ADVERTISEMENT

’ಲವ್‌ ಯೂ ರಚ್ಚು’ ಸಿನಿಮಾ ವಿಮರ್ಶೆ: ಪ್ರೀತಿ ಗೌಣ ಅಪರಾಧವೇ ಎಲ್ಲಾ

ನವೀನ ಕುಮಾರ್ ಜಿ.
Published 31 ಡಿಸೆಂಬರ್ 2021, 13:09 IST
Last Updated 31 ಡಿಸೆಂಬರ್ 2021, 13:09 IST
‘ಲವ್‌ ಯೂ ರಚ್ಚು’ ಸಿನಿಮಾದಲ್ಲಿ ಅಜಯ್‌ ರಾವ್ ಮತ್ತು ರಚಿತಾ ರಾಮ್
‘ಲವ್‌ ಯೂ ರಚ್ಚು’ ಸಿನಿಮಾದಲ್ಲಿ ಅಜಯ್‌ ರಾವ್ ಮತ್ತು ರಚಿತಾ ರಾಮ್   

ಚಿತ್ರ: ಲವ್ ಯೂ ರಚ್ಚು
ನಿರ್ಮಾಣ: ಗುರು ದೇಶಪಾಂಡೆ
ನಿರ್ದೇಶನ: ಶಂಕರ್ ಎಸ್. ರಾಜ್
ತಾರಾಗಣ: ಅಜಯ್ ರಾವ್, ರಚಿತಾ ರಾಮ್, ಅಚ್ಯುತ ಕುಮಾರ್, ಅರುಣ್ ಗೌಡ, ರಘು ಶಿವಮೊಗ್ಗ

ಸಾಮಾನ್ಯ ಕ್ರೈಂ-ಥ್ರಿಲ್ಲರ್ ಚಿತ್ರಗಳ ಸಿದ್ಧ ಸೂತ್ರಗಳನ್ನೇ ಬಳಸಿದರೂ ಅಲ್ಪ ಪ್ರೇಮ ಕಥೆಯನ್ನೂ ಬೆರೆಸುವ ಮೂಲಕ ಶಂಕರ್ ಎಸ್. ರಾಜ್ ಅವರು ‘ಲವ್ ಯೂ ರಚ್ಚು’ ಚಿತ್ರವನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ.

ಹಾಗಂತ ಚಿತ್ರದ ಹೆಸರು ಕೇಳಿ ಇದೊಂದು ನವಿರು ಪ್ರೇಮ ಕಥೆಯನ್ನು ಹೊಂದಿರುವ ಚಿತ್ರ ಎಂದುಕೊಂಡರೆ ನಿರಾಸೆ ಕಾಡದಿರದು. ಇಲ್ಲಿ ಪ್ರೇಮ ಕಥೆ ಕೇವಲ ಒಂದು ಎಳೆಯಷ್ಟೇ. ಉಳಿದಂತೆ ಕ್ರೈಂ, ಥ್ರಿಲ್ಲರ್, ಸಸ್ಪೆನ್ಸ್‌ಗಳೇ ಇಲ್ಲಿ ವಿಜೃಂಭಿಸಿವೆ. ಕೇವಲ ಎರಡು ದಿನಗಳ ಅವಧಿಯಲ್ಲಿ ನಾಯಕ-ನಾಯಕಿಯ ಬದುಕಿನಲ್ಲಿ ನಡೆಯುವ ಸನ್ನಿವೇಶಗಳನ್ನಿಟ್ಟು ಇಡೀ ಚಿತ್ರದ ಕಥೆಯನ್ನು ಹೊಸೆಯಲಾಗಿದೆ.

ADVERTISEMENT

ಚಿತ್ರದ ನಾಯಕ ಅಜಯ್ ಉದ್ಯಮಿ. ಆತನಿಗೆ ಹೆಂಡತಿ ರಚ್ಚು ಅಂದರೆ ಪಂಚಪ್ರಾಣ. ಉದ್ಯೋಗದ ನಿಮಿತ್ತ ಬೇರೆ ಊರಿಗೆ ಹೋಗಿದ್ದ ಆತ ಮನೆಗೆ ಮರಳಿದಾಗ ಅಲ್ಲಿ ಕೊಲೆಯೊಂದು ನಡೆದಿರುತ್ತದೆ. ಈ ಪ್ರಕರಣದಿಂದ ಹೊರಬರಲು ಗಂಡ ಹೆಂಡತಿ ನಡೆಸುವ ಪಡಿಪಾಟಲು ಈ ಚಿತ್ರದ ಮುಖ್ಯಕಥಾಹಂದರ. ಕಥೆಯು ಹಲವು ತಿರುವುಗಳನ್ನು ಪಡೆಯುತ್ತಾ ಮುಂದೆ ಸಾಗುತ್ತದೆ.

ಚಿತ್ರದ ಮೊದಲಾರ್ಧದಲ್ಲಿ ಕಥೆ ನಿಧಾನಗತಿಯಲ್ಲಿ ಸಾಗುತ್ತದೆ. ಕೆಲವು ಸನ್ನಿವೇಶಗಳನ್ನು ಅನಗತ್ಯವಾಗಿ ದೀರ್ಘವಾಗಿ ಚಿತ್ರಿಸಿದಂತೆ ಭಾಸವಾಗುತ್ತದೆ. ದ್ವಿತೀಯಾರ್ಧದಲ್ಲಿ ಕೆಲವು ಸನ್ನಿವೇಶಗಳು ಪ್ರೇಕ್ಷಕನನ್ನು ತುದಿಗಾಲಲ್ಲಿ ನಿಲ್ಲಿಸಿದರೂ ಇನ್ನು ಕೆಲವು ಸನ್ನಿವೇಶಗಳು ನೀರಸ ಎನ್ನಿಸದಿರದು.

ಶವವೊಂದನ್ನು ಮರೆಮಾಡುವ ಸಲುವಾಗಿ ಅದನ್ನು ಕಾರಿನಲ್ಲಿ ಹಾಕಿಕೊಂಡು ನಾಯಕ-ನಾಯಕಿ ಸುತ್ತಾಡುವುದೇ ಚಿತ್ರದ ಬಹುಭಾಗವನ್ನು ಆವರಿಸಿಕೊಂಡಿದೆ. ಇದು ಪ್ರೇಕ್ಷಕನ ತಾಳ್ಮೆಯನ್ನು ಪರೀಕ್ಷೆಗೊಡ್ಡುತ್ತದೆ.

ಚಿತ್ರದ ಕೆಲವು ಪಾತ್ರಗಳು ಹೆಸರಿಗಷ್ಟೇ ಎಂಬಂತೆ ಮೂಡಿ ಬಂದಿವೆ. ನಾಯಕಿಯ ತಂದೆಯ ಪಾತ್ರದಲ್ಲಿ ನಟಿಸಿರುವ ಅಚ್ಯುತ ಕುಮಾರ್ ಅವರ ಪಾತ್ರವು ಇನ್ನಷ್ಟು ವಿಸ್ತಾರವಿರಬೇಕಿತ್ತು ಅನ್ನಿಸದಿರದು. ಹೊಡೆದಾಟದ ದೃಶ್ಯಗಳನ್ನು ಕೆಲವೆಡೆ ನಿರ್ದೇಶಕರು ಅನಗತ್ಯವಾಗಿ ತುರುಕಿದ್ದಾರೆ. ಹೊಡೆದಾಟ ದೃಶ್ಯಗಳಿಗೂ ಕಥೆಗೂ ಯಾವುದೇ ಸಂಬಂಧವಿಲ್ಲದ ಕಾರಣ ಇವು ಇರಲೇಬೇಕೆಂದು ನಿರ್ದೇಶಕರು ಹಟಕ್ಕೆ ಬಿದ್ದಂತೆ ತೋರುತ್ತದೆ.

ಅಜಯ್ ರಾವ್ ಅವರು ತಮ್ಮ ಹಿಂದಿನ ಸಿನಿಮಾಗಳಿಗಿಂತ ಇದರಲ್ಲಿ ಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಜಯ್ ಮತ್ತು ರಚಿತಾ ರಾಮ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ನಾಯಕ, ನಾಯಕಿಯ ವೈಭವೀಕರಣಕ್ಕಿಂತ ಕಥೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಆದರೂ ಕಥೆಯ ನಿಧಾನಗತಿ ಅಲ್ಲಲ್ಲಿ ಪ್ರೇಕ್ಷಕನಿಗೆ ನೀರಸವೆನ್ನಿಸದಿರದು.

ಮಣಿಕಾಂತ್ ಕದ್ರಿ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು ಮುದ ನೀಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.