ADVERTISEMENT

ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ವಿಮರ್ಶೆ: ಸುವರ್ಣ ಚೌಕಟ್ಟಿನಲ್ಲಿ ವೇಶ್ಯೆಯ ಕಥನ

ವಿಶಾಖ ಎನ್.
Published 25 ಫೆಬ್ರುವರಿ 2022, 13:35 IST
Last Updated 25 ಫೆಬ್ರುವರಿ 2022, 13:35 IST
ಆಲಿಯಾ ಭಟ್
ಆಲಿಯಾ ಭಟ್   

ಚಿತ್ರ: ಗಂಗೂಬಾಯಿ ಕಾಠಿಯಾವಾಡಿ (ಹಿಂದಿ)

ನಿರ್ಮಾಣ: ಭನ್ಸಾಲಿ ಪ್ರೊಡಕ್ಷನ್ಸ್, ಪೆನ್ ಇಂಡಿಯಾ ಲಿಮಿಟೆಡ್

ನಿರ್ದೇಶನ: ಸಂಜಯ್ ಲೀಲಾ ಭನ್ಸಾಲಿ

ADVERTISEMENT

ತಾರಾಗಣ: ಆಲಿಯಾ ಭಟ್, ಶಂತನು ಮಹೇಶ್ವರಿ, ವಿಜಯ್ ರಾಝ್, ಅಜಯ್ ದೇವಗನ್, ಸೀಮಾ ಪಾಹ್ವಾ, ಇಂದಿರಾ ತಿವಾರಿ, ಜಿಮ್ ಸರ್ಭ್

ಗೋಡೆಗೆ ಬರೆವ ನವಿಲಿನ ಗರಿಯ ಕಣ್ಣು ನೋಡಲು ಚೆಂದ. ಬರೆದ ಕಲಾವಿದನ ಕೌಶಲ ಕಂಡೊಡನೆ ‘ವಾಹ್’ ಎಂಬ ಉದ್ಗಾರ ಬರುವುದು ಸಹಜವೇ. ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಕೂಡ ಗೋಡೆಯ ಮೇಲೆ ನವಿಲು ಮೂಡಿಸುವ ಕಲಾವಿದ. ನಿಜದ ನವಿಲಿಗೇ ಗರಿಬಿಚ್ಚಲು ಬಿಟ್ಟು, ಸಿನಿಮಾಟೊಗ್ರಾಫರ್‌ ಕೈಲಿ ಕ್ಯಾಮೆರಾ ಹಿಡಿಸಿ ಸಾವಧಾನದಿಂದ ಕಾಯುವ ಜಾಯಮಾನ ಅವರದ್ದಲ್ಲ. ‘ಗಂಗೂಬಾಯಿ ಕಾಠಿಯಾವಾಡಿ’ ಎಂಬ ವೇಶ್ಯೆಯೊಬ್ಬಳ ಬಡಬಾನಲದ ಕಥನವನ್ನೂ ಅವರು ರಮ್ಯ ಕಥಾನಕವಾಗಿಯೇ ತೋರಿಸುವ ಹಾದಿಯನ್ನು ಆಯ್ಕೆ ಮಾಡಿಕೊಂಡಿರುವುದು ಅವರ ರಂಗತಂತ್ರ ಮುಚ್ಚಟೆಗೆ ಸಾಕ್ಷಿ.

ಎಸ್. ಹುಸೇನ್ ಝೈದಿ ಬರೆದಿರುವ ‘ಮಾಫಿಯಾ ಕ್ವೀನ್ಸ್ ಆಫ್ ಮುಂಬೈ’ ಕೃತಿಯ ಭಾಗದ ಕಾಣ್ಕೆ ಪಡೆದು ಭನ್ಸಾಲಿ ಈ ಸಿನಿಮಾಗೆ ಚಿತ್ರಕಥೆ ರೂಪಿಸಿದ್ದಾರೆ. ನಟಿಯಾಗುವ ಬಯಕೆಯಿಂದ ಪ್ರಿಯಕರನೊಂದಿಗೆ ಮುಂಬೈಗೆ ಕಾಠಿಯಾವಾಡಿಯಿಂದ ಮನೆಬಿಟ್ಟು ಓಡಿ ಬರುವ ಬ್ಯಾರಿಸ್ಟರ್ ಮನೆಯ ಹಣ್ಣುಬಾಲಕಿಯೊಬ್ಬಳು ವೇಶ್ಯಾವಾಟಿಕೆಯ ಸುಳಿಯೊಳಗೆ ಸಿಲುಕುವ ಕಥನದ ಚಿತ್ರ ಇದು. ಅವಳು ಆ ಸುಳಿಯಲ್ಲಿಯೇ ಈಜಿ ಜಯಿಸುತ್ತಾಳೆ. ಗಂಗಾ ಆಗಿದ್ದವಳು ಗಂಗೂ ಆಗಿ, ಆಮೇಲೆ ಗಂಗೂಬಾಯಿ ಆಗುವ ಸಮಾಜೋ–ರಾಜಕೀಯದ ಎಳೆಗಳನ್ನೂ ಸಿನಿಮಾ ಒಳಗೊಂಡಿದೆ. ಪಾತ್ರದ ಈ ಪರಿವರ್ತನೆ ಎಷ್ಟು ಚಕಚಕನೆ ಆಗುತ್ತದೆಂದರೆ, ಭನ್ಸಾಲಿಯೊಳಗಿನ ಕಲಾವಿದನಿಗೆ ಸಾವಧಾನ ಯಾಕಿಷ್ಟು ಕಡಿಮೆಯೇ ಎನ್ನುವಷ್ಟು.

ಗಂಗೂಬಾಯಿ ಪಾತ್ರಧಾರಿ ಆಲಿಯಾ ಅವರನ್ನು ಭಾವದ ನದಿಯಲ್ಲಿ ಅದ್ದಿ ತೆಗೆದು, ಮುಖದ ಮೇಲೆ ಪ್ರಖರ ಬೆಳಕನ್ನು ಬೀರಿ ತೋರುವ ಉಮೇದು ಇಡೀ ಚಿತ್ರದುದ್ದಕ್ಕೂ ವ್ಯಕ್ತಗೊಂಡಿದೆ. ರೌಡಿಯೊಬ್ಬ ದೇಹಸುಖ ಪಡೆಯದೆ, ಕಂಡಕಂಡಲ್ಲಿ ನಾಯಕಿಯ ದೇಹ ಕೊಯ್ದು ಹೋಗುವ ದೃಶ್ಯವನ್ನು ಕೂಡ ಭನ್ಸಾಲಿ ಕಲಾವಿದನ ನೋಟದಲ್ಲೇ ನೋಡುವುದನ್ನು ಜೀರ್ಣಿಸಿಕೊಳ್ಳಲಾಗದು. ನಾಯಕಿಯ ಭುಜದ ಭಾಗದಿಂದ ಉದರದವರೆಗೆ ಹಾಕಿರುವ ಹೊಲಿಗೆಯನ್ನು ಕೂಡ ಅವರು ಯಾವುದೋ ಪೇಂಟಿಂಗ್‌ನ ರೂಪದರ್ಶಿಯನ್ನು ಸಿಂಗರಿಸುವ ಉಪಾದಿಯಲ್ಲಿ ತೋರಿರುವುದನ್ನು ‘ಅನಿಯಂತ್ರಿತ ದರ್ಶನ’ ಎಂದು ನಿಸ್ಸಂಶಯವಾಗಿ ಹೇಳಬಹುದು.

ಸಂಜಯ್ ಲೀಲಾ ಭನ್ಸಾಲಿ ತಮ್ಮ ಭಿತ್ತಿಯನ್ನು ಸಿಂಗರಿಸುವುದರಲ್ಲಿ ಲಾಗಾಯ್ತಿನಿಂದಲೂ ನಿಸ್ಸೀಮರು. ಫ್ರೇಮಿನ ಮಧ್ಯದಲ್ಲೇ ನಾಯಕಿ ಇರಬೇಕು. ಹೆಚ್ಚು ಬೆಳಕು ಆಕೆಯ ಮುಖಕ್ಕೇ. ಅಕ್ಕ–ಪಕ್ಕ ಎಲ್ಲೆಲ್ಲಿ ಯಾವ ಪಾತ್ರಗಳು ಕೂರಬೇಕು ಅಥವಾ ನಿಲ್ಲಬೇಕು ಎನ್ನುವುದನ್ನೂ ಅವರು ಪೂರ್ವ ನಿರ್ಧರಿತವಾದಂತೆ ವಿನ್ಯಾಸಗೊಳಿಸಿದ್ದಾರೆ (ಗಂಗೂಬಾಯಿಯ ಆಪ್ತ ಸ್ನೇಹಿತೆ ಮೃತಪಟ್ಟಾಗ ಕೂಡ ಇದೇ ತಂತ್ರವನ್ನು ದೃಶ್ಯ ತೋರುತ್ತದೆ). ಆ ಪಾತ್ರಗಳು ತಮ್ಮ ಅವಕಾಶಕ್ಕಾಗಿ ಕಾಯ್ದಂತೆ ಮಾತನಾಡುವುದು ಕೂಡ ರಂಗತಂತ್ರದ ದುರ್ಬಲ ರೂಪಾಂತರ.

ಗಂಗೂಬಾಯಿಯ ಕಥನ ದ್ರವ್ಯ ಕಾಡುವಂಥದ್ದು. ‘ಎದೆಯೊಳಗೆ ಜ್ವಾಲೆ ಇಟ್ಟುಕೊಂಡು ಮುಖದ ಮೇಲೆ ನಾವು ಗುಲಾಬಿ ಮೂಡಿಸುತ್ತೇವೆ’ ಎಂಬ ಆ ಪಾತ್ರದಿಂದ ಹೊಮ್ಮುವ ಮಾತೇ ಇದಕ್ಕೆ ಸಾಕ್ಷಿ. ಪ್ರಕಾಶ್ ಕಪಾಡಿಯಾ ಹಾಗೂ ಉತ್ಕರ್ಷಿಣಿ ವಸಿಷ್ಠ ಇಂತಹ ಕಿಕ್ ಕೊಡುವ ಡೈಲಾಗ್‌ ಬರೆದು, ಆಲಿಯಾ ಪಾತ್ರ ಇನ್ನಷ್ಟು ಕಣ್ಣುಕೀಲಿಸಿಕೊಳ್ಳುವಂತೆ ಮಾಡಲು ಕಾರಣರಾಗಿದ್ದಾರೆ. ಸಂಚಿತ್ ಬಲ್ಹಾರ ಅವರ ಹಿನ್ನೆಲೆ ಸಂಗೀತ ಕೂಡ ಗೀತನಾಟಕಕ್ಕೆ ಪೂರಕವಾಗಿದೆ. ಬನ್ಸಾಲಿ ರಂಗತಂತ್ರದ ಅಷ್ಟೂ ಮುಚ್ಚಟೆ ಎದ್ದುಕಾಣುವಷ್ಟು ಸುದೀಪ್ ಚಟರ್ಜಿ ಸಿನಿಮಾಟೊಗ್ರಫಿ ಚೆಂದವಿದೆ. ಸಂಜಯ್ ಲೀಲಾ ಭನ್ಸಾಲಿ ಅವರೇ ಹಾಡುಗಳಿಗೆ ಹಾಕಿರುವ ಮಟ್ಟುಗಳಲ್ಲಿ ಅವರದ್ದೇ ಹಳೆಯ ಚಿತ್ರಗೀತೆಗಳ ಲಯವಿರುವುದೂ ಗುರುತಾಗುತ್ತದೆ.

ಶಂತನು ಮಹೇಶ್ವರಿ ಎಂಬ ಕುದಿಹುಡುಗನ ಆಕರ್ಷಕ ಆಂಗಿಕ ಅಭಿನಯ, ಮೂರ್ತಿಯಂತೆ ಕಾಣುವ ಇಂದಿರಾ ತಿವಾರಿಯ ಸೊಗಸುಗಾರಿಕೆ, ತೆರೆ ಇರುವುದೇ ವಿಜೃಂಭಿಸಲು ಎನ್ನುವಂತೆ ನಟಿಸುವ ವಿಜಯ್ ರಾಝ್, ಮೌನದಲ್ಲೂ ಅಗಾಧವಾದುದನ್ನು ಹೇಳಬಲ್ಲ ಸೀಮಾ ಪಾಹ್ವಾ, ನಯನಾಭಿನಯದಲ್ಲಿ ಜೈಹೋ ಎನ್ನಬೇಕಾದ ಜಿಮ್ ಸರ್ಭ್...ಇವರೆಲ್ಲ ನಿರ್ವಹಿಸಿರುವ ಪಾತ್ರಗಳ ಬರವಣಿಗೆಯಲ್ಲಿ ಇನ್ನಷ್ಟು ರಕ್ತ–ಮಾಂಸ ಇರಬೇಕಿತ್ತು.

ಆಲಿಯಾ ಭಟ್ ತಮಗೆ ಸಿಕ್ಕಿರುವ ಈ ಅಪರೂಪದ ಪಾತ್ರವನ್ನು ನುಂಗಿ ನೀರು ಕುಡಿದಿದ್ದಾರೆ. ಚಿತ್ರದುದ್ದಕ್ಕೂ ಅವರದ್ದೇ ಭಾವದ ಮೆರವಣಿಗೆ. ಉಮ್ಮಳಿಸಿ ಬರುವ ದುಃಖವನ್ನು ತಡೆ ಹಿಡಿದು ಕಣ್ಣಂಚಿಗೆ ತೇವದ ಚೌಕಟ್ಟು ಹಾಕುವಾಗ, ಕಾಮೋತ್ಕಟನಾದ ಪ್ರೇಮಿಯನ್ನೂ ತಣ್ಣಗಾಗಿಸಿ ನೆತ್ತಿ ಮೇಲೆ ಅವನ ಕೈಯಾಡಿಸಲು ಹೇಳಿ ಮಗುವಿನಂತಾಗುವಾಗ, ಬರೆದು ಕೊಟ್ಟ ಭಾಷಣದ ಕಾಗದ ಹರಿದು ಹಾಕಿ ಲೀಲಾಜಾಲವಾಗಿ ಕಾಮಿಕ್ ರಿಲೀಫ್‌ನೊಟ್ಟಿಗೆ ಪ್ರಾಸಬದ್ಧ ಸಂಭಾಷಣೆ ಹೇಳುವಾಗ... ಆಲಿಯಾ ತಮ್ಮೊಳಗಿನ ಕಲಾವಿದೆಯಲ್ಲಿ ಯಾವ ಪರಿಯ ಆತ್ಮವಿಶ್ವಾಸ ತುಂಬಿದ್ದಾರೆನ್ನುವುದು ಢಾಳಾಗಿ ಕಾಣುತ್ತದೆ.

ಅಜಯ್ ದೇವಗನ್ ಬರುವುದು ಆಗೀಗಲಷ್ಟೆ. ಅವರ ಕಣ್ಣೋಟದಲ್ಲಿ ಈಗಲೂ ಅದೇ ಹರಿತ.

ವೇಶ್ಯೆಯ ಕಥನಕ್ಕೂ ಸುವರ್ಣ ಚೌಕಟ್ಟು ತೊಡಿಸಿರುವ ಸಂಜಯ್ ಲೀಲಾ ಭನ್ಸಾಲಿ, ತಮ್ಮ ದೃಶ್ಯವಂತಿಕೆಯ ಹಳೆಯ ರುಜುವನ್ನೇ ಜೋರಾಗಿ ಉಜ್ಜಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.