ADVERTISEMENT

Movie Review: ಸಿದ್ಧಸೂತ್ರಗಳಿಂದ ಹೊರಬರದ ‘ಮಾರುತ’

ವಿನಾಯಕ ಕೆ.ಎಸ್.
Published 21 ನವೆಂಬರ್ 2025, 12:30 IST
Last Updated 21 ನವೆಂಬರ್ 2025, 12:30 IST
   

ದಿನದಿಂದ ದಿನಕ್ಕೆ ಚಿತ್ರರಂಗ ಅಪ್‌ಡೇಟ್‌ ಆಗುತ್ತಿದೆ. ಹೊಸ ಬಗೆಯ ಕಥೆಗಳಿಗೆ ಸಿನಿಜಗತ್ತು ತೆರೆದುಕೊಳ್ಳುತ್ತಿದೆ. ಆದರೆ ಹಳೆ ತಲೆಮಾರಿನ ಕೆಲ ನಿರ್ದೇಶಕರು ಮಾತ್ರ ಆ ಬದಲಾವಣೆಗೆ ಇನ್ನೂ ತೆರೆದುಕೊಂಡಿಲ್ಲ ಎಂಬುದಕ್ಕೆ ಮತ್ತೊಂದು ನಿದರ್ಶನದಂತಿದೆ ಎಸ್‌.ನಾರಾಯಣ್‌ ನಿರ್ದೇಶನದ ‘ಮಾರುತ’. ಸೋಷಿಯಲ್‌ ಮೀಡಿಯಾಗಳ ಬಳಕೆಯಲ್ಲಿ ಎಚ್ಚರ ತಪ್ಪಿದರೆ ಏನೆಲ್ಲ ಅನಾಹುತಗಳಾಗಬಹುದು ಎಂಬುದು ಚಿತ್ರದ ಒಂದೆಳೆ ಕಥೆ. ಕಥಾವಸ್ತು ಇವತ್ತಿನ ಕಾಲಘಟ್ಟದ್ದು. ಆದರೆ ಅದರ ವಿಸ್ತರಣೆಯಲ್ಲಿ ನಿರ್ದೇಶಕರು ಹತ್ತು–ಹದಿನೈದು ವರ್ಷಗಳ ಹಿಂದಿನ ಸಿದ್ಧಸೂತ್ರಗಳಿಂದ ಆಚೆ ಬಂದಿಲ್ಲ. ಹೀಗಾಗಿ ಸಿನಿಮಾ ಮೊದಲಾರ್ಧ ಪೂರ್ತಿ ತಾಳ್ಮೆ ಪರೀಕ್ಷಿಸುತ್ತದೆ. 

ಕಥಾನಾಯಕ ಈಶ ಎಂಜಿನಿಯರಿಂಗ್‌ ಓದುತ್ತಿರುವ ಮಲೆನಾಡಿನ ಹುಡುಗ. ಮಗನನ್ನು ಎಂಜಿನಿಯರ್‌ ಮಾಡಬೇಕೆಂದು ಹಳ್ಳಿಯಲ್ಲಿ ಅಪ್ಪ, ಅಮ್ಮ ಕಷ್ಟಪಡುತ್ತಿರುತ್ತಾರೆ. ಆದರೆ ಮಗನಿಗೆ ಅದರ ಪರಿವೇ ಇಲ್ಲ. ಮೋಜು, ಮಸ್ತಿ ಮಾಡಿಕೊಂಡು, ಸಿನಿಮಾ ನಿರ್ದೇಶಕನಾಗಬೇಕೆಂದು ಕನಸು ಕಾಣುತ್ತಿರುತ್ತಾನೆ. ಆತನ ಕಾಲೇಜು, ಹಾಸ್ಟೆಲ್‌ನಲ್ಲಿ ಒಂದಷ್ಟು ಸನ್ನಿವೇಶಗಳು ನಡೆಯುತ್ತವೆ. ಈಶನಾಗಿ ಶ್ರೇಯಸ್‌ ಮಂಜು ಕಾಣಿಸಿಕೊಂಡಿದ್ದಾರೆ. ಅವರನ್ನು ಮಾಸ್‌ ಹೀರೊ ಆಗಿ ಬಿಂಬಿಸಲು ಬೇಕಾದ ಹಾಡು, ಫೈಟ್‌, ಹಾಸ್ಯ ಎಲ್ಲವೂ ಇವೆ. ಆದರೆ ಮುಖ್ಯಕಥೆಗೂ ಈ ಸನ್ನಿವೇಶಗಳಿಗೂ ಏನು ಸಂಬಂಧ ಎಂಬುದು ಕೊನೆ ತನಕ ಅರ್ಥವಾಗುವುದಿಲ್ಲ!

ಈಶನ ಮಾವನಾಗಿ ಸಾಧು ಕೋಕಿಲ ಕಾಣಿಸಿಕೊಂಡಿದ್ದಾರೆ. ನಗಿಸಲಿಕ್ಕಾಗಿಯೇ ಸೃಷ್ಟಿಯಾದ ಪಾತ್ರವಿದು. ಇಲ್ಲಿನ ಅನವಶ್ಯ ಹಾಸ್ಯ ಸನ್ನಿವೇಶಗಳು ನಗುವಿಗಿಂತ ಕಿರಿಕಿರಿ ಮೂಡಿಸುವುದೇ ಹೆಚ್ಚು. ಈಶನ ಮನೆ, ಊರು, ಪ್ರೀತಿ, ನಿರ್ದೇಶಕನಾಗುವ ಕನಸಿನ ನಡುವೆ ನಗರದಲ್ಲಿ ಹುಡುಗಿಯರು ಕಾಣೆಯಾಗುತ್ತಿದ್ದಾರೆ ಎಂಬ ಉಪಕಥೆಯೊಂದು ಪ್ರಾರಂಭದಲ್ಲಿಯೇ ತೆರೆದುಕೊಳ್ಳುತ್ತದೆ. ಆ ಜಾಲವನ್ನು ಬೆನ್ನತ್ತುವುದು ಪೊಲೀಸ್‌ ಅಧಿಕಾರಿಯಾಗಿರುವ ದುನಿಯ ವಿಜಯ್‌. ಅವರ ಪಯಣವೇ ‘ಮಾರುತ’ ಎಂಬಂತೆ ಬಿಂಬಿಸಲಾಗಿದೆ.

ADVERTISEMENT

ಈಶನ ಊರಿನದ್ದೇ ಹುಡುಗಿ ಅನನ್ಯ ಆತನ ಬದುಕಿನಲ್ಲಿ ಬರುತ್ತಾಳೆ. ಯಾಕೆ ಬಂದಳು?, ಅದರಿಂದ ಏನೆಲ್ಲ ಆಗುತ್ತದೆ?, ಅದಕ್ಕೆ ಸೋಷಿಯಲ್‌ ಮೀಡಿಯಾ ಹೇಗೆ ಕಾರಣ ಎಂಬ ಹುಡುಕಾಟವೇ ಚಿತ್ರದ ದ್ವಿತೀಯಾರ್ಧ. ಮೊದಲಾರ್ಧಕ್ಕೆ ಹೋಲಿಸಿದರೆ ದ್ವಿತೀಯಾರ್ಧ ವೇಗವಾಗಿದೆ. ಸಿನಿಮಾ ಮುಗಿಯುವ ಹೊತ್ತಿಗೆ ನಲವತ್ತು ನಿಮಿಷಗಳಲ್ಲಿ ಮುಗಿಸಬಹುದಾದ ಕಥೆಯನ್ನು ನಿರ್ದೇಶಕರು ನೂರೈವತ್ತು ನಿಮಿಷಗಳಿಗೆ ಎಳೆದಂತೆ ಭಾಸವಾಗಿರುತ್ತದೆ.

ದುನಿಯ ವಿಜಯ್‌ ತಮ್ಮ ಖಡಕ್‌ ಅಭಿನಯದಿಂದ ಇಷ್ಟವಾಗುತ್ತಾರೆ. ಆದಾಗ್ಯೂ ಅವರ ಪಾತ್ರ ಪೋಷಣೆಯಲ್ಲಿ ಇನ್ನಷ್ಟು ಗಟ್ಟಿತನವಿರಬೇಕಿತ್ತು. ಆ್ಯಕ್ಷನ್‌ ಹೀರೊ ಆಗಿ ಶ್ರೇಯಸ್‌ ಮಂಜು ಅವರ ನಟನೆಯನ್ನು ಸಾಕಷ್ಟು ಕಡೆ ಸಹಿಸಿಕೊಳ್ಳಬೇಕು. ಅನನ್ಯಳಾಗಿ ಬೃಂದಾ ಆಚಾರ್ಯ ನಟನೆಗೂ ಅಷ್ಟೇನು ಪ್ರಾಮುಖ್ಯವಿಲ್ಲ. ಸಾಧು ಕೋಕಿಲ ದಶಕಗಳಷ್ಟು ಹಳೆದಾದ ಹಾಸ್ಯಗಳನ್ನಿಟ್ಟುಕೊಂಡು ನಗಿಸಲು ಸಾಕಷ್ಟು ಪ್ರಯತ್ನಿಸಿದ್ದಾರೆ. ತಾರಾ, ಶರತ್‌ ಲೋಹಿತಾಶ್ವ ನಾಯಕನ ಅಪ್ಪ, ಅಮ್ಮನಾಗಿ ಇಷ್ಟವಾಗುತ್ತಾರೆ. ಕಥೆಯೇ ಹಳಿ ತಪ್ಪಿ ಸಂಗೀತ, ಛಾಯಾಚಿತ್ರಗ್ರಹಣ ಯಾವುದೂ ಹೊಸತು ಅನ್ನಿಸುವುದಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.