ADVERTISEMENT

ಕುಲದಲ್ಲಿ ಕೀಳ್ಯಾವುದೋ ಸಿನಿಮಾ ವಿಮರ್ಶೆ: ಅಸ್ಪೃಶ್ಯತೆ ಉಲ್ಲೇಖ, ಕಥೆ ದುರ್ಬಲ

ಅಭಿಲಾಷ್ ಪಿ.ಎಸ್‌.
Published 23 ಮೇ 2025, 12:48 IST
Last Updated 23 ಮೇ 2025, 12:48 IST
ಮೌನ, ಮನು 
ಮೌನ, ಮನು    

ಅಸ್ಪೃಶ್ಯತೆ, ಜಾತಿ ತಾರತಮ್ಯ, ಪ್ರಬಲ ವರ್ಗದವರಿಂದ ದುರ್ಬಲ ವರ್ಗದ ಮೇಲೆ ದೌರ್ಜನ್ಯ, ದುರ್ಬಲ ವರ್ಗದ ಮೇಲೆ ವ್ಯವಸ್ಥೆಯ ದಬ್ಬಾಳಿಕೆ...ಇಂತಹ ವಿಷಯಗಳನ್ನಿಟ್ಟುಕೊಂಡು ಈಗಾಗಲೇ ಹಲವು ಚಿತ್ರಗಳು ನಿರ್ಮಾಣಗೊಂಡಿವೆ. ಪ್ರಮುಖವಾಗಿ ತಮಿಳು ಚಿತ್ರರಂಗದಲ್ಲಿ ಈ ವಿಷಯಾಧಾರಿತ ಸಿನಿಮಾಗಳು ಸಾಲು ಸಾಲಾಗಿ ಬಂದಿವೆ. ‘ಸತ್ಯ ಹರಿಶ್ಚಂದ್ರ’ ಸಿನಿಮಾದ ‘ಕುಲದಲ್ಲಿ ಕೀಳ್ಯಾವುದೋ’ ಹಾಡನ್ನೇ ಶೀರ್ಷಿಕೆಯನ್ನಾಗಿ ಹೊತ್ತ ಈ ಸಿನಿಮಾವೂ ಇವೇ ಅಂಶಗಳ ಸುತ್ತ ಕಟ್ಟಿದ ಕಥೆಯಾಗಿದೆ. 

ಬಿದಿರುಬುಂಡೆ ಎನ್ನುವ ಕಾಡಿನಲ್ಲಿ ದುರ್ಬಲ ವರ್ಗಕ್ಕೆ ಸೇರಿದ ಐದಾರು ಕುಟುಂಬಗಳು. ಆ ಕುಟುಂಬಗಳ ನಡುವೆ ಒಬ್ಬ ಅನಾಥ ಹುಡುಗ ‘ಮುತ್ತರಸ’. ಬಿದಿರುಬುಂಡೆಗೆ ತಾಗಿಕೊಂಡಿರುವ ಬೆಟ್ಟದ ಮೇಲೆ ಆಂಜನೇಯನ ಪ್ರತಿಮೆ. ಅದುವೇ ಅವರ ದೈವ. ಈ ಕುಟುಂಬದ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ಕೊಡಿಸುವುದಾಗಿ ಸರ್ಕಾರೇತರ ಸಂಸ್ಥೆಯೊಂದು ಬರುತ್ತದೆ. ಯಾರೂ ಅವರ ಮಕ್ಕಳನ್ನು ಕಳುಹಿಸಿಕೊಡುವುದಿಲ್ಲ. ಆ ಸಂದರ್ಭದಲ್ಲಿ ಅಲ್ಲಿದ್ದ ಮಕ್ಕಳಲ್ಲಿ ಕುತಂತ್ರ ಬುದ್ಧಿ ಹೊಂದಿದ್ದ ಎಂಟೆಗೊದ್ದ ಎಂಬ ಹುಡುಗನೊಬ್ಬ ನಾಟಕವಾಡಿ ಅವರೊಂದಿಗೆ ನಗರ ಸೇರಿಕೊಳ್ಳುತ್ತಾನೆ. ಹಲವು ವರ್ಷಗಳ ಬಳಿಕ ಬಿದಿರುಬುಂಡೆ ಜಾಗ ಸಂರಕ್ಷಿತ ಅರಣ್ಯವೆಂದು ಘೋಷಿಸಲ್ಪಡುತ್ತದೆ. ಈ ಕುಟುಂಬಗಳು ಕಾಡಿನಿಂದ ನಾಡಿಗೆ ಬಂದು ಗುಡಿಸಲುಗಳಲ್ಲಿ ವಾಸವಿರುತ್ತಾರೆ. ಅಲ್ಲಿಯೂ ಅಸ್ಪೃಶ್ಯತೆಯ ನೋವು. ರಾಯಪ್ಪ ಎಂಬ ಪ್ರಬಲ ವರ್ಗದ ವ್ಯಕ್ತಿಯ ದೌರ್ಜನ್ಯ, ರಾಯಪ್ಪನ ಕುತಂತ್ರಗಳೇ ಮುಂದಿನ ಕಥೆ...

ತಮಿಳು ಚಿತ್ರರಂಗದಲ್ಲಿ ಇಂತಹ ವಿಷಯಾಧಾರಿತ ಸಿನಿಮಾಗಳನ್ನು ಕಟ್ಟಿಕೊಟ್ಟ ರೀತಿ ಚೆನ್ನಾಗಿತ್ತು. ‘ಕಾಟೇರ’ವೂ ಈ ವಿಷಯಗಳನ್ನು ಅಚ್ಚುಕಟ್ಟಾಗಿ ಕಮರ್ಷಿಯಲ್‌ ರೂಪದಲ್ಲಿ ಪ್ರಸ್ತಾಪಿಸಿದ ಇತ್ತೀಚಿನ ಸಿನಿಮಾ. ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾ ಚಿತ್ರಕಥೆಯಲ್ಲಿ ಎಡವಿದೆ. ಅನಗತ್ಯ ವಿಷಯಗಳು, ದೃಶ್ಯಗಳು ಚಿತ್ರದ ಅವಧಿಯನ್ನು ಹೆಚ್ಚಿಸಿವೆ. ಮಧ್ಯಂತರದಲ್ಲಿ ಕಥೆಗೆ ತಿರುವು ನೀಡುವ ಅಂಶವಿದ್ದರೂ ಅದನ್ನು ಸಮರ್ಪಕವಾಗಿ ಬಿಂಬಿಸಲು ಸಾಧ್ಯವಾಗಿಲ್ಲ. ವಾಸ್ತವಕ್ಕೆ ಹತ್ತಿರವಾಗದ ಹಲವು ಅಂಶಗಳು ಸಿನಿಮಾದಲ್ಲಿವೆ. ಕಥೆಗೂ ಪಾತ್ರಗಳ ವಯಸ್ಸಿಗೂ ಹೋಲಿಕೆಯಾಗುವುದೇ ಇಲ್ಲ. ಸಂಭಾಷಣೆಗಳನ್ನು ಇನ್ನಷ್ಟು ಹರಿತವಾಗಿಸಬಹುದಿತ್ತು. ಕ್ಲೈಮ್ಯಾಕ್ಸ್‌ ಹಂತಕ್ಕೆ ತಲುಪುತ್ತಾ ಚಿತ್ರಕಥೆಯು ಸಿದ್ಧಸೂತ್ರಕ್ಕೆ ಅಂಟಿಕೊಳ್ಳುತ್ತದೆ.

ADVERTISEMENT

ನಟನೆಯಲ್ಲಿ ಮಡೆನೂರು ಮನು, ಮೌನ, ಕರಿಸುಬ್ಬು, ಶರತ್‌ ಲೋಹಿತಾಶ್ವ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ತಬಲಾ ನಾಣಿ ಹಾಸ್ಯದ ಜವಾಬ್ದಾರಿ ಹೊತ್ತು ನಗಿಸುತ್ತಾರೆ. ಈ ಸಿನಿಮಾವನ್ನು ಯೋಗರಾಜ್ ಸಿನಿಮಾಸ್ ಅರ್ಪಿಸಿದ್ದು, ನಿರ್ದೇಶಕ ಯೋಗರಾಜ್‌ ಭಟ್‌ ಅವರೂ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ‘ನಮ್‌ ಪೈಕಿ ಒಬ್ಬ ವೋಗ್ಬಿಟ್ಟ...’ ಹಾಡು ಚೆನ್ನಾಗಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.