ಹಿಂದಿಯ ‘9 2 11’, ತಮಿಳಿನ ‘ಕೈಥಿ’, ಕನ್ನಡದ ‘ಮ್ಯಾಕ್ಸ್’, ‘ಕೇಸ್ ಆಫ್ ಕೊಂಡಾಣ’ ಮುಂತಾದವು ಒಂದು ರಾತ್ರಿಯಲ್ಲಿ ನಡೆದ ಘಟನೆಗಳ ಸುತ್ತ ಕಟ್ಟಿದ ಕಥೆಯುಳ್ಳ ಸಿನಿಮಾಗಳು. ಈ ಮಾದರಿಯ ಸಿನಿಮಾಗಳ ಯಶಸ್ಸು ಅವು ಹುಟ್ಟಿಸುವ ಕುತೂಹಲ, ನೀಡುವ ತಿರುವುಗಳು, ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ. ‘ಏಳುಮಲೆ’ ಈ ನಿಟ್ಟಿನಲ್ಲಿ ಯಶಸ್ವಿ ಪ್ರಯೋಗ. ಈ ಸಿನಿಮಾ ಪುನೀತ್ ರಂಗಸ್ವಾಮಿ ನಿರ್ದೇಶನದ ಸಾಮರ್ಥ್ಯವನ್ನೂ ಪರಿಚಯಿಸಿದೆ.
ಹರೀಶ (ರಾಣಾ) ಮೈಸೂರಿನ ಅನಾಥ ಹುಡುಗ. ಈತ ಟೂರಿಸ್ಟ್ ಗಾಡಿ ಡ್ರೈವರ್. ಮೈಸೂರಿನಲ್ಲಿ ಓದಲು ಬಂದ ತಮಿಳುನಾಡಿನ ಶ್ರೀಮಂತ ಕುಟುಂಬದ ಹುಡುಗಿ ರೇವತಿ (ಪ್ರಿಯಾಂಕಾ) ಜೊತೆ ಪ್ರೀತಿಯಲ್ಲಿ ಬೀಳುತ್ತಾನೆ. ಆಕೆಗೂ ಈತ ಪಂಚಪ್ರಾಣ. ಈ ವಿಷಯ ತಿಳಿದು ರೇವತಿ ಕುಟುಂಬದವರು ಆಕೆಗೆ ಮದುವೆ ಮಾಡಿಸಲು ಸಜ್ಜಾಗುತ್ತಾರೆ. ಮದುವೆಯ ಹಿಂದಿನ ದಿನ ರಾತ್ರಿ (2004 ಅಕ್ಟೋಬರ್ 18) ರೇವತಿ ಮನೆ ಬಿಟ್ಟು ಹರೀಶನೊಂದಿಗೆ ಓಡಿ ಹೋಗಲು ಮಲೆ ಮಹದೇಶ್ವರಕ್ಕೆ ಧಾವಿಸುತ್ತಾಳೆ. ಆಕೆಯನ್ನು ಕರೆತರಲು ಹರೀಶನೂ ಆ ಬೆಟ್ಟಕ್ಕೆ ಪ್ರಯಾಣಿಸುತ್ತಾನೆ. ಇದೇ ವೇಳೆ ಚಾಮರಾಜನಗರದ ಕರ್ನಾಟಕ–ತಮಿಳುನಾಡು ಗಡಿಯಲ್ಲಿನ ಕಾಡಿನೊಳಗೆ, ಅಲ್ಲಿರುವ ಪೊಲೀಸ್ ಠಾಣೆಯೊಳಗೆ ನಡೆಯುವ ಘಟನೆಗಳು ಹರೀಶನ ಜೀವನವನ್ನೇ ಬದಲಾಯಿಸಿಬಿಡುತ್ತವೆ. ಕಥೆ ಹೀಗೆ ಮುಂದುವರಿಯುತ್ತದೆ.
ಎರಡು ಗಂಟೆ ಹದಿಮೂರು ನಿಮಿಷದ ಈ ಸಿನಿಮಾದಲ್ಲಿ ಅನಗತ್ಯದ ದೃಶ್ಯಗಳಿಲ್ಲ. ಚೊಚ್ಚಲ ಸಿನಿಮಾದಲ್ಲೇ ಬಹಳ ಸೂಕ್ಷ್ಮವಾಗಿ ಚಿತ್ರಕಥೆಯನ್ನು ರಚಿಸಿದ್ದಾರೆ ಪುನೀತ್. ಮೊದಲಾರ್ಧದಲ್ಲಿ ಏಳು ಘಟನೆಗಳನ್ನು ಕಟ್ಟಿಕೊಡುವ ಸಾಹಸವನ್ನು ನಿರ್ದೇಶಕರು ಸಮರ್ಥವಾಗಿ ಮಾಡಿದ್ದಾರೆ. 2004ರಲ್ಲಿ ನಡೆದ ‘ಆಪರೇಷನ್ ಕುಕೂನ್’ ಎಂಬ ನೈಜ ಘಟನೆಯೊಂದನ್ನು ಆಧಾರವಾಗಿಟ್ಟುಕೊಂಡು ಕಾಲ್ಪನಿಕ ಕಥೆ ಹೆಣೆದಿರುವ ನಿರ್ದೇಶಕರು ಹಲವು ವಿಷಯಗಳನ್ನು ಪ್ರಸ್ತುತಪಡಿಸಿದರೂ ಕಥೆಯು ಬೇರೆಡೆ ಹೊರಳದಂತೆ ಪ್ರೀತಿಯಿಂದಲೇ ಅಂತ್ಯಗೊಳಿಸಿದ್ದಾರೆ. ಕಥೆಯುದ್ದಕ್ಕೂ ಹರೀಶ ಹಾಗೂ ರೇವತಿಯ ಚಡಪಡಿಕೆಯ ಅನುಭವವನ್ನು ದಾಟಿಸುವಲ್ಲಿ ಅವರು ಯಶಸ್ಸು ಕಂಡಿದ್ದಾರೆ. ಎಲ್ಲಾ ಪಾತ್ರಗಳಿಗೂ ಅದರದ್ದೇ ಆದ ತೆರೆ ಅವಧಿಯನ್ನು, ಪ್ರಾಮುಖ್ಯತೆಯನ್ನು ಬರವಣಿಗೆಯಲ್ಲಿ ನೀಡಿದ್ದಾರೆ. ಮೊದಲಾರ್ಧಕ್ಕೆ ಹೋಲಿಸಿದರೆ ದ್ವಿತೀಯಾರ್ಧದ ಕಥೆಯ ವೇಗ ಕೊಂಚ ಕಡಿಮೆ ಎಂದೆನಿಸುತ್ತದೆ.
ಪ್ರೀತಿಯೇ ಶ್ರೇಷ್ಠ ಎಂಬುದನ್ನು ಉಲ್ಲೇಖಿಸುವ ಈ ಕಥೆಯಲ್ಲಿ ಅದಕ್ಕೆ ತಕ್ಕ ಹಾಗೆ ನಟಿಸಿದ್ದಾರೆ ರಾಣಾ ಹಾಗೂ ಪ್ರಿಯಾಂಕಾ. ಮೊದಲ ಸಿನಿಮಾಗೆ ಹೋಲಿಸಿದರೆ ರಾಣಾ ಅವರು ನಟನೆಯಲ್ಲಿ ಪಳಗಿದ್ದಾರೆ. ಈ ಸಿನಿಮಾದಲ್ಲಿ ಅವರ ನಟನೆಯ ಗ್ರಾಫ್ ಏರುತ್ತಲೇ ಹೋಗುತ್ತದೆ. ಕಿಶೋರ್ ಜೊತೆಗಿನ ಅವರ ದೃಶ್ಯಗಳೇ ಇದಕ್ಕೆ ಸಾಕ್ಷಿ. ಮುಗ್ಧ ಹುಡುಗಿಯಾಗಿ ಪ್ರಿಯಾಂಕಾ ನಟನೆ ಚೆನ್ನಾಗಿದೆ. ಒರಟು ಮಾತಿನ ಪೊಲೀಸ್ ಅಧಿಕಾರಿಯಾಗಿ ಕಿಶೋರ್, ನಿವೃತ್ತಿ ಅಂಚಿನಲ್ಲಿರುವ ಮೃದು ಮಾತಿನ ಪೊಲೀಸ್ ಹೆಡ್‌ಕಾನ್ಸ್‌ಟೆಬಲ್ ಆಗಿ ಟಿ.ಎಸ್.ನಾಗಾಭರಣ ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಕಥೆಗೆ ಅನುಗುಣವಾಗಿ ಸಿನಿಮಾದೊಳಗಿನ ಪಾತ್ರಗಳಿಗೆ ಚಾಮರಾಜನಗರದ ಕನ್ನಡ, ಗಡಿ ಭಾಗದ ತಮಿಳು ಭಾಷೆಯನ್ನೇ ಉಳಿಸಿಕೊಳ್ಳಲಾಗಿದೆ. ಇದು ನೈಜತೆಯನ್ನು ಸೃಷ್ಟಿಸಿದೆ.
ಸಿನಿಮಾಗೆ ಅದ್ವೈತ ಗುರುಮೂರ್ತಿ ಛಾಯಾಚಿತ್ರಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹೊಸ ರೂಪ ನೀಡಿದೆ. ಕಥೆಯ ವೇಗಕ್ಕೆ ಡಿ.ಇಮ್ಮಾನ್ ಬಿಜಿಎಂ ಸಾಥ್ ನೀಡಿದೆ. ‘ಆನುಮಲೆ ಜೇನುಮಲೆ’ ಹಾಡು ಚೆನ್ನಾಗಿದೆ.
ಇದು ನೋಡಬಹುದಾದ ಚಿತ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.