ADVERTISEMENT

ಎಸ್‌ಎಲ್‌ವಿ ಸಿನಿಮಾ ವಿಮರ್ಶೆ: ವೆಡ್ಡಿಂಗ್‌ ಪ್ಲಾನರ್‌ಗಳ ಪರಾರಿ ಕಥೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2023, 5:57 IST
Last Updated 18 ಫೆಬ್ರುವರಿ 2023, 5:57 IST
ಎಸ್‌ಎಲ್‌ವಿ ಚಿತ್ರದ ಪೋಸ್ಟರ್
ಎಸ್‌ಎಲ್‌ವಿ ಚಿತ್ರದ ಪೋಸ್ಟರ್   

ಚಿತ್ರ: ಎಸ್‌ಎಲ್‌ವಿ
ನಿರ್ದೇಶನ: ಸೌರಭ್‌ ಕುಲಕರ್ಣಿ
ತಾರಾಗಣ: ಅಂಜನ್‌ ಭಾರಾದ್ವಾಜ್‌, ದಿಶಾ ರಮೇಶ್‌
ಸಂಗೀತ: ಸಂಘರ್ಷ್‌ ಕುಮಾರ್‌
ಛಾಯಾಗ್ರಹಣ: ಕಿಟ್ಟಿ ಕೌಶಿಕ್‌
ನಿರ್ಮಾಣ: ವರ್ಸಾಟೋ ವೆಂಚರ್ಸ್

ಮಧ್ಯಮ ವರ್ಗದ ಹುಡುಗ–ಹುಡುಗಿಯ ಮಹತ್ವಾಕಾಂಕ್ಷೆ, ಅದರ ಸಾಧನೆಯ ಹಾದಿಯಲ್ಲಿ ಒಂದಿಷ್ಟು ಕೋಳಿ ಜಗಳ, ರಾಜಕಾರಣಿಗಳನ್ನೇ ದಾಳವಾಗಿಸಿ ತಾವು ಬೆಳೆಯುವ ಯತ್ನ, ಯಾರದೋ ದುಡ್ಡಲ್ಲಿ ನಾಯಕ–ನಾಯಕಿಯ ಮಜಾ.

ಇದು ಸೌರಭ್‌ ಕುಲಕರ್ಣಿ ನಿರ್ದೇಶನದ ಎಸ್‌ಎಲ್‌ವಿ ಚಿತ್ರದ ಒಂದು ಸಾಲಿನ ಕತೆ. ನಾಯಕ– ನಾಯಕಿಯ (ಅಂಜನ್‌ ಭಾರಾದ್ವಾಜ್‌, ದಿಶಾ ರಮೇಶ್‌) ಹುಟ್ಟಿನಿಂದಲೇ ರಂಜನೆಯೊಂದಿಗೆ ತೆರೆದುಕೊಳ್ಳುವ ಕಥೆ ವೇಗ ಪಡೆದು ನೋಡಿಸಿಕೊಳ್ಳುತ್ತಾ ಹೋಗುತ್ತದೆ. ವೆಡ್ಡಿಂಗ್‌ ಪ್ಲಾನರ್ಸ್‌ ಆಗಿರುವ ನಾಯಕ ನಾಯಕಿ ಪ್ರತಿಸ್ಪರ್ಧಿಗಳಾಗಿ ಪರಸ್ಪರ ಕಿತ್ತಾಡುತ್ತಾ ಒಂದೇ ಕೊಠಡಿಯಲ್ಲಿ ಕಚೇರಿ ಹೊಂದುವುದು ಈ ಚಿತ್ರದ ವಿಲಕ್ಷಣ ಸೋಜಿಗ. ವೃತ್ತಿ ಕಾರಣಕ್ಕಾಗಿ ಅನಿವಾರ್ಯವಾಗಿ ಜೊತೆಗೇ ಸಾಗಬೇಕಾದ ಸಂದರ್ಭ. ಪ್ರತಿಸ್ಪರ್ಧಿ ರಾಜಕಾರಣಿಗಳ (ಸುಂದರ್‌ ವೀಣಾ, ರಾಜೇಶ್‌ ನಟರಂಗ) ಮಕ್ಕಳ ನಡುವೆ ಮದುವೆ ಇಡೀ ಕಥೆಗೆ ವೇದಿಕೆ. ಮೊದಲಾರ್ಧ ಹೀಗೆ ನಗಿಸುತ್ತಾ, ನೋಡಿಸಿಕೊಳ್ಳುತ್ತಲೇ ಹೋಗುತ್ತದೆ. ಇಲ್ಲಿ ಪ್ರವೇಶಿಸುವವನೇ ನಿವೃತ್ತಿಗೆ ಎರಡು ದಿನ ಬಾಕಿ ಇರುವ ಸಹಾಯಕ ಪೊಲೀಸ್‌ ಕಮಿಷನರ್‌ (ಬಲ ರಾಜವಾಡಿ).

ADVERTISEMENT

ಮುಂದಿನ ಭಾಗದಲ್ಲಿ ಅನಿರೀಕ್ಷಿತ ತಿರುವುಗಳಿರಬಹುದೋ ಎಂದು ನೋಡಿದರೆ ಕೆಲಕಾಲ ಪತ್ತೆಧಾರಿ ಕಥೆಯಂತೆ ಅನಿಸುವುದುಂಟು. ಆದರೆ, ಕದಿಯುವುದರಲ್ಲಿ ತಪ್ಪಿಲ್ಲ ಅನ್ನುವ ‘ಸಂದೇಶ’(!?)ದೊಂದಿಗೆ ನಾಯಕ ನಾಯಕಿ ಪರಾರಿಯಾಗುತ್ತಾರೆ. ಅಷ್ಟು ಹೊತ್ತಿನ ಕಥೆ ಪೂರ್ತಿ ಬಿಗಿ ಕಳೆದುಕೊಳ್ಳುವುದೇ ಇಲ್ಲಿ.

ಪೊಲೀಸ್‌ ಅಧಿಕಾರಿಯು ಭ್ರಷ್ಟ ರಾಜಕಾರಣಿಗಳನ್ನು ಬಂಧಿಸಿದನೇ ಇಲ್ಲವೇ? ಅಥವಾ ಬೀಳ್ಕೊಡುಗೆ ಸಮಾರಂಭದ ಸನ್ಮಾನ ತಟ್ಟೆಯಲ್ಲಿ ಸೇಬು ಕಡಿಮೆಯಾಗಿದೆ ಎಂದು ಸಿಡಿಮಿಡಿಗೊಂಡಿದ್ದಾನೆ ಎಂದು ವಾರ್ತಾ ವಾಚಕಿ ಹೇಳುವ ಪೇಲವ ಹಾಸ್ಯಕ್ಕಷ್ಟೇ ಸೀಮಿತಗೊಂಡನೇ ಎಂಬುದನ್ನು ನಿರ್ದೇಶಕರು ಪ್ರೇಕ್ಷಕನ ಊಹೆಗೆ ಬಿಟ್ಟಿದ್ದಾರೆ. ಅಷ್ಟು ಹೊತ್ತು ಖುಷಿಯಾಗಿ ನೋಡಿದ ಪ್ರೇಕ್ಷಕ ತನ್ನ ನಿರೀಕ್ಷೆ ಹುಸಿಯಾದ ಬೇಸರದಲ್ಲಿ ಚಿತ್ರದ ಎಂಡ್‌ ಕಾರ್ಡನ್ನು ನೋಡುತ್ತಲೇ ಹೋಗುತ್ತಾನೆ.

ಒಂದಿಷ್ಟು ನಗೆಭೋಜನ ಕೊಡಲು ಪರವಾಗಿಲ್ಲ ಅನ್ನಬಹುದಾದ ಚಿತ್ರ. ಒಂದೆರಡು ಸಾಹಸ ದೃಶ್ಯಗಳಂತೂ ಅನಗತ್ಯ. ಕೆಲವು ಕಡೆ ನಾಯಕಿಯ ಭಾಷಣ ಸ್ವಲ್ಪ ಜಾಸ್ತಿಯಾಯಿತೇನೋ. ಪ್ರಿವೆಡ್ಡಿಂಗ್‌ ಫೋಟೋಗ್ರಾಫರ್‌ (ಪಿ.ಡಿ. ಸತೀಶ್ಚಂದ್ರ) ಮದುಮಗಳನ್ನು ತಾನೇ ಮದುವೆಯಾಗುವುದು, ಮಂತ್ರ ಮಾಂಗಲ್ಯದ ಮದುವೆಗೆ ₹ 25 ಸಾವಿರ ದರ ಪಡೆಯುವುದು ಇತ್ಯಾದಿ ಪ್ರಸಂಗಗಳು ಒಂದಿಷ್ಟು ನಗಿಸಿವೆ.

ನಟನೆ, ಛಾಯಾಗ್ರಹಣ, ಸಿನಿಮಾ ವೇಗಕ್ಕೆ ಸಂಬಂಧಿಸಿದಂತೆ ಎಲ್ಲರಿಗೂ ಪೂರ್ಣ ಅಂಕ ನೀಡಬಹುದು. ಹಾಡುಗಳು, ಹಿನ್ನೆಲೆ ಸಂಗೀತ ಚೆನ್ನಾಗಿದೆ. ಒಂದು ಮದುವೆಯ ಸುತ್ತ ಎಲ್ಲ ಹೂರಣದ ಕಥೆ ಕಟ್ಟಬಹುದು ಎಂಬುದನ್ನು ನಿರ್ದೇಶಕರು ನಿರೂಪಿಸಿದ್ದಾರೆ.

ನಿರ್ದೇಶಕರ ಸಾಮರ್ಥ್ಯವನ್ನು ಈ ಚಿತ್ರ ನಿರೂಪಿಸಿದೆ. ಆ ದೃಷ್ಟಿಯಿಂದ ಪ್ರೇಕ್ಷಕ ಎಸ್‌ಎಲ್‌ವಿಗೆ ಬೆನ್ನುತಟ್ಟಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.