ADVERTISEMENT

'ರಂಗಸಮುದ್ರ' ಸಿನಿಮಾ ವಿಮರ್ಶೆ: ಏರಿಳಿತಗಳಿಲ್ಲದ ಸಮುದ್ರದ ತೀರ!

ವಿನಾಯಕ ಕೆ.ಎಸ್.
Published 19 ಜನವರಿ 2024, 12:13 IST
Last Updated 19 ಜನವರಿ 2024, 12:13 IST
‘ರಂಗಸಮುದ್ರ’ದಲ್ಲಿ ರಂಗಾಯಣ ರಘು
‘ರಂಗಸಮುದ್ರ’ದಲ್ಲಿ ರಂಗಾಯಣ ರಘು   

ಕರ್ನಾಟಕ–ಮಹಾರಾಷ್ಟ್ರ ಗಡಿಯ ಊರು ‘ರಂಗಸಮುದ್ರ’. ಆ ಊರಿನ ಪಾತ್ರಗಳು, ನಡೆಯುವ ಘಟನೆಗಳೇ ಚಿತ್ರದ ಒಟ್ಟಾರೆ ಕಥೆ. ಒಂದೊಳ್ಳೆ ಪಾತ್ರವರ್ಗ, ಸಾಕಷ್ಟು ಸಾಧ್ಯತೆಗಳಿರುವ ಕಥಾವಸ್ತು, ಉತ್ತಮ ಛಾಯಾಗ್ರಹಣ ಎಲ್ಲವೂ ಜೊತೆಗಿದ್ದು ಏರಿಳಿತಗಳಿಲ್ಲದ ಸಮುದ್ರದ ತೀರದಲ್ಲಿನ ಪಯಣದಂತಿರುವ ಸಿನಿಮಾವಿದು!

ಚಿತ್ರದಲ್ಲಿ ಬರವಣಿಗೆ ಎಂಬುದು ಬಹಳ ಮುಖ್ಯ. ಯಾವುದನ್ನು ಹೇಳಬೇಕು ಮತ್ತು ಎಷ್ಟನ್ನು ಹೇಳಬೇಕು ಎಂಬ ಸ್ಪಷ್ಟತೆ ನಿರ್ದೇಶಕರಿಗೆ ಇಲ್ಲದೇ ಹೋದರೆ ಚಿತ್ರ ಹದ ತಪ್ಪಿದ ವಿಚಿತ್ರಾನ್ನವಾಗುತ್ತದೆ! ಊರು ಬಿಟ್ಟು ಹೊರಟ ನಾಲ್ಕು ಚಿಕ್ಕ ಮಕ್ಕಳು ನೇರವಾಗಿ ರಾಘವೇಂದ್ರ ರಾಜಕುಮಾರ್‌ ಮನೆಗೆ ಬರುತ್ತಾರೆ. ಅಲ್ಲಿಗೆ ಯಾಕೆ ಬಂದರು ಮತ್ತು ಹೇಗೆ ಬಂದರು ಎಂಬುದಕ್ಕೆ ಗಟ್ಟಿಯಾದ ಲಾಜಿಕ್‌ ಇಲ್ಲ! ರಾಘವೇಂದ್ರ ರಾಜ್‌ಕುಮಾರ್‌ ಪಾತ್ರಕ್ಕೂ ಒಂದು ನಿರ್ದಿಷ್ಟತೆ ಇಲ್ಲ. ಅಲ್ಲಿಂದ ಗಡಿನಾಡಿನ ರಂಗಮುದ್ರದ ಕಥೆ ಪ್ರಾರಂಭವಾಗುತ್ತದೆ. ಬಹುಶಃ ಇದು ಮಕ್ಕಳ ಸಿನಿಮಾವಿರಬೇಕು ಎಂದುಕೊಳ್ಳುವ ಹೊತ್ತಿಗೆ ರಂಗಾಯಣ ರಘು ಪ್ರವೇಶವಾಗುತ್ತದೆ. ಡೊಳ್ಳು ಬಾರಿಸುವ ಸಮುದಾಯದ ನಾಯಕನಾಗಿ ರಘು ಕಾಣಿಸಿಕೊಂಡಿದ್ದಾರೆ. ಇದು ಆ ಕಲೆಯ ಕುರಿತಾದ ಚಿತ್ರವಿರಬಹುದ ಎಂಬ ಗ್ರಹಿಕೆಯನ್ನು ನಿರ್ದೇಶಕರು ಹುಸಿಯಾಗಿಸುತ್ತಾರೆ.

ರಂಗಾಯಣ ರಘು ಅವರದ್ದು ಸಾಕಷ್ಟು ಸಾಧ್ಯತೆಗಳಿದ್ದ ಒಂದು ಅದ್ಭುತ ಪಾತ್ರ. ಮೊದಲನೆ ದೃಶ್ಯದಲ್ಲೇ ರಂಗಾಯಣ ರಘು ಅದ್ಭುತ ನಟನೆಯೊಂದಿಗೆ ಇಷ್ಟವಾಗಿಬಿಡುತ್ತಾರೆ. ಆದರೆ ಆ ಪಾತ್ರ ಪೋಷಣೆಯಲ್ಲಿ, ಪಾತ್ರವನ್ನು ಗಟ್ಟಿಯಾಗಿ ನಿಲ್ಲಿಸುವಲ್ಲಿ ನಿರ್ದೇಶಕರು ಸಂಪೂರ್ಣವಾಗಿ ವಿಫಲವಾಗುತ್ತಾರೆ. ಇಡೀ ಚಿತ್ರದ ಒಂದೆಳೆ ಅಜ್ಜ ಮತ್ತು ಮೊಮ್ಮಗನ ನಡುವೆ ನಡೆಯುವ ಕಥೆ. ಚಿತ್ರವನ್ನು ಮನರಂಜನಾತ್ಮಕವಾಗಿಸಬೇಕು ಮತ್ತು ಒಂದಷ್ಟು ಸಂದೇಶಕೊಡಬೇಕೆಂಬ ನಿರ್ದೇಶಕರ ಉದ್ದೇಶ ಯಶಸ್ವಿಯಾಗಿಲ್ಲ. ಚಿತ್ರಕಥೆಯಲ್ಲಿ ಸಾಕಷ್ಟು ದೃಶ್ಯಗಳು ಬಲವಂತವಾಗಿ ತುರುಕಿದಂತಿವೆ. ಮೊದಲಾರ್ಧದಲ್ಲಿ ಅವನಶ್ಯ ಹಾಡುಗಳು ಹೆಚ್ಚಿವೆ.

ADVERTISEMENT

ಕರ್ಣನ ಕುರಿತಾಗಿ ಊರಿನಲ್ಲಿ ನಡೆಯುವ ನಾಟಕದ ದೃಶ್ಯ ವಾವ್‌ ಎನ್ನಿಸುತ್ತದೆ ಮತ್ತು ಸಿನಿಮಾ ತಂಡಕ್ಕಿದ್ದ ಸಾಮರ್ಥ್ಯವನ್ನು ತಿಳಿಸುತ್ತದೆ. ಊರಿನ ಜಾತ್ರೆಯ ದೃಶ್ಯ, ಡೋಲಿನ ದೃಶ್ಯಗಳು ಕೂಡ ಹಾಗೆ. ಆದರೆ ತಂಡದ ಈ ಶಕ್ತಿಯನ್ನು ಸಿನಿಮಾದುದ್ದಕ್ಕೂ ಬಳಸಿಕೊಳ್ಳುವಲ್ಲಿ ನಿರ್ದೇಶಕರು ಎಡವಿದ್ದಾರೆ. ಖಳನಾಯಕನಾಗಿ ಸಂಪತ್‌ರಾಜ್‌ ನಟನೆ ಖಡಕ್‌ ಆಗಿದೆ. ಮಂಗಳೂರು ಭಾಷೆ ಮಾತನಾಡುವ ಉಪಾಧ್ಯಾಯರಾಗಿ ಕಾರ್ತಿಕ್‌ ರಾವ್‌ ಸಾಕಷ್ಟು ಕಡೆ ‘ಒಂದು ಮೊಟ್ಟೆಯ ಕಥೆ’ಯ ರಾಜ್‌.ಬಿ.ಶೆಟ್ಟಿ ಅವರನ್ನು ನೆನಪಿಸುತ್ತಾರೆ. ಆದರೆ ಶಾಲೆಯ ವಿಪರೀತ ದೃಶ್ಯಗಳು, ಪ್ರೇಮಕಥೆ, ವಯಸ್ಸಿಗೆ ಮೀರಿದ ಮಕ್ಕಳ ತಮಾಷೆ ಮಾತುಗಳು ಕಿರಿಕಿರಿ ಮೂಡಿಸಲು ಪ್ರಾರಂಭವಾಗುತ್ತದೆ. ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲ. ಛಾಯಾಗ್ರಹಣ ಸೊಗಸಾಗಿದೆ.

ಚಿತ್ರ: ರಂಗಸಮುದ್ರ

ನಿರ್ದೇಶನ: ರಾಜ್‌ಕುಮಾರ್‌ ಅಸ್ಕಿ

ನಿರ್ಮಾಣ: ಹೋಯ್ಸಳ ಕೊಣನೂರು

ತಾರಾಗಣ: ರಂಗಾಯಣ ರಘು ರಾಘವೇಂದ್ರ ರಾಜಕುಮಾರ್‌ ಸಂಪತ್‌ರಾಜ್‌ ಕಾರ್ತಿಕ್‌ ರಾವ್‌ ಮುಂತಾದವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.