧೀರ್ ನಾಗಮ್ಮನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಹಿತಾ ಚಂದ್ರಶೇಖರ್, ಶೋಭರಾಜ್, ಅರ್ಚನಾ ಕೊಟ್ಟಿಗೆ ತಮ್ಮ ಪಾತ್ರಗಳನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ರಾಹುಲ್ ರಾಯ್ ಛಾಯಾಚಿತ್ರಗ್ರಹಣ ಹಾಗೂ ಎಲ್.ವಿ.ಮುತ್ತು ಗಣೇಶ್ ಸಂಗೀತವೂ ಇಲ್ಲಿ ಉಲ್ಲೇಖಾರ್ಹ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.