ADVERTISEMENT

ಪೌಲಸ್ಥ್ಯನ ಕಥೆ ನಾಳೆ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 15 ಜೂನ್ 2018, 13:38 IST
Last Updated 15 ಜೂನ್ 2018, 13:38 IST
ಪೌಲಸ್ಥ್ಯ ನಾಟಕದ ದೃಶ್ಯ
ಪೌಲಸ್ಥ್ಯ ನಾಟಕದ ದೃಶ್ಯ   

ಭಾರತೀಯ ಪರಂಪರೆಯನ್ನು ಎತ್ತಿ ಹಿಡಿಯುವ ಮಹಾಕಾವ್ಯ ರಾಮಾಯಣ. ಅದರ ಹೊಸ ಆವಿರ್ಭವದ ಕಥಾವಸ್ತುವನ್ನೊಳಗೊಂಡ ನಾಟಕ ‘ಪೌಲಸ್ಥ್ಯನ ಪ್ರಣಯ ಕಥೆ’. ಇದು ಲತಾ ಅವರ ಕಾದಂಬರಿ. ವಂಶಿ ಕನ್ನಡಕ್ಕೆ ಅನುವಾದಿಸಿದರು. ನಟ ಎಸ್.ವಿ.ಕೃಷ್ಣ ಶರ್ಮ ರೋಚಕ ನಾಟಕವಾಗಿಸಿದರು.

ಈ ನಾಟಕದಲ್ಲಿ ರಾವಣ ಖಳನಾಯಕನಲ್ಲ. ಅವನು ಪ್ರತಿನಾಯಕ, ಕಥಾ ನಾಯಕನಾಗಿ ವಿಜೃಂಭಿಸಿ ದ್ದಾನೆ. ಮನುಷ್ಯ ಸಹಜ ಗುಣಗಳಿಂದ ಕೂಡಿದ ರಾವಣ, ಮಹಾ ಸಂಗೀತಜ್ಞ, ವೈಣಿಕ, ಕವಿ, ವಾಗ್ಮಿ, ರಸಿಕ, ಒಳ್ಳೆಯ ಪತಿ, ಪ್ರೇಮಿ, ಅಣ್ಣ , ಉತ್ತಮ ರಾಜ ಹಾಗೆಯೇ ದೌರ್ಬಲ್ಯಗಳ ದಾಸನೂ ಹೌದು.

ಮಂಡೋದರಿಯನ್ನು ಧರ್ಮಪತ್ನಿಯಾಗಿ ಸ್ವೀಕರಿಸಿ ಪಟ್ಟದರಾಣಿಯನ್ನಾಗಿ ಮಾಡಿಕೊಳ್ಳುವಂಥ  ಹೃದಯವೈಶಾಲ್ಯ ತೋರಿದವ, ಸೀತೆ ತನ್ನ ಹೆಂಡತಿಯ ಮಗಳೆಂದು ತಿಳಿದು ಅವಳ ಯೋಗಕ್ಷೇಮಕ್ಕಾಗಿ ಸೀತಾಪಹರಣದ ಅಪವಾದವನ್ನೂ ಲೆಕ್ಕಿಸದೆ ಮಗಳನ್ನು ತೌರಿಗೆ ಕರೆತರುವ ಉದಾರಿ.

ADVERTISEMENT

ರಾಮನಲ್ಲಿ ಐಕ್ಯನಾಗಿ ಮುಕ್ತಿ ಪಡೆಯುವ ಅಭೀಪ್ಸೆಯಿಂದ ಅಳಿಯನನ್ನು ಕೆರಳಿಸಿ, ಅವನಿಂದಲೇ ಯುದ್ಧಕಂಕಣ ಕಟ್ಟಿಸಿಕೊಂಡು ಕೈವಲ್ಯ ಪಡೆಯುವ ಧೀಮಂತ, ಆಧ್ಯಾತ್ಮಿಕ ಚಿಂತನೆಯ ನೆಲೆಯಲ್ಲಿ ಉನ್ನತಸ್ತರಕ್ಕೆರುವ ರಾವಣನ ಪಾತ್ರ ನಾಟಕದಲ್ಲಿ ಬೇರೊಂದೇ ಖದರ್ ಪಡೆದುಕೊಳ್ಳುತ್ತದೆ. ಇದು ಈ ನಾಟಕದ ವಿಶೇಷ.

ಇವೆಲ್ಲಕ್ಕಿಂತ ಮಹತ್ತರವಾಗಿ ನಿಲ್ಲುವುದು ಅವನು ವಾಲ್ಮೀಕಿಯ ಕಾವ್ಯಪ್ರೇರಕನಾಗಿ ರಾಮಾಯಣದ ಕಥೆ ಬರೆಯಲು ಸೂತ್ರಧಾರನಾಗಿ ಮುಖ್ಯಪಾತ್ರ ವಹಿಸುವುದು.

ಪೌಲಸ್ಥ್ಯ, ರಾಮನ ಕೈಯ್ಯಿಂದಲೇ ಯುದ್ಧಕಂಕಣ ಕಟ್ಟಿಸಿಕೊಂಡು ಕೃತಕೃತ್ಯ ಭಾವದಿಂದ ಅವನಲ್ಲಿ ಐಕ್ಯವಾಗುವ ಪರಿಕಲ್ಪನೆ ಹೃದಯಸ್ಪರ್ಶಿ. ನಾಟಕಕ್ಕೆ ಪೂರಕವಾದ ಸಂಗೀತವನ್ನು ಒದಗಿಸಿರುವುದು ಸಂಗೀತ ಸಂಯೋಜಕ ಪದ್ಮಚರಣರ. ವಿದ್ವಾನ್ ಎಸ್. ಶಂಕರ್ ಗಾಯನ ಗಂಧರ್ವಲೋಕಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ.

ಪ್ರದರ್ಶನದ ವಿವರ
* ಯಾವಾಗ: ಭಾನುವಾರ
* ಸಮಯ: ಸಂಜೆ 7
* ಸ್ಥಳ: ಸೇವಾಸದನ, ಮಲ್ಲೇಶ್ವರ.
* ತಂಡ: ಸಂಧ್ಯಾ ಕಲಾವಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.