
ಸ್ವಪ್ನಮಂಟಪ ಸಿನಿಮಾ
ಚರಿತ್ರೆ ಕೇವಲ ಕಥೆಗಳಲ್ಲ. ನಮ್ಮ ನಾಡಿನ ನಂಬಿಕೆ, ಪರಂಪರೆಗಳ ದ್ಯೋತಕ ಎಂಬ ಸಂದೇಶವನ್ನು ಹೊಂದಿರುವ ಚಿತ್ರ ಸ್ವಪ್ನಮಂಟಪ. ಇತಿಹಾಸ ಮತ್ತು ವರ್ತಮಾನಗಳಲ್ಲಿ ಒಟ್ಟಿಗೆ ಕಥೆ ಸಾಗುತ್ತದೆ. ಹೀಗಾಗಿ ನಿರ್ದೇಶಕರು ವರ್ತಮಾನದಲ್ಲಿ ಇತಿಹಾಸದ ಮಹತ್ವ ಹೇಳುತ್ತ, ಅಂದಿಗೂ, ಇಂದಿಗೂ, ಎಂದೆಂದಿಗೂ ಗಂಡು–ಹೆಣ್ಣಿನ ಸಂಬಂಧಗಳು ಹೇಗಿರಬೇಕು ಎಂದು ಹೇಳುತ್ತಾ ಹೋಗುತ್ತಾರೆ. ಆದಾಗ್ಯೂ ಈ ಕಥೆಯನ್ನು ಸಿನಿಮಾ ಚೌಕಟ್ಟಿನಲ್ಲಿ ಕೂರಿಸುವ ನಿರ್ದೇಶಕರ ಯತ್ನ ಸಫಲವಾಗದೆ, ಹಲವು ಕಡೆ ರಂಗದ ಮೇಲೊಂದು ಇತಿಹಾಸದ ಪಾಠ ಕೇಳಿದಂತಾಗುತ್ತದೆ.
ಕಥೆಯ ನಾಯಕಿ ಮಂಜುಳಾ ಪ್ರೌಢಶಾಲಾ ಶಿಕ್ಷಕಿಯಾಗಿ, ಪಾಳುಬಿದ್ದ ‘ಸ್ವಪ್ನಮಂಟಪ’ವಿರುವ ಊರಿಗೆ ಬರುತ್ತಾರೆ. ತನ್ನ ತಂದೆಯ ಸ್ನೇಹಿತರಾದ ಸಿದ್ದಪ್ಪ ಅವರ ಮನೆಯಲ್ಲಿ ಉಳಿದುಕೊಳ್ಳುತ್ತಾರೆ. ಅಲ್ಲಿ ಕಥೆಯ ನಾಯಕ ಶಿವಕುಮಾರ್ ಪರಿಚಯವಾಗುತ್ತದೆ. ಸಮಾಜ ವಿಜ್ಞಾನ ಶಿಕ್ಷಕಿಯಾದ ಮಂಜುಳಾಗೆ ಇತಿಹಾಸದಲ್ಲಿ ಆಸಕ್ತಿ. ಗತಿಸಿಹೋದ ನಿನ್ನೆಯ ಕಥೆಗಳನ್ನು ತಿಳಿದುಕೊಳ್ಳಲು ಐತಿಹಾಸಿಕ ಸ್ಮಾರಕಗಳನ್ನು ಅಧ್ಯಯನ ಮಾಡಬೇಕು, ಇತಿಹಾಸ ಎಂಬುದು ಕೇವಲ ಕಥೆಯಲ್ಲ, ನಮ್ಮವರ ನಿನ್ನೆ ಎಂಬ ನಂಬಿಕೆಯುಳ್ಳವರು. ‘ಸ್ವಪ್ನಮಂಟಪ’ ಎಂಬುದು ಇವರ ಕಿವಿಗೆ ಬೀಳುತ್ತದೆ.
ಈ ಕಡೆ ಭೀಮರಾಜುಗೆ ‘ಸ್ವಪ್ನಮಂಟಪ’ ಹಾಳು ಬಿದ್ದ ಜಾಗ. ಅದನ್ನು ಕೆಡವಿ ರೆಸಾರ್ಟ್ ಮಾಡಬೇಕೆಂಬ ಹಂಬಲ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುತ್ತಾನೆ. ಅದನ್ನು ಹೇಗಾದರೂ ಆತನ ಕಪಿಮುಷ್ಟಿಯಿಂದ ತಪ್ಪಿಸಬೇಕು ಎಂದು ನಾಯಕ ಶಿವಕುಮಾರ್ ಪ್ರಯತ್ನ ಪ್ರಾರಂಭಿಸುತ್ತಾನೆ. ಶಿವಕುಮಾರ್‌ಗೆ ಮಂಜುಳಾ ಮೇಲೆ ಒಲವಾಗುತ್ತದೆ. ಆಕೆ ಆತನಿಂದ ಈ ಮಂಟಪದ ಕಥೆ ಕೇಳಲು ಪ್ರಾರಂಭಿಸುತ್ತಾಳೆ. ಆಗ ರಾಜ ಚಂಡೆರಾಯ, ಮದನಿಕೆ, ಚಂದ್ರಕುಮಾರರ ಐತಿಹಾಸಿಕ ಕಥೆಯೊಂದು ಚಿತ್ರದಲ್ಲಿ ತೆರೆದುಕೊಳ್ಳುತ್ತದೆ. ಆ ಐತಿಹಾಸಿಕ ಕಥೆಯ ಜತೆಗೆ ಭೀಮರಾಜುವಿನಿಂದ ಮಂಟಪವನ್ನು ಉಳಿಸಿಕೊಳ್ಳಲು ಈ ಜೋಡಿ ಏನು ಮಾಡುತ್ತದೆ ಎಂಬ ವರ್ತಮಾನದ ಸನ್ನಿವೇಶಗಳೇ ಚಿತ್ರದ ದ್ವಿತೀಯಾರ್ಧ.
ಶಿವಕುಮಾರ್ ಆಗಿ ವಿಜಯ ರಾಘವೇಂದ್ರ ಕಾಣಿಸಿಕೊಂಡಿದ್ದಾರೆ. ಮಂಜುಳಾ ಪಾತ್ರದಲ್ಲಿ ರಂಜನಿ ನಟಿಸಿದ್ದಾರೆ. ಮದನಿಕೆ, ಚಂದ್ರಕುಮಾರರಾಗಿಯೂ ಇವರಿಬ್ಬರೇ ಕಾಣಿಸಿಕೊಂಡಿದ್ದಾರೆ. ಆಗಿನ ಮತ್ತು ಈಗಿನ ಈ ಜೋಡಿಯ ವಿಚಾರೆಧಾರೆಗಳು, ಆಲೋಚನೆಗಳು ಒಂದೇ ರೀತಿ ಎಂಬಂತೆ ಬಿಂಬಿಸಲು ನಿರ್ದೇಶಕರು ಈ ತಂತ್ರ ಉಪಯೋಗಿಸಿದಂತಿದೆ. ಆದರೆ ಇತಿಹಾಸ ಮತ್ತು ವರ್ತಮಾನದ ಕಥೆಗಳು ಒಟ್ಟಿಗೆ ಸಾಗುವುದರಿಂದ ಒಂದು ಜೋಡಿಗೆ ಬೇರೆ ನಟರನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು. ಶಿವಕುಮಾರ್ ಆಗಿ ವಿಜಯ ರಾಘವೇಂದ್ರ, ಮಂಜುಳಾ ಆಗಿ ರಂಜನಿ ಇಷ್ಟವಾಗುತ್ತಾರೆ. ಆದರೆ ಮದನಿಕೆ, ಚಂದ್ರಕುಮಾರರಾಗಿ ಈ ಪಾತ್ರಗಳು ನಾಟಕೀಯ ಅನ್ನಿಸುತ್ತವೆ.
ಕಲಾತ್ಮಕ ಚಿತ್ರವಾಗಿರುವುದರಿಂದ ನಿರ್ದೇಶಕರು ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಿದಂತಿಲ್ಲ. ಹೀಗಾಗಿ ಹಲವು ಕಡೆ ಇದನ್ನು ಸಿನಿಮಾವಾಗಿಸುವ ಬದಲು ರಂಗದ ಮೇಲಿನ ನಾಟಕವಾಗಿಸಬಹುದಿತ್ತು ಎಂಬ ಭಾವನೆ ಮೂಡುತ್ತದೆ. ಮಂಟಪದಲ್ಲಿ ಮಂಜುಳಾ ಭರತನಾಟ್ಯ, ರಾಣಿಯನ್ನು ಮಂಟಪಕ್ಕೆ ತರುವ ಕುದುರೆ ಗಾಡಿ, ಅರಮನೆ ಆವರಣ ಮುಂತಾದ ಸನ್ನಿವೇಶಗಳು ಇದಕ್ಕೆ ನಿದರ್ಶನಗಳಂತಿವೆ. ಶಮಿತಾ ಮಲ್ನಾಡ್ ಸಂಯೋಜನೆಯ ಹಾಡುಗಳು ನೆನಪಿನಲ್ಲಿ ಉಳಿಯುವಂತಿಲ್ಲ. ಛಾಯಾಚಿತ್ರಗ್ರಹಣದಲ್ಲಿಯೂ ಹೊಸತನ ಕಾಣಿಸುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.