ADVERTISEMENT

ನಕ್ಕು ನಗಿಸಿದ ‘ಮಹಾಬ್ಲು’

ರಂಗಭೂಮಿ –ಮಹಾಪೀಡೆ ಮಹಾಬ್ಲು

ವೈ.ಕೆ.ಸಂಧ್ಯಾಶರ್ಮ
Published 18 ಸೆಪ್ಟೆಂಬರ್ 2016, 19:30 IST
Last Updated 18 ಸೆಪ್ಟೆಂಬರ್ 2016, 19:30 IST
‘ಮಹಾಪೀಡೆ ಮಹಾಬ್ಲು’ ನಾಟಕದ ದೃಶ್ಯ
‘ಮಹಾಪೀಡೆ ಮಹಾಬ್ಲು’ ನಾಟಕದ ದೃಶ್ಯ   

ಆರಂಭದಿಂದ ಅಂತ್ಯದವರೆಗೂ ಒಂದೇ ಸಮನೆ ಹೊಟ್ಟೆ ಹುಣ್ಣಾಗುವಂತೆ ನಗಿಸುವ ನಾಟಕ ‘ಮಹಾಪೀಡೆ ಮಹಾಬ್ಲು’.
ಕೇಂದ್ರ ಪಾತ್ರದ ವ್ಯಕ್ತಿತ್ವದ ಬಗೆಬಗೆಯ ಮುಖಗಳು. ಆಸಕ್ತಿ ಹುಟ್ಟಿಸುವ, ಕುತೂಹಲ ಕೆರಳಿಸುವ ‘ಮಹಾಬ್ಲು’ವನ್ನು ಕಣ್ಣಾರೆ ಕಂಡು, ಅವನ ಐಲುಪೈಲುಗಳ ಆಟ ತಂದಿಡುವ ತಮಾಷೆಗಳನ್ನು ಕಾಣಬೇಕಾದರೆ ‘ಮಹಾಪೀಡೆ ಮಹಾಬ್ಲು’ ನಾಟಕ ನೋಡಬೇಕು.


ಕೆ.ಎಚ್.ಕಲಾಸೌಧದಲ್ಲಿ ಇತ್ತೀಚೆಗೆ ‘ಪ್ರಕಸಂ’ ಕಲಾವಿದರು ಈ ನಾಟಕ ಪ್ರದರ್ಶಿಸಿದರು. ಕನ್ನಡ ರೂಪಾಂತರ ರಾಜೇಂದ್ರ ಕಾರಂತ. ಯಾವುದರಿಂದ ರೂಪಾಂತರ ಎಂದು ತಿಳಿಸಿಲ್ಲ. ಬಹುಶಃ ಇದಕ್ಕೆ ಆಧಾರ ಯಾವುದೋ ಆಂಗ್ಲ ನಾಟಕವಿದ್ದಂತೆ ಕಂಡುಬರುತ್ತದೆ. ನಾಟಕದ ನಿರ್ದೇಶನ, ವಿನ್ಯಾಸಗಳೂ ಅವರದೇ.

ವಿಚಿತ್ರ ಸ್ವಭಾವದ ಮನುಷ್ಯ ಮಹಾಬಲನ ಜೀವನ ವೃತ್ತಾಂತದ ಸುತ್ತಲೂ ಪರಿಭ್ರಮಿಸುತ್ತದೆ ಕಥೆ. ಗೆಳೆಯರಿಗೆಲ್ಲ ತಿಂಡಿ-ತೀರ್ಥ ಸರಬರಾಜು ಮಾಡುತ್ತಾ, ಅವರೊಡನೆ ಇಸ್ಪೀಟ್ ಆಟದಲ್ಲಿ ಮಜವಾಗಿ ಕಾಲಕಳೆಯುವ ಉಂಡಾಡಿಗುಂಡ ರಾಮ್ಕಿ. ಗೆಳೆಯರಿಗೆ ಒಂದಲ್ಲಾ ಒಂದು ತಾಪತ್ರಯ. ಅದೂ ಹೆಂಡತಿಯರಿಂದ. ಎಲ್ಲರೂ ಸಮಾನ ದುಃಖಿಗಳು. ಅವರೊಳಗೆ ಮಹಾಬ್ಲೂ ಸಹ ಒಬ್ಬ.

ತಾನು ತುಂಬಾ ಪ್ರೀತಿಸುವ ಹೆಂಡತಿ ಡೈವೋರ್ಸ್ ಕೊಡುತ್ತಿದ್ದಾಳೆಂಬ ಸಂಕಟ ತಡೆಯಲಾರದೆ ಆತ್ಮಹತ್ಯೆಗೆ ಯತ್ನಿಸುತ್ತಾನೆ. ಅವನನ್ನು ಉಳಿಸಲು ಯತ್ನಿಸುವ ಸಂದರ್ಭ ಅನೇಕ ಎಡವಟ್ಟು ಮಾಡಿಕೊಳ್ಳುತ್ತಾರೆ.

ಅವನನ್ನು ತನ್ನ ಮನೆಯಲ್ಲೇ ಇರಿಸಿಕೊಂಡು ಸಂಭಾಳಿಸಲು ಪ್ರಯತ್ನಿಸುವ ರಾಮ್ಕಿ ಹಾಗೂ ಅವನ ನಡುವೆ ನಡೆಯುವ ತಿಕ್ಕಾಟ- ಅವಾಂತರಗಳೇ ನಾಟಕದ ಪ್ರಧಾನ ಭಾಗ.

ಎರಡು ಗಂಟೆಯೂ ಸತತ ನಕ್ಕು ನಗಿಸುವ, ಭರಪೂರ ಮನರಂಜನೆ ನೀಡುವ ನಾಟಕದ ಗೆಲುವಿಗೆ ಕಾರಣ ಅದರ ಚಕಮಕಿ ಸಂಭಾಷಣೆಗಳು. ನಾಟಕದ ನಡೆಯನ್ನು ಸರಾಗವಾಗಿ ಸಾಗಿಸಿಕೊಂಡು ಹೋಗುವ ಹಾಸ್ಯಪೂರ್ಣ ಮಾತುಗಳು ಚುರುಕಾಗಿದ್ದು, ಕುತೂಹಲಕರವಾಗಿವೆ.

ಸ್ವಚ್ಛಂದ ವರ್ತನೆಗೆ ಪೂರಕವಾದ ಕ್ಲಬ್ಬಿನಂಥ ವಾತಾವರಣದ ರಾಮ್ಕಿ ಮನೆಯಲ್ಲಿ ಎಲ್ಲರೂ ಮುಕ್ತವಾಗಿ ತಂತಮ್ಮ ಸಂಸಾರದ ತಾಪತ್ರಯಗಳನ್ನು ಬಿಚ್ಚಿಡುತ್ತಾ, ಸಿಗರೇಟು, ಹೆಂಡ ಮತ್ತು ಇಸ್ಪೀಟಿನಲ್ಲಿ ಅವನ್ನು ಮರೆಯಲೆತ್ನಿಸುತ್ತಾರೆ. ಕಾಯಂ ಸದಸ್ಯ ಮಹಾಬಲುವಿನ ಗೈರುಹಾಜರಿ, ಅವನ ಆತ್ಮಹತ್ಯೆಯ ಪ್ರಯತ್ನ ಕುರಿತು ಆಡುವ ಮಾತುಗಳು ನಾಟಕದ ಕಥೆಗೆ ಮುನ್ನುಡಿ ಒದಗಿಸುತ್ತವೆ.

ಮುಂದಿನ ದೃಶ್ಯದಲ್ಲಿ ಈ ಮನೆಗೆ ಬರುವ ಮತ್ತು ಇಲ್ಲೇ ವಾಸ್ತವ್ಯ ಹೂಡುವ ಮಹಾಬ್ಲುವಿನ (ನಟ-ಸುಂದರ್) ಒಳತೋಟಿಯ ವಿಚಿತ್ರ ನಡವಳಿಕೆ, ಅಸಹನೆ- ಗೊಂದಲಗಳ, ಪರದಾಟ-ಹಾರಾಟದ ಮಾತುಗಳು, ನವರಸವನ್ನೂ ಸಮರ್ಥವಾಗಿ ಬಿಂಬಿಸುವ ಮುಖಭಾವಗಳು, ಒದ್ದಾಟದ ಮುಗ್ಧತೆಯ ಆಂಗಿಕಾಭಿನಯ ನೋಡುಗರಿಗೆ ನಗೆಯ ಕಚಗುಳಿ ಇಡುತ್ತದೆ.

ಸಂಭಾಷಣೆ ಹೇಳುವ ವಿಶಿಷ್ಟ ಧಾಟಿ, ಮಾತಿನೋಕುಳಿ, ವಿನೋದ ಸೃಷ್ಟಿಸುವ ನಡಿಗೆಯ ಶೈಲಿ, ಪರಿಣಾಮಕಾರಿ ಅಭಿನಯ, ಸುಂದರನಿಗೆ ಸುಂದರನೇ ಸಾಟಿ ಎನಿಸುತ್ತದೆ. ಮಹಾಬ್ಲೂಗೆ ಸಾಥ್ ಕೊಟ್ಟ ರಾಮ್ಕಿ ಪಾತ್ರದ ರಾಜೇಂದ್ರ ಕಾರಂತ ಸರಾಗವಾಗಿ ಅಭಿನಯಿಸುತ್ತಾ, ತಮ್ಮ ಪಾದರಸದಂಥ ಆಂಗಿಕಾಭಿನಯದಿಂದ ನೋಡುಗರನ್ನು ನಗಿಸುತ್ತಾರೆ.

‘ಕ್ಲೀನ್ ಮೇನಿಯಾ’ದ ಮಿ.ಕ್ಲೀನ್ ಮಹಾಬ್ಲು ಯಾವ ಕೆಟ್ಟ ಅಭ್ಯಾಸಗಳೂ ಇಲ್ಲದ ಸಾತ್ವಿಕ ಮನುಷ್ಯ. ಎಲ್ಲದರಲ್ಲೂ ಮಹಾ ಅಚ್ಚುಕಟ್ಟು ಮತ್ತು ಶಿಸ್ತು. ಆತ ಮನೆಯನ್ನು ಸ್ವಚ್ಚಗೊಳಿಸುವ ಪರಿ, ಬಾಣಸಿಗನ ವೇಷ ಧರಿಸಿ ಮಾಡುವ ನಳಪಾಕ, ಗೆಳೆಯನ ತಲೆ ತಿನ್ನುವ ಚರ್ಯೆ, ಕೆಳಗಿನ ಫ್ಲಾಟಿನ ಹೆಂಗೆಳೆಯರ ಜೊತೆ ನಡೆದುಕೊಳ್ಳುವ ಬಾಲಿಶ  ನಡವಳಿಕೆಗಳು ಹೀಗೆ ಸಾಲುಸಾಲು ಹಾಸ್ಯ ಪ್ರಸಂಗಗಳು ಬಹುಕಾಲ ಮನದಲ್ಲಿ ಉಳಿಯುತ್ತವೆ.

ಹೆಂಡತಿಯನ್ನು ಸಹಿಸಿಕೊಳ್ಳಲಾಗದೆ ಅವಳಿಗೆ ಡೈವೋರ್ಸ್ ಕೊಟ್ಟ ರಾಮ್ಕಿ, ಕಡೆಯಲ್ಲಿ, ಮಹಾಬ್ಲುವಿನ ಕಿರಿಕಿರಿ, ಹುಚ್ಚಾಟಗಳನ್ನು ಸಹಿಸಿಕೊಳ್ಳಲಾಗದೆ, ಇವನಿಗಿಂತ ಹೆಂಡತಿಯನ್ನು ಸಹಿಸಿಕೊಳ್ಳುವುದೇ ವಾಸಿ ಎಂಬ ತೀರ್ಮಾನಕ್ಕೆ ಬರುತ್ತಾನೆ.ಇದು ಅನಿರೀಕ್ಷಿತ ಆದರೆ ಅಪೇಕ್ಷಿತ ಅಂತ್ಯ ಎನಿಸುತ್ತದೆ.

ನಾಟಕದಲ್ಲಿ ಚಿತ್ರಿತವಾಗಿರುವ ಮಹಾಬ್ಲು ಪಾತ್ರವು ವಿಶಿಷ್ಟ ಮತ್ತು ಆಪ್ತವಾಗಿದೆ. ಗೆಳೆಯರೆಲ್ಲ ಲಘುವಾಗಿ ಕಾಣುವ ಇವನ ವ್ಯಕ್ತಿತ್ವವು ನಾಟಕದಲ್ಲಿ ‘ಹೈಲೈಟ್’ ಆಗಿ, ಪ್ರೇಕ್ಷಕರಿಗಂತೂ ತುಂಬಾ ಇಷ್ಟವಾಗುತ್ತದೆ. ಸೇರಿಗೆ ಸವ್ವಾಸೇರಾಗಿ ಎಗರಾಡುವ ರಾಮ್ಕಿಯ ಪಾತ್ರವೂ ವಿಶೇಷ ಎನಿಸುತ್ತದೆ.
ಉತ್ತಮ ಮನರಂಜನೆ ನೀಡುವ ಈ ನಾಟಕದಲ್ಲಿ ರಂಗಸಜ್ಜಿಕೆ ಮತ್ತು ಪರಿಕರಗಳ ಪಾತ್ರ ದೊಡ್ದದು. ಗೆಳೆಯರಾಗಿ ಅಭಿನಯಿಸಿದ ಚಂದನ್ ಶಂಕರ್, ಪಿ.ಡಿ.ಸತೀಶ್‌ಚಂದ್ರ, ಶ್ರೀಹರಿ ಕಶ್ಯಪ್, ಸಿಂಧು ಮತ್ತು ರಶ್ಮಿ ಹದವರಿತು ನಟಿಸಿದರು.

ದೃಶ್ಯ ಬದಲಾವಣೆಯ ಮಧ್ಯೆ ಸಿನಿಮಾ ಹಾಡುಗಳ ಬಳಕೆ ಅಷ್ಟು ಹಿತವೆನಿಸಲಿಲ್ಲ. ಸೀರಿಯಲ್, ಸಿನಿಮಾ ರಂಗದಲ್ಲಿ ತೊಡಗಿಕೊಂಡಿರುವ ಕಾರಂತರು, ಪ್ರೇಕ್ಷಕರನ್ನು ನಗಿಸಲೇಬೇಕೆಂದು, ಅವುಗಳ ಬಗ್ಗೆ ಕುಚೋದ್ಯದ ಮಾತುಗಳನ್ನು ಬಳಸುವುದು ಕೊಂಚ ಅಗ್ಗದ ಗಿಮಿಕ್ ಅನಿಸಿತು.

ರಾಜಕಾಲುವೆ ಪ್ರಕರಣದಲ್ಲಿ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ಜನರ ಸಂಕಟವನ್ನು, ಲಘುವಾದ ಸಂದರ್ಭಕ್ಕೆ ಅನ್ವಯಿಸಿ ಲೇವಡಿ ಮಾಡಿದ್ದು ಕೆಲವರಿಗೆ ಹಿಡಿಸಲಿಲ್ಲ.

ಅದು ಬಿಟ್ಟರೆ, ಹಾಸ್ಯ ರಸಾಯನ ಉಣಬಡಿಸುವ ‘ಮಹಾಬ್ಲು’ ನೋಡುಗರ ಮನವನ್ನು ಹಗುರಗೊಳಿಸುವ ಬಗ್ಗೆ ಎರಡು ಮಾತಿಲ್ಲ. ಜಂಜಡಗಳಿಂದ ಹೈರಾಣಾದ ಮನಸಿಗೆ ಮಹಾಬ್ಲು ಒಂದು ನಗೆ ಟಾನಿಕ್ಕೇ ಸೈ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT