ADVERTISEMENT

ಮೂಕಿಯಾದ ‘ದುನಿಯಾ’ ರಶ್ಮಿ: ‘ಕಾರ್ನಿ’ಯ ಕತ್ತಲೆಯಾಟದ ಕಥಾನಕ

ಕೆ.ಎಚ್.ಓಬಳೇಶ್
Published 14 ಸೆಪ್ಟೆಂಬರ್ 2018, 10:38 IST
Last Updated 14 ಸೆಪ್ಟೆಂಬರ್ 2018, 10:38 IST
‘ಕಾರ್ನಿ’ ಚಿತ್ರದಲ್ಲಿ ನಿರಂತ್‌ ಮತ್ತು ‘ದುನಿಯಾ’ ರಶ್ಮಿ
‘ಕಾರ್ನಿ’ ಚಿತ್ರದಲ್ಲಿ ನಿರಂತ್‌ ಮತ್ತು ‘ದುನಿಯಾ’ ರಶ್ಮಿ   

ಚಿತ್ರ: ಕಾರ್ನಿ
ನಿರ್ಮಾಪಕರು: ಗೋವಿಂದರಾಜು
ನಿರ್ದೇಶನ: ವಿನೋದ್‌ ಕುಮಾರ್
ತಾರಾಗಣ: ‘ದುನಿಯಾ’ ರಶ್ಮಿ, ನಿರಂತ್, ರಾಜೇಶ್‌ ರಾಮಕೃಷ್ಣ

ಅದು ಕಗ್ಗತ್ತಲ ರಾತ್ರಿ. ಅದೊಂದು ಒಂಟಿ ಬಂಗಲೆ. ‘ಕಾರ್ನಿ’ ಹೆಸರಿನ ಕಾದಂಬರಿಯ ಎರಡನೇ ಭಾಗ ಬರೆಯಲು ತನು ಅಲ್ಲಿಗೆ ಬರುತ್ತಾಳೆ (ದುನಿಯಾ ರಶ್ಮಿ). ಆಕೆ ಮೂಕಿ. ಆ ಬಂಗಲೆಯ ಬಳಿಗೆ ಕೈಯಲ್ಲಿ ಚಾಕು ಹಿಡಿದ ಮುಸುಕುಧಾರಿಯೊಬ್ಬ ಬರುತ್ತಾನೆ. ಈತ ಕೂಡ ಮಾತನಾಡುವುದಿಲ್ಲ. ಒಳಗೆ ನುಸುಳಿ ಆಕೆಯನ್ನು ಕೊಲ್ಲುವುದೇ ಅವನ ಮೂಲ ಉದ್ದೇಶ. ಅದಕ್ಕಾಗಿ ಬಂಗಲೆಯ ಹೊರಗೆ ಸುತ್ತುತ್ತಾನೆ. ಬಾಗಿಲು ಭದ್ರಪಡಿಸಿದ್ದರಿಂದ ಒಳಗೆ ನುಗ್ಗಲು ಆತನಿಗೆ ಸಾಧ್ಯವಾಗುವುದಿಲ್ಲ. ಇನ್ನೊಂದೆಡೆ ಅವನಿಂದ ತಪ್ಪಿಸಿಕೊಳ್ಳಲು ಆಕೆಯದ್ದು ಬಂಗಲೆಯೊಳಗೆ ಹರಸಾಹಸ. ಈ ಇಬ್ಬರ ನಡುವಿನ ಕತ್ತಲೆಯಾಟದಲ್ಲಿ ಕಥೆ ಹುಡುಕಲು ನೋಡುಗರು ಚಡಪಡಿಸುತ್ತಾರೆ.

ಭಾವನೆಗಳ ಜೊತೆಗೆ ಚೆಲ್ಲಾಟವಾಡಿದಾಗ ಎದುರಾಗುವ ಅನಾಹುತವನ್ನು ‘ಕಾರ್ನಿ’ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ವಿನೋದ್‌ ಕುಮಾರ್. ಆದರೆ, ಅವರ ಕತ್ತಲೆಯಾಟದ ಸಸ್ಪೆನ್ಸ್‌, ಥ್ರಿಲ್ಲರ್‌ ಕಥನ ಮೊದಲಾರ್ಧದಲ್ಲಿಯೇ ಸೊರಗಿದೆ. ಚಿತ್ರದ ಆರಂಭದಲ್ಲಿಯೇ ಒಬ್ಬಳ ಕೊಲೆ ಮತ್ತು ಇನ್ನೊಬ್ಬಳ ನಾಪತ್ತೆಯ ನಿಗೂಢ ಪ್ರಶ್ನೆ ಮುಂದಿಟ್ಟು, ಕೊನೆಗೆ ಅದಕ್ಕೊಂದು ಸಮರ್ಥ ಉತ್ತರ ನೀಡಲು ನಿರ್ದೇಶಕರು ಪ್ರಯಾಸಪಟ್ಟಿದ್ದಾರೆ.

ADVERTISEMENT

ಐವರು ಹೆಂಗಳೆಯರು ನಿಗೂಢವಾಗಿ ಕಾಣೆಯಾಗುತ್ತಾರೆ. ಎಲ್ಲರ ವಯಸ್ಸು ಇಪ್ಪತ್ತೊಂಬತ್ತು. ಜೊತೆಗೆ, ಅವರೆಲ್ಲರೂ ಒಂದೇ ಶಾಲೆಯಲ್ಲಿ ಸಹಪಾಠಿಗಳು. ಅವರು ಓದಿದ ಶಾಲೆಯಲ್ಲಿಯೇ ನರಹರಿಯೂ ಓದುತ್ತಿರುತ್ತಾನೆ. ಆತನಿಗೆ ತಂಗಿಯೊಬ್ಬಳು ಇರುತ್ತಾಳೆ. ಅವನಲ್ಲಿ ಉಂಟಾಗುವ ದೈಹಿಕ ಬದಲಾವಣೆಯನ್ನು ನಾಪತ್ತೆಯಾದ ಹೆಂಗಳೆಯರು ಶಾಲಾ ದಿನಗಳಲ್ಲಿ ದುರ್ಬಳಕೆ ಮಾಡಿಕೊಂಡಿರುತ್ತಾರೆ. ಇನ್ನೊಂದೆಡೆ ಆತನ ಅಮ್ಮ ಕೂಡ ಅವನನ್ನು ಒಪ್ಪಿಕೊಳ್ಳುವುದಿಲ್ಲ. ನೊಂದ ಆತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಕೊನೆಗೆ, ನರಹರಿಯ ಸಾವಿಗೆ ಈ ಐವರು ಹೆಂಗಳೆಯರು ಜೀವ ಕಳೆದುಕೊಳ್ಳುತ್ತಾರೆ. ಅವರನ್ನು ಕೊಂದವರು ಯಾರು ಎನ್ನುವುದನ್ನು ಚಿತ್ರ ನೋಡಿಯೇ ತಿಳಿದುಕೊಳ್ಳಬೇಕು.

ದ್ವಿತೀಯಾರ್ಧದಲ್ಲಿ ಕಥೆಗೊಂದು ಬಿಗಿತನ ನೀಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಪ್ರೇಕ್ಷಕರಿಗೆ ಕಥೆ ಅರ್ಥ ಮಾಡಿಸಲು ಯತ್ನಿಸಿರುವ ಕಸರತ್ತು ಎದ್ದುಕಾಣುತ್ತದೆ. ಆದರೆ ದುರ್ಬಲವಾದ ಚಿತ್ರಕಥೆ, ಜಾಳು ಪಾತ್ರ ಪೋಷಣೆ, ನೀರಸ ನಿರೂಪಣೆಯಿಂದ ಕಥೆ ಪೇಲವವಾಗಿ ಸಾಗುತ್ತದೆ.

ಮೂಕಿ ಪಾತ್ರದಲ್ಲಿ‘ದುನಿಯಾ’ ರಶ್ಮಿ ಅವರ ಅಭಿನಯ ಚೆನ್ನಾಗಿದೆ.ಕೆಲವು ದೃಶ್ಯಗಳಿಗಷ್ಟೇ ಸೂರ್ಯೋದಯ ಅವರ ಛಾಯಾಗ್ರಹಣ ಸಹನೀಯವಾಗಿದೆ. ಅರಿಂದಮ್‌ ಗೋಸ್ವಾಮಿ ಅವರ ಸಂಗೀತ ಚಿತ್ರಕ್ಕೆ ಹೊಸದೇನನ್ನೂ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.