ADVERTISEMENT

ದುನಿಯಾ ವಿಜಯ್ 'ಲ್ಯಾಂಡ್‌ಲಾರ್ಡ್': ಗಟ್ಟಿ ಕಥೆಯ ಹಳಿ ತಪ್ಪಿಸಿದ ಚಿತ್ರಕಥೆ

ವಿನಾಯಕ ಕೆ.ಎಸ್.
Published 23 ಜನವರಿ 2026, 14:09 IST
Last Updated 23 ಜನವರಿ 2026, 14:09 IST
ವಿಜಯ್‌
ವಿಜಯ್‌   

‘ಸರ್ವರಿಗೂ ಸಮಾನತೆ ಇರಬೇಕು’ ಎಂಬ ಸಂವಿಧಾನದ ಮೂಲ ಆಶಯವನ್ನು ಎತ್ತಿಹಿಡಿಯುವ ಕಥೆ ಹೊಂದಿರುವ ಸಿನಿಮಾವಿದು. ಭೂ ಮಾಲೀಕರು ಮತ್ತು ಕೂಲಿ ಕಾರ್ಮಿಕ ವರ್ಗದ ನಡುವೆ ಭೂಮಿಗಾಗಿ ನಡೆಯುವ ಹೋರಾಟವೇ ಚಿತ್ರದ ಒಟ್ಟಾರೆ ಕಥೆ. ‘ಕಾಂತಾರ’, ‘ಕಾಟೇರ’ ರೀತಿಯದ್ದೇ ಎಳೆಯ ಚಿತ್ರವೆನಿಸಿದರೂ, ಇಲ್ಲಿ ಗಂಭೀರವಾದ ಕಥಾವಸ್ತುವನ್ನು ಅದೇ ಧ್ವನಿಯಲ್ಲಿಯೇ ದಾಟಿಸುವ ಯತ್ನವನ್ನು ನಿರ್ದೇಶಕ ಜಡೇಶ್‌ ಹಂಪಿ ಮಾಡಿದ್ದಾರೆ. ಆದರೆ ಕೆಲವಷ್ಟು ಅಮಾನವೀಯ ಘಟನೆಗಳು ಮತ್ತು ಅದಕ್ಕೆ ಉತ್ತರ ನೀಡುವ ಚಿತ್ರದ ನಾಯಕನ ಸುತ್ತಲೇ ಸುತ್ತುತ್ತ, ಹೊಸತೇನನ್ನೂ ಹುಡುಕದ ಚಿತ್ರಕಥೆ ಕೆಲವು ಕಡೆ ಜಾಳಾಗಿದೆ ಎನ್ನುವ ಭಾವನೆ ಮೂಡಿಸುತ್ತದೆ. ಪ್ರಾರಂಭದಲ್ಲಿ ಒಂದಷ್ಟು ‘ವಾವ್‌’ ಎನಿಸುವ ಅಂಶಗಳನ್ನು ಹೊಂದಿರುವ ಬರವಣಿಗೆ ಗುಣಮಟ್ಟ ಕುಸಿಯುತ್ತ ಕ್ಲೈಮ್ಯಾಕ್ಸ್‌ ಹೊತ್ತಿಗೆ ಹಳಿ ತಪ್ಪಿಬಿಡುತ್ತದೆ.

ಕೋಲಾರದ ಕಾಲ್ಪನಿಕ ಊರು ಹುಲಿದುರ್ಗ. ಅಲ್ಲೊಂದು ದುಡಿಯುವ ವರ್ಗ. ಅವರನ್ನು ಆಳುವ ಸಣ್ಣ ಧಣಿ. ಕುರಿ ಕದ್ದಿರುವುದಕ್ಕೆ ಕೂಲಿ ಕಾರ್ಮಿಕ ವರ್ಗದ ಹುಡುಗರನ್ನು ದಂಡಿಸುವ ಧಣಿಯ ದರ್ಪದಿಂದಲೇ ಸಿನಿಮಾ ಪ್ರಾರಂಭವಾಗುತ್ತದೆ. ಒಂದು ಸಮುದಾಯಕ್ಕೆ ಸೇರಿದ ಕೂಲಿಯವರನ್ನು ಮತ್ತೊಂದು ವರ್ಗದವರು ಅಮಾನವೀಯವಾಗಿ ನಡೆಸಿಕೊಳ್ಳುವುದು, ಅವರಿಂದ ಭೂಮಿ ಪಡೆದುಕೊಳ್ಳಲು ಈ ವರ್ಗದವರು ಹೋರಾಡುವುದೇ ಕಥೆ ಎಂಬುದು ಪ್ರಾರಂಭದಲ್ಲಿಯೇ ಗೊತ್ತಾಗಿಬಿಡುತ್ತದೆ. ಇಡೀ ಮೊದಲಾರ್ಧದ ಬರವಣಿಗೆ ಬಹಳ ಚೆಂದವಾಗಿದೆ. ಜತೆಗೆ ಅದನ್ನು ದೃಶ್ಯೀಕರಿಸಿದ ರೀತಿಯೂ ಅದ್ಭುತ. ಸಾಕಷ್ಟು ಕಡೆ ಕೂಲಿ ಕಾರ್ಮಿಕರಿಗೆ ಆಗುವ ಅವಮಾನಗಳು ನೋಡುಗನ ರಕ್ತ ಕುದಿಯುವಂತೆ ಮಾಡುತ್ತದೆ. ಕುಡುಕ ಗೋಪಾಲಕೃಷ್ಣ ದೇಶಪಾಂಡೆ, ಆತನ ಅಂಧ ಮಗಳ ಪುಟ್ಟಕಥೆ ಕಣ್ಣಂಚಿನಲ್ಲಿ ನೀರನ್ನೇ ತರಿಸುತ್ತದೆ. ಇಂಥ ಸಾಕಷ್ಟು ಸನ್ನಿವೇಶಗಳು ಚಿತ್ರದ ಮೊದಲಾರ್ಧದಲ್ಲಿ ಸಿಗುತ್ತವೆ.

ಈ ಊರಿನ ನಾಯಕ ರಾಚಯ್ಯ. ಹೆಂಡತಿ ನಿಂಗವ್ವ ಮತ್ತು ಮಗಳು ಭಾಗ್ಯಳೆ ಈತನ ಪ್ರಪಂಚ. ಕೊಡಲಿ ರಾಚಯ್ಯ ಎಂದೇ ಖ್ಯಾತಿ ಪಡೆದ ಈತನ ಕುರಿತು ಸಣ್ಣ ಧಣಿಗೂ ಒಂದು ಸಣ್ಣ ಭಯವಿರುತ್ತದೆ. ಆದರೆ ಎಷ್ಟೇ ಅವಮಾನವಾದರೂ ರಾಚಯ್ಯ ಮಾತ್ರ ಒಂದು ಹಂತದವರೆಗೂ ಸಿಡಿದೇಳುವುದಿಲ್ಲ. ಅದಕ್ಕೊಂದು ಕಾರಣವೂ ಇರುತ್ತದೆ. ಮೊದಲಾರ್ಧ ಮುಗಿಯುವ ಹೊತ್ತಿಗೆ ಶಸ್ತ್ರತ್ಯಾಗ ಮಾಡಿದ್ದ ರಾಚಯ್ಯ ಮತ್ತೆ ಕೊಡಲಿಯನ್ನು ಕೈಗೆತ್ತಿಕೊಂಡು ಸಣ್ಣ ಧಣಿಯ ವಿರುದ್ಧ ಹೋರಾಟಕ್ಕೆ ನಿಲ್ಲುತ್ತಾನೆ.

ADVERTISEMENT

ರಾಚಯ್ಯ–ನಿಂಗವ್ವನ ಪುಟ್ಟ ಪ್ರಪಂಚ, ಇಡೀ ಊರಿನಲ್ಲಿ ಎಸ್ಸೆಸ್ಸೆಲ್ಸಿ ಪಾಸು ಮಾಡಿ ಕಾನ್‌ಸ್ಟೇಬಲ್‌ ಆಗಿರುವ ಭಾಗ್ಯ, ಆಕೆಯನ್ನು ಗಿಳಿಯಂತೆ ಸಾಕುವ ರಾಚಯ್ಯ, ಸಣ್ಣ ಧಣಿಯ ಐಷಾರಾಮಿ ಲೋಕ, ಭಾಗ್ಯ ಮತ್ತು ಆಕೆಯ ಪ್ರಿಯಕರ ದೇವಿಯೊಂದಿಗಿನ ಪ್ರೇಮ ಸಲ್ಲಾಪ ಮುಂತಾದವು ಮೊದಲಾರ್ಧವನ್ನು ನೋಡಿಸಿಕೊಂಡು ಹೋಗುತ್ತವೆ. ಆದರೆ ದ್ವೀತಿಯಾರ್ಧದಲ್ಲಿ ಹೋರಾಟದ ಕಿಚ್ಚು ಹೆಚ್ಚಿ, ಹೊಡೆದಾಟ, ಬಡಿದಾಟಗಳೇ ಆವರಿಸಿಕೊಂಡು ಭಾವನಾತ್ಮಕ ಅಂಶಗಳು ಕಣ್ಮರೆಯಾಗುತ್ತವೆ. ಆ ಊರಿನಲ್ಲಿ ಪೊಲೀಸ್‌ ಠಾಣೆಯಿದ್ದರೂ, ಅದರ ನಿಯಂತ್ರಕ ಸಣ್ಣ ಧಣಿ. ಅಂಥ ಹೊತ್ತಿನಲ್ಲೂ ತನ್ನ ಮೇಲಿನ ಅಧಿಕಾರಿಗಳ ಅನುಮತಿ ಪಡೆದು ಆತನನ್ನು ಬಂಧಿಸುವ ಭಾಗ್ಯ, ಕ್ಲೈಮ್ಯಾಕ್ಸ್‌ನಲ್ಲಿ ಪ್ರತಿಭಟಿಸಲಾಗದಂತೆ ಬಸವಿಯಾಗಲು ಕುಳಿತುಕೊಳ್ಳುವುದು ತರ್ಕ ರಹಿತ ಎನ್ನಿಸಿಬಿಡುತ್ತದೆ. ಖಳರ ಗುಂಪಿನಿಂದ ಮಾರಣಾಂತಿಕ ಹಲ್ಲೆಗೆ ಒಳಗಾದ ರಾಚಯ್ಯ ಕ್ಷಣಾರ್ಧದಲ್ಲಿ ಹೇಗೆ ಎದ್ದು ಬಂದ ಎಂಬುದು ತಿಳಿಯುವುದಿಲ್ಲ! ದ್ವಿತೀಯಾರ್ಧದಲ್ಲಿ ತರ್ಕವಿಲ್ಲದ ಇಂಥ ಅನೇಕ ಸಂಗತಿಗಳು ಚಿತ್ರಕಥೆಯ ಹಳಿ ತಪ್ಪಿಸಿಬಿಡುತ್ತದೆ. 

ರಾಚಯ್ಯನಾಗಿ ದುನಿಯಾ ವಿಜಯ್‌ ಅಕ್ಷರಶಃ ತಾನೊಬ್ಬ ಅದ್ಭುತ ನಟ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಮಾಸ್‌ ನಾಯಕ ಎಂಬುದನ್ನು ಪಕ್ಕಕ್ಕಿಟ್ಟು, ಪಾತ್ರವಾಗಿ ಚಪ್ಪಲಿಯಲ್ಲಿ ಏಟು ತಿನ್ನುತ್ತಾರೆ, ಚಪ್ಪಲಿ ಹಾರ ಹಾಕಿಸಿಕೊಳ್ಳುತ್ತಾರೆ. ಅಷ್ಟು ಶ್ರದ್ಧೆಯಿಂದ ಪಾತ್ರವನ್ನು ನಿಭಾಯಿಸಿದ್ದಾರೆ. ನಿಂಗವ್ವನಾಗಿ ರಚಿತಾ ರಾಮ್‌ ಕೂಡ ಪಾತ್ರವನ್ನು ಜೀವಿಸಿದ್ದಾರೆ. ಸಣ್ಣ ಧಣಿಯಾಗಿ ರಾಜ್‌ ಬಿ.ಶೆಟ್ಟಿ ನಟನೆಯಲ್ಲಿ ಶ್ರಮ ಹಾಕಿದ್ದಾರೆ. ಆದರೆ ಅವರ ಪಾತ್ರದ ಗತ್ತು, ಕೋಲಾರ ಭಾಗದ ಕನ್ನಡ ಅವರಿಗೆ ಒಗ್ಗಿಲ್ಲ. ಹೀಗಾಗಿ ಆ ಪಾತ್ರ ತುಸು ಕೃತಕ ಎಂಬ ಭಾವನೆ ಮೂಡಿಸುತ್ತದೆ. ರಾಚಯ್ಯನ ತಾಯಿಯಾಗಿ ಉಮಾಶ್ರೀ ಪಾತ್ರ ನೆನಪಿನಲ್ಲಿ ಉಳಿಯುತ್ತದೆ. ಭಾಗ್ಯ ಆಗಿ ರಿತನ್ಯ ವಿಜಯ್‌ ಅವರದ್ದು ಮೊದಲ ಸಿನಿಮಾ ಅನ್ನಿಸುವುದಿಲ್ಲ. ಶಿಶಿರ್‌ ಬೈಕಾಡಿ, ಗೋಪಾಲಕೃಷ್ಣ ದೇಶಪಾಂಡೆ ತೆರೆಯ ಮೇಲೆ ಇದ್ದಷ್ಟು ಹೊತ್ತು ತಮ್ಮ ಛಾಪು ಮೂಡಿಸುತ್ತಾರೆ.

ಸ್ವಾಮಿ ಜೆ.ಗೌಡ ಅವರ ಛಾಯಾಚಿತ್ರಗ್ರಹಣ ಸೊಗಸಾಗಿದೆ. ಅಜನೀಶ್‌ ಲೋಕನಾಥ್‌ ಅವರ ಹಿನ್ನೆಲೆ ಸಂಗೀತ ಸಾಕಷ್ಟು ಕಡೆ ‘ಕಾಂತಾರ’ ಚಿತ್ರದ ರಾಗಗಳನ್ನೇ ನೆನಪಿಸುತ್ತದೆ. ಭಾಗ್ಯ ಅಥವಾ ನಿಂಗವ್ವಳ ಮೇಲೆ ಕ್ಲೈಮ್ಯಾಕ್ಸ್‌ ಯೋಚಿಸಿ, ದ್ವಿತಿಯಾರ್ಧದ ಅವಧಿಯನ್ನು ತುಸು ತಗ್ಗಿಸಿದ್ದರೆ ಚಿತ್ರ ಇನ್ನೊಂದು ಹಂತಕ್ಕೆ ಹೋಗುವ ಸಾಧ್ಯತೆ ಇತ್ತು.

ನೋಡಬಹುದಾದ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.