ADVERTISEMENT

Ghost Movie Review: ‘ಘೋಸ್ಟ್‌’ ಎಂಬ ಸ್ವರ್ಣಬೇಟೆ

ಶಿವರಾಜಕುಮಾರ್ ಅಭಿನಯದ ಘೋಸ್ಟ್ ಸಿನಿಮಾ

ವಿನಾಯಕ ಕೆ.ಎಸ್.
Published 19 ಅಕ್ಟೋಬರ್ 2023, 18:47 IST
Last Updated 19 ಅಕ್ಟೋಬರ್ 2023, 18:47 IST
<div class="paragraphs"><p>ಘೋಸ್ಟ್‌ ಸಿನಿಮಾದಲ್ಲಿ ಶಿವರಾಜಕುಮಾರ್</p></div>

ಘೋಸ್ಟ್‌ ಸಿನಿಮಾದಲ್ಲಿ ಶಿವರಾಜಕುಮಾರ್

   

ಚಿತ್ರ: ಘೋಸ್ಟ್‌

ನಿರ್ದೇಶನ: ಶ್ರೀನಿ

ADVERTISEMENT

ನಿರ್ಮಾಣ: ಸಂದೇಶ್‌ ಪ್ರೊಡಕ್ಷನ್‌

ತಾರಾಗಣ: ಶಿವರಾಜ್‌ಕುಮಾರ್, ಜಯರಾಮ್, ನುಪಮ್ ಖೇರ್, ರ್ಅರ್ಚನಾ ಜೋಯಿಸ್‌ ಮುಂತಾದವರು

––––––––

ಸೆಂಟ್ರಲ್‌ ಜೈಲ್‌ ಒಂದರ ಹೈಜಾಕ್‌ನೊಂದಿಗೆ ‘ಘೋಸ್ಟ್‌’ ಚಿತ್ರದ ಕಥೆ ಪ್ರಾರಂಭವಾಗುತ್ತದೆ. ಜೈಲನ್ನು ಹೈಜಾಕ್‌ ಮಾಡುವುದು ‘ಘೋಸ್ಟ್‌’ ಪಾತ್ರಧಾರಿಯಾಗಿರುವ ಶಿವರಾಜ್‌ಕುಮಾರ್‌. ಆ ಕ್ಷಣಕ್ಕೆ ‘ನಿಷ್ಕರ್ಷ’ ಸಿನಿಮಾ ನೆನಪಾಗುತ್ತದೆ. ಭರ್ಜರಿ ಫೈಟ್‌ನೊಂದಿಗೆ ಶಿವರಾಜ್‌ಕುಮಾರ್‌ ಪ್ರವೇಶಿಸುತ್ತಾರೆ. ಕೈದಿಗಳನ್ನು ಒತ್ತೆಯಾಳುಗಳಾಗಿಸಿಕೊಂಡ ಶಿವಣ್ಣ ತಂಡ ಜೈಲಿನ ಟವರ್‌–1ಗೆ ಶಿಫ್ಟ್‌ ಆಗುತ್ತದೆ. ಅಲ್ಲಿಂದ ನಂತರ ಸಿನಿಮಾದ ಮುಕ್ಕಾಲು ಭಾಗ ಇದೇ ಜೈಲಿನೊಳಗೆ ಸುತ್ತುತ್ತದೆ. ಇಡೀ ಕಥೆ 48 ಗಂಟೆಗಳಲ್ಲಿ ನಡೆಯುವ ಒಂದು ಘಟನೆಯನ್ನು ಆಧರಿಸಿದೆ.

ಶಿವರಾಜ್‌ಕುಮಾರ್‌ ಅಭಿಮಾನಿಗಳನ್ನೇ ಗಮನದಲ್ಲಿಟ್ಟುಕೊಂಡು ಕಥೆ ಹೆಣೆದಿರುವ ನಿರ್ದೇಶಕರು ತಮ್ಮ ಉದ್ದೇಶ ಈಡೇರಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಶಿವರಾಜ್‌ಕುಮಾರ್‌ ಪೂರ್ತಿ ಸಿನಿಮಾ ಆವರಿಸಿಕೊಳ್ಳುತ್ತಾರೆ. ಈಗಷ್ಟೇ ಸಿನಿಮಾರಂಗಕ್ಕೆ ಪ್ರವೇಶಿಸಿದ ಯುವನಟರಷ್ಟೆ ಹುಮ್ಮಸ್ಸಿನಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ಅವರಿಗೆ ನೀಡಿರುವ ಬಿಲ್ಡಪ್‌, ಅದಕ್ಕೆ ತಕ್ಕ ಹಿನ್ನೆಲೆ ಸಂಗೀತ, ‘ಎಲ್ಲ ಗನ್‌ನಿಂದ ಕೊಂದರೆ ನಾನು ಕಣ್ಣಿನಿಂದಲೇ ಕೊಲ್ಲುತ್ತೇನೆ’ ಎನ್ನುವ ಮೊನಚಾದ ಡೈಲಾಗ್‌ಗಳೊಂದಿಗೆ ವ್ಯಗ್ರ ನೋಟ ಬೀರುವ ಶಿವರಾಜ್‌ಕುಮಾರ್‌... ಒಟ್ಟಿನಲ್ಲಿ ಶಿವರಾಜ್‌ಕುಮಾರ್‌ ಮೆರವಣಿಗೆಯ ಸಿನಿಮಾ ಇದು.

ಆ್ಯಕ್ಷನ್‌ ಇದ್ದರೂ ರಕ್ತ ಅಷ್ಟಾಗಿ ಹರಿದಿಲ್ಲ. ಫೈಟ್‌ಗಳಲ್ಲಿ ಹೊಸತನವಿದೆ. ಹಾಡಿಗೆ ಜಾಗವಿಲ್ಲದಿದ್ದರೂ ಫೈಟ್‌ಗಳಿಗೆ ಹಾಡುಗಳಂತೆ ಭಾಸವಾಗುವ ಹಿನ್ನೆಲೆ ಸಂಗೀತ ನೀಡುವಲ್ಲಿ ಅರ್ಜುನ್‌ ಜನ್ಯ ಯಶಸ್ವಿಯಾಗಿದ್ದಾರೆ. ಜೈಲಿನ ಹೊರಗಡೆಯಿಂದ ಒಳಗೆ ಇಲಿ ಬಾಯಿಯಲ್ಲಿ ಸಂದೇಶದ ಚೀಟಿ ಕಳುಹಿಸುವುದರಿಂದ ಹಿಡಿದು ಚಿತ್ರದ ಮೊದಲಾರ್ಧದಲ್ಲಿ ಕನ್ನಡಕ್ಕೆ ಹೊಸತೆನ್ನಬಹುದಾದ ಸಾಕಷ್ಟು ಅಂಶಗಳನ್ನು ನಿರ್ದೇಶಕರು ಪ್ರತಿ ದೃಶ್ಯದಲ್ಲಿಯೂ ತರುವ ಯತ್ನ ಮಾಡಿದ್ದಾರೆ. ಪೊಲೀಸ್‌ ಅಧಿಕಾರಿಯಾಗಿ ಮಲಯಾಳ ನಟ ಜಯರಾಂ ಅಭಿನಯ ಚೆನ್ನಾಗಿದೆ. ಆದರೆ ಅವರ ಡಬ್ಬಿಂಗ್‌ನಲ್ಲಿ ಸಾಕಷ್ಟು ಕನ್ನಡ ಪದಗಳ ಉಚ್ಚಾರಣೆ ಸರಿಯಾಗಿಲ್ಲ. ಅನುಪಮ್‌ ಖೇರ್‌ ಅವರಿಗೆ ಈ ಸಿನಿಮಾದಲ್ಲಿ ಹೆಚ್ಚು ಕೆಲಸವಿಲ್ಲ. ‘ಘೋಸ್ಟ್‌–2’ಗೆ ಲೀಡ್‌ ಕೊಡುವ ಪಾತ್ರ ಅವರದ್ದು. ಆ ಭಾಗದಲ್ಲಿ ಮತ್ತೊಬ್ಬ ಹೆಸರಾಂತ ನಟನ ಪ್ರವೇಶವಾಗುತ್ತದೆ ಎಂಬ ಸುಳಿವನ್ನು ಚಿತ್ರದ ಕೊನೆಯಲ್ಲಿ ನಿರ್ದೇಶಕರು ನೀಡಿದ್ದಾರೆ. 

ಕಥೆಯಲ್ಲಿ ಸಾಕಷ್ಟು ಗೊಂದಲಗಳಿವೆ. ಜೈಲಿನಲ್ಲಿ ಹುದುಗಿಸಿಟ್ಟ ಚಿನ್ನ, ಅದರ ಹುಡುಕಾಟ ಕೆಜಿಎಫ್‌ ಕಥೆಯ ಟ್ರ್ಯಾಕ್‌ ಅನ್ನು ನೆನಪಿಸುತ್ತದೆ. ಹಲವೆಡೆ ಮೇಕಿಂಗ್‌ ಕೂಡ ಅದಕ್ಕೆ ಇಂಬು ನೀಡುತ್ತದೆ. ನೋಡುಗನ ಬುದ್ದಿಗೆ ಕಸರತ್ತು ನೀಡುವ ನಿರ್ದೇಶಕರ ಯತ್ನದಿಂದಾಗಿ ಲಾಜಿಕ್‌ ಎಂಬ ಪದಕ್ಕೆ ಚಿತ್ರದಲ್ಲಿ ಅರ್ಥ ಸಿಗುವುದು ಕಷ್ಟ. ‘ಓಂ’ ಸಿನಿಮಾದ ಸತ್ಯನನ್ನು ನೆನಪಿಸುವ ಶಿವರಾಜ್‌ಕುಮಾರ್‌ ಲುಕ್‌ ಸಿನಿಮಾದ ದ್ವಿತಿಯಾರ್ಧದ ಹೈಲೈಟ್‌. ಛಾಯಾಗ್ರಹಣವು ಕೂಡ ಸಿನಿಮಾದ ಶ್ರೀಮಂತಿಕೆಯನ್ನು ಹೆಚ್ಚಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.