ಜಾಕಿ ಚಾನ್, ಜೇಡನ್ ಸ್ಮಿತ್ ಅಭಿನಯದ ‘ದಿ ಕರಾಟೆ ಕಿಡ್’ ಎಳೆಯಲ್ಲಿ ‘ವಿದ್ಯಾಪತಿ’ ತೆರೆಗೆ ಬಂದಿದೆ. ‘ಇಕ್ಕಟ್’ ಬಳಿಕ ಇಶಾಂ ಮತ್ತು ಹಸೀಂ ಮತ್ತೊಮ್ಮೆ ನಾಗಭೂಷಣ್‌ಗೆ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾದಲ್ಲಿ ಆ್ಯಕ್ಷನ್ ಹೆಚ್ಚು ಇದೆ. ಭಾವನಾತ್ಮಕ ಹಾಗೂ ಹಾಸ್ಯದ ಅಂಶ ಕಥೆಯಲ್ಲಿ ಅಡಕವಾಗಿದೆ. ಆ್ಯಕ್ಷನ್–ಕಾಮಿಡಿ ಎಂಬ ಎರಡು ದೋಣಿಗಳಲ್ಲಿ ಕಾಲಿಟ್ಟಿರುವ ನಾಗಭೂಷಣ್ ಇಕ್ಕಟ್ಟಿಗೆ ಸಿಲುಕದೆ ದಡ ಸೇರಿದ್ದಾರೆ.
ನಾಯಕ ಸಿದ್ದುವಿಗೆ (ನಾಗಭೂಷಣ್) ಹಣದ ಹಪಹಪಿ. ಸಿನಿಮಾ ನಾಯಕಿಯಾಗಿರುವ ‘ಸೂಪರ್‌ಸ್ಟಾರ್ ವಿದ್ಯಾ’(ಮಲೈಕಾ) ಸಾಮಾನ್ಯ ಜನರಂತೆ ಬದುಕುವಾಕೆ. ತಾನೊಬ್ಬ ಅನಾಥ ಎಂಬಂತೆ ನಾಟಕವಾಡಿ ಸುಳ್ಳಿನ ಸರಮಾಲೆ ಕಟ್ಟಿ ‘ಸಿದ್ದು’ ‘ವಿದ್ಯಾ’ಳ ಮನಸ್ಸು ಗೆದ್ದು ಆಕೆಯನ್ನು ವರಿಸುತ್ತಾನೆ. ನಂತರ ‘ವಿದ್ಯಾ’ಳ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿರುತ್ತಾನೆ. ಈ ಸಂದರ್ಭದಲ್ಲಿ ಇವರಿಬ್ಬರ ಜೀವನದ ನಡುವೆ ‘ಜಗ್ಗು’ವಿನ(ಗರುಡಾ ರಾಮ್) ಪ್ರವೇಶವಾಗುತ್ತದೆ. ‘ಸಿದ್ದು’ವಿನ ಮುಖವಾಡ ಕಳಚುತ್ತದೆ. ಆತನ ಜೀವನ ಬದಲಾಗುತ್ತದೆ, ಕಥೆ ಮುಂದುವರಿಯುತ್ತದೆ.
‘ದಿ ಕರಾಟೆ ಕಿಡ್’ ಎಳೆಯಲ್ಲೇ ಈ ಸಿನಿಮಾ ಕಥೆಯಿದೆ. ಅನನುಕ್ರಮಣಿಕೆ(non linear) ಮಾದರಿಯ ಚಿತ್ರಕಥೆಯಲ್ಲಿ ಸಿದ್ದುವಿನ ಜೀವನ ತೆರೆದಿಡಲಾಗಿದೆ. ಪ್ರಸ್ತುತಿಯಲ್ಲಿ ಹಾಸ್ಯ–ಆ್ಯಕ್ಷನ್–ಭಾವನೆಗಳ ಹದವಾದ ಮಿಶ್ರಣವಿದೆ. ಚಿತ್ರಕಥೆಯು ಎಳೆದಾಡಿದಂತಾಗುತ್ತಿದೆ ಎಂದೆನಿಸುವಾಗ ‘ಅನಕೊಂಡ’(ಡಾಲಿ ಧನಂಜಯ) ಪಾತ್ರವನ್ನು ನಿರ್ದೇಶಕರು ಪರಿಚಯಿಸುತ್ತಾರೆ. ಇದು ಕಥೆಗೆ ವೇಗ ನೀಡುತ್ತದೆ. ಎರಡು ಗಂಟೆಯ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ. ಹಾಸ್ಯ ಸಂಭಾಷಣೆ ಮೇಲೆ ಇನ್ನೊಂದಿಷ್ಟು ಕೆಲಸ ಮಾಡಬಹುದಿತ್ತು. ‘ಮದನಾರಿ’ ಹಾಡು ಗುನುಗುವಂತಿದೆ. ಮಕ್ಕಳೂ ನೋಡಬಹುದು ಎಂದಿರುವ ಈ ಸಿನಿಮಾದಲ್ಲಿ ಮದ್ಯಪಾನದ ದೃಶ್ಯಗಳು ಹೆಚ್ಚಿವೆ.
ನಟನೆಯಲ್ಲಿ ನಾಗಭೂಷಣ್ ತನ್ನೊಳಗಿರುವ ನಟನಿಗೆ ಹೆಚ್ಚು ಸಾಣೆ ಹಿಡಿದಿದ್ದಾರೆ. ಹಾಸ್ಯಕ್ಕಿಂತಲೂ ಭಾವನಾತ್ಮಕ ದೃಶ್ಯಗಳಲ್ಲಿ ಅಂಕ ಗಿಟ್ಟಿಸುತ್ತಾರೆ. ನಾಗಭೂಷಣ್ ಇಡೀ ಸಿನಿಮಾ ಆವರಿಸಿಕೊಂಡಿದ್ದಾರೆ. ಪತಿಯಾಗಿ, ಮಗನಾಗಿ, ಮಲ ಮಗನಾಗಿ, ಅಣ್ಣನಾಗಿ, ಸ್ನೇಹಿತನಾಗಿ ಹಲವು ಸಂದೇಶಗಳನ್ನು ನೀಡುವ ರೀತಿಯಲ್ಲಿ ಅವರ ಪಾತ್ರವನ್ನು ಕೆತ್ತಲಾಗಿದೆ. ಶ್ರೀವತ್ಸ, ಮಲೈಕಾ, ಗಿರೀಶ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ‘ಕೆ.ಜಿ.ಎಫ್’ ಖಳನಾಯಕನನ್ನು ಭಿನ್ನವಾದ ಒಂದು ಪಾತ್ರದಲ್ಲಿ ಕಾಣಬಹುದು. ಹಾಸ್ಯದಲ್ಲೂ ಒಂದು ಕೈ ನೋಡಿದ್ದಾರೆ ಗರುಡ ರಾಮ್. ‘ಅವನ ಯುದ್ಧ ಅವನೇ ಹೋರಾಡಬೇಕು’ ಎನ್ನುವ ಧನಂಜಯ ಪಾತ್ರದ ಸಂಭಾಷಣೆ ಹಿಂದೆ ಚಿತ್ರರಂಗದ ವಾಸ್ತವ ಅಂಶಗಳು ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.