ADVERTISEMENT

‘ಕೊತ್ತಲವಾಡಿ’ ಸಿನಿಮಾ ವಿಮರ್ಶೆ: ಸಿದ್ಧಸೂತ್ರಕ್ಕೆ ಜೋತುಬಿದ್ದ ಕಥೆ

ಅಭಿಲಾಷ್ ಪಿ.ಎಸ್‌.
Published 1 ಆಗಸ್ಟ್ 2025, 9:13 IST
Last Updated 1 ಆಗಸ್ಟ್ 2025, 9:13 IST
ಪೃಥ್ವಿ ಅಂಬಾರ್‌ 
ಪೃಥ್ವಿ ಅಂಬಾರ್‌    

ಸಿನಿಮಾದಲ್ಲಿ ಅದ್ಭುತವಾಗಿ ನಟಿಸುವ ಸಾಮರ್ಥ್ಯವಿರುವ ಕಲಾವಿದರಿದ್ದರೂ, ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ಸುರಿದಿದ್ದರೂ, ಪ್ರಚಾರ ಭರಪೂರವಾಗಿ ನಡೆಸಿದ್ದರೂ ಆ ಸಿನಿಮಾದ ನಿರ್ದೇಶಕನಿಗೆ ಚಿತ್ರಕಥೆ, ನಿರೂಪಣೆಯ ಮೇಲೆ ಹಿಡಿತವಿಲ್ಲದೇ ಹೋದರೆ ಅದು ಎಡವುವುದು ಖಚಿತ. ‘ಕೊತ್ತಲವಾಡಿ’ಯ ಒನ್‌ಲೈನ್‌ ಸ್ಟೋರಿ, ಕಲಾವಿದರ ನಟನೆ ಚೆನ್ನಾಗಿದೆ. ಆದರೆ ಅದನ್ನು ಸೂಕ್ತವಾಗಿ ತೆರೆ ಮೇಲೆ ತರುವಲ್ಲಿ ನಿರ್ದೇಶಕರು ವಿಫಲರಾಗಿದ್ದಾರೆ. ಟ್ರೇಲರ್‌ನಲ್ಲಿ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಸಿದ್ದ ಈ ಸಿನಿಮಾ ತೆರೆ ಮೇಲೆ ಮ್ಯಾಜಿಕ್‌ ಮಾಡಿಲ್ಲ. 

ಕಾವೇರಿ ನದಿ ಹರಿಯುವ ಗ್ರಾಮ ‘ಕೊತ್ತಲವಾಡಿ’. ಅಲ್ಲಿ ಅನಾಥವಾಗಿ ಬೆಳೆದ ಹುಡುಗ ಮೋಹನ (ಪೃಥ್ವಿ ಅಂಬಾರ್‌). ಕೆಲಸಕ್ಕೆ ಜನರನ್ನು ಒಟ್ಟುಗೂಡಿಸಿ ಕಳುಹಿಸುವ ಕೆಲಸ ಆತನದ್ದು. ಹೀಗಾಗಿ ಊರಿನ ಜನರಿಗೆ ಆತ ಅಚ್ಚುಮೆಚ್ಚು. ಅದೇ ಊರಿನಲ್ಲಿ ಅಜ್ಜಿಯ ಆಶ್ರಯದಲ್ಲಿ ಬೆಳೆಯುತ್ತಿರುವ ಮಂಜಿ (ಕಾವ್ಯಾ ಶೈವ) ಈತನ ಪ್ರೇಯಸಿ. ಊರಿನಲ್ಲಿ ಗುಜುರಿ ಅಂಗಡಿ ಇಟ್ಟುಕೊಂಡ ರಮೇಶ್‌ ಬಾಬು ಅಲಿಯಾಸ್‌ ಬಾಬಣ್ಣ (ಗೋಪಾಲಕೃಷ್ಣ ದೇಶಪಾಂಡೆ) ಕಸದಿಂದ ರಾಮರಸ ತೆಗೆಯುವಷ್ಟು ಚಾಲಾಕಿ. ಇಂತಹ ಊರಿನ ಜನ ಅಡವಿಟ್ಟಿದ್ದ ತಮ್ಮ ಜಮೀನು ವಾಪಸ್‌ ಪಡೆದುಕೊಳ್ಳವ ನಿಟ್ಟಿನಲ್ಲಿ ಬಾಬಣ್ಣನ ಮಾತಿನ ಮೋಡಿಗೆ ಒಳಗಾಗುತ್ತಾರೆ. ಇಲ್ಲಿಂದ ಕಥೆ ತೆರೆದುಕೊಳ್ಳಲಾರಂಭಿಸುತ್ತದೆ. 

ಸಿದ್ಧಸೂತ್ರಗಳಿಗೆ ಅಂಟಿಕೊಂಡಂತೆ ನಿರ್ದೇಶಕರು ಇಲ್ಲಿ ಹೆಜ್ಜೆ ಇಟ್ಟಿದ್ದಾರೆ. ಇದು ಚಿತ್ರಕಥೆಯನ್ನು ಪೇಲವವಾಗಿಸಿದೆ. ಅನಗತ್ಯ ಹಾಡು, ಫೈಟ್‌ಗಳನ್ನು ತೂರಿಸಲಾಗಿದೆ. ಬೈಕ್‌ ಮೇಲಿಂದಲೇ ಖಳನಾಯಕನಿಗೆ ನಾಯಕ ಹಾರಿ ಒದ್ದು ಮತ್ತೆ ಬೈಕ್‌ ಮೇಲೇ ಕುಳಿತುಕೊಳ್ಳುವ ದೃಶ್ಯವಂತೂ ಭಯಾನಕ! ನದಿ ದಡದಿಂದ ಮರಳು ಎತ್ತುವಾಗ ಹಾಡು ಏಕೆ ಬರುತ್ತದೋ? ಪೊಲೀಸರು ಸಮವಸ್ತ್ರದಲ್ಲಿರುವಾಗಲೇ ಅವರ ಮೇಲೆ ಹಲ್ಲೆ ನಡೆಸಿದ ಹೀರೊ ಸಿನಿಮಾದುದ್ದಕ್ಕೂ ಆರಾಮವಾಗಿ ಓಡಾಡಿಕೊಂಡಿರುವುದು ಹೇಗೆ? ಮೈಸೂರು ಭಾಗದ ಕನ್ನಡ ಮಾತನಾಡುವ ಮೋಹನ ವೇದಿಕೆ ಹತ್ತಿದ ತಕ್ಷಣ ಬೆಂಗಳೂರು ಕನ್ನಡ ಹೇಗೆ ಮಾತನಾಡುತ್ತಾನೆ? ಶಾಸಕನಾಗಲು ಒಂದು ಗ್ರಾಮದ ಮತ ಸಾಕೇ? ಎಂಬಿತ್ಯಾದಿ ಸಾಲು ಸಾಲು ಪ್ರಶ್ನೆಗಳನ್ನು ಈ ಚಿತ್ರಕಥೆ ಉಳಿಸುತ್ತದೆ. ತಾನೇ ಸಾಯಿಸಿರುವ ಹತ್ತಾರು ಖಳ ದೇಹಗಳ ನಡುವೆ ನಿಂತು ‘ಬಾಬಣ್ಣನನ್ನು ಕೊಂದು ನಾವ್ಯಾಕೆ ಜೈಲಿಗೆ ಹೋಗಬೇಕು’ ಎಂಬ ನಾಯಕನ ಪ್ರಶ್ನೆ ಆಶ್ಚರ್ಯ ಹುಟ್ಟಿಸುತ್ತದೆ. 

ADVERTISEMENT

ಚುನಾವಣೆ, ಮತದಾನ, ಮತ ಎಣಿಕೆ ಪ್ರಕ್ರಿಯೆ ಹೇಗಿರುತ್ತದೆ, ಪೊಲೀಸ್‌ ಇಲಾಖೆ ಕಾರ್ಯವೈಖರಿ ಬಗ್ಗೆ ಏನನ್ನೂ ಅಧ್ಯಯನ ಮಾಡದೇ ಚಿತ್ರಕಥೆ ಬರೆಯಲಾಗಿದೆ. ಹಲವು ದೃಶ್ಯಗಳಿಗೆ ಜೀವಂತಿಕೆಯೇ ಇಲ್ಲ. ಪೊಲೀಸ್‌ ಅಧಿಕಾರಿಗಳ ಪಾತ್ರದ ಬರವಣಿಗೆಯೇ ಕೃತಕವಾಗಿದೆ. ಕೆಲವೆಡೆ ಸಂಭಾಷಣೆಗಳು ಭಾಷಣದಂತಿವೆ. ಇಂತಹ ವಿಚಾರಗಳನ್ನು ಬಿಗಿಯಾಗಿಸುವುದರ ಜೊತೆಗೆ ಹೇಳಹೊರಟಿರುವ ವಿಷಯದ ಬಗ್ಗೆ ಸ್ಪಷ್ಟತೆ ಇದ್ದಿದ್ದರೆ ಚಿತ್ರದ ಕಥೆಗೂ ನ್ಯಾಯ ದೊರಕಿಸಿಕೊಡಬಹುದಿತ್ತು.   

ಗೋಪಾಲಕೃಷ್ಣ ದೇಶಪಾಂಡೆ ‘ಬಾಬಣ್ಣ’ನಾಗಿ ತಮ್ಮ ಪಾತ್ರದೊಳಗೆ ಜೀವಿಸಿದ್ದಾರೆ. ಇಂತಹ ಒಂದು ಪಾತ್ರವನ್ನು ಬರೆದ ನಿರ್ದೇಶಕರ ಆಲೋಚನೆ ಚೆನ್ನಾಗಿದೆ. ನಾಲ್ಕೈದು ಶೇಡ್‌ಗಳಲ್ಲಿ ಅವರು ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಪೃಥ್ವಿ ಅಂಬಾರ್‌, ಕಾವ್ಯಾ ಶೈವ, ರಾಜೇಶ್‌ ನಟರಂಗ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಕಾರ್ತಿಕ್‌ ಎಸ್‌.ಛಾಯಾಚಿತ್ರಗ್ರಹಣ ಚೆನ್ನಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.