ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಗಳು ಕೇವಲ 20 ದಿನಗಳಲ್ಲಿ ಯಕ್ಷಗಾನ ತರಬೇತಿಯನ್ನು ಪಡೆದು ‘ಗುರುದಕ್ಷಿಣೆ’ ಎಂಬ ಪ್ರಸಂಗವನ್ನು ಪ್ರದರ್ಶಿಸಿದರು. ಈ ವಿದ್ಯಾರ್ಥಿಗಳ್ಯಾರೂ ಕನ್ನಡಿಗರಲ್ಲ. ಆದರೆ ಇವರು ಇಡೀ ಪ್ರಸಂಗವನ್ನು ಕನ್ನಡ ದಲ್ಲಿಯೇ ಪ್ರಸ್ತುತಪಡಿಸಿದ್ದು ವಿಶೇಷವಾಗಿತ್ತು. ಈ ಹೆಜ್ಜೆ ಯಕ್ಷಗಾನವನ್ನು ಜಾಗತಿಕವಾಗಿಸುವ ಯತ್ನಕ್ಕೆ ಮತ್ತಷ್ಟು ಬಲ ನೀಡಿದೆ..
–––
ಇತ್ತೀಚಿನ ದಿನಗಳಲ್ಲಿ ಯಕ್ಷಗಾನವನ್ನು ಕಲಿಯುವ ಹೊಸ ಮನಸ್ಸುಗಳು ದೇಶದ ಮೂಲೆಮೂಲೆಗಳಿಂದ ಬರುತ್ತಿರುವುದು ಖುಷಿಯ ಸಂಗತಿ. ಇದಕ್ಕೆ ಉದಾಹರಣೆ ಎಂಬಂತೆ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್.ಎಸ್.ಡಿ)ಯ ವಿದ್ಯಾರ್ಥಿಗಳು ಕೇವಲ 20 ದಿನಗಳಲ್ಲಿ ಯಕ್ಷಗಾನ ತರಬೇತಿಯನ್ನು ಪಡೆದು ‘ಗುರುದಕ್ಷಿಣೆ’ ಎಂಬ ಪ್ರಸಂಗವನ್ನು ಪ್ರದರ್ಶಿಸಿದರು. ಈ ಪ್ರಯೋಗದ ನಿರ್ದೇಶನವನ್ನು ಬನ್ನಂಜೆ ಸಂಜೀವ ಸುವರ್ಣ ಅವರು ನಿರ್ವಹಿಸಿದ್ದರು. ಇದು ಕೇವಲ ಒಂದು ಯಕ್ಷಗಾನ ಪ್ರದರ್ಶನ ಮಾತ್ರವಲ್ಲ. ಈ ಪ್ರಯೋಗವು ಹಲವು ಆಯಾಮಗಳನ್ನು ಒಳಗೊಂಡಿದ್ದು ತರಬೇತಿ ವಿಧಾನ, ಕಲೆಯನ್ನು ಹೊರ ಜಗತ್ತಿಗೆ ಪರಿಚಯಿಸುವ ರೀತಿ, ಪ್ರಸ್ತುತಿಯ ಶುದ್ಧತೆ, ಹೊಸ ತಲೆಮಾರಿಗೆ ಯಕ್ಷಗಾನವನ್ನು ಪರಿಚಯಿಸಿ ಸಾಧಿಸುವ ಪ್ರಯತ್ನ ಮುಂತಾದ ಭಾಗವಾಗಿ ಇದನ್ನು ಕಾಣಬೇಕಾಗಿದೆ.
ಸರ್ವೇಸಾಮಾನ್ಯವಾಗಿ ಯಕ್ಷಗಾನವು ಕನ್ನಡದಲ್ಲಿ ಪ್ರಸ್ತುತವಾಗುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಈ ವಿದ್ಯಾರ್ಥಿಗಳು ಕನ್ನಡಿಗರಲ್ಲ. ದೇಶದ ಬೇರೆ, ಬೇರೆ ರಾಜ್ಯಗಳಿಂದ ಬಂದ ಇವರಿಗೆ ಕನ್ನಡದ ಬಗ್ಗೆ ಯಾವುದೇ ಅರಿವೂ ಇರಲಿಲ್ಲ. ಕಳೆದ ವರ್ಷವೂ ಅಲ್ಲಿಯ ವಿದ್ಯಾರ್ಥಿಗಳು ಯಕ್ಷಗಾನವನ್ನು ಪ್ರಯೋಗಿಸಿದ್ದರಾದರೂ ಅವರು ಅದನ್ನು ಹಿಂದಿಯಲ್ಲಿಯೇ ಪ್ರಸ್ತುತಪಡಿಸಿದ್ದರು. ಆದರೆ ಈಗ ಹೊಸ ಬ್ಯಾಚಿನ ವಿದ್ಯಾರ್ಥಿಗಳು ಒಂದು ಹೆಜ್ಜೆ ಮುಂದೆ ಸಾಗಿ, ಕೇವಲ ಕೆಲವೇ ದಿನಗಳಲ್ಲಿ ಯಕ್ಷಗಾನದ ಹೆಜ್ಜೆಗಳನ್ನು, ಅದರ ನೃತ್ಯ ಭಾಷೆ, ಆಂಗಿಕ ಅಭಿನಯವನ್ನು ಕಲಿತು, ವಿಶ್ವಾಸಪೂರ್ಣವಾಗಿ ರಂಗಪಟುತ್ವವನ್ನು ಅಭ್ಯಸಿಸಿ, ಕನ್ನಡ ಭಾಷೆಯಲ್ಲಿಯೇ ಇಡೀ ಯಕ್ಷಗಾನವನ್ನು ಪ್ರಸ್ತುತಪಡಿಸಿದ್ದು ನಿಜಕ್ಕೂ ಪ್ರಶಂಸೆಗೆ ಅರ್ಹವಾಗಿದೆ. ಇಂತಹ ಪ್ರಯೋಗಗಳು ಯಕ್ಷಗಾನದಂಥ ಶ್ರೇಷ್ಠವಾದ ಕಲೆಯನ್ನು ಭಾಷೆಯನ್ನು ಮೀರಿ, ರಾಷ್ಟ್ರಮಟ್ಟದಲ್ಲಿ ವಿಸ್ತರಿಸಲು ಪೂರಕವಾಗಿದೆ ಎನ್ನಬಹುದು.
ಈ ಪ್ರಯೋಗಕ್ಕೆ ಭಾಷೆಯ ಕಾರಣಕ್ಕಾಗಿ ವಿನಾಯಿತಿ ನೀಡಬೇಕೆಂದೇನೂ ಇಲ್ಲ. ಇಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರಸ್ತುತಿಯಲ್ಲಿ ಹೇಳಬೇಕಾದ ಅಂಶಗಳನ್ನು ಬಹು ಚೆನ್ನಾಗಿ ಮತ್ತು ಸ್ಪಷ್ಟವಾಗಿ ಮಂಡಿಸಿದ್ದರು. ಹಾಗಾಗಿ ಇದನ್ನು ಕೇವಲ ಮಹತ್ವದ ಪ್ರಾರಂಭವೆಂದು ಮಿತಿಗೊಳಿಸದೇ, ಯಕ್ಷಗಾನೀಯ ಅಂಶಗಳ ದೃಷ್ಟಿಯಿಂದ ಹೆಚ್ಚು ಚರ್ಚಿಸಬೇಕಾಗಿರುವ ಅಗತ್ಯವಿದೆ. ಈ ರಂಗ ಪ್ರಯೋಗವು ಸೃಷ್ಟಿಸಿರುವ ಪರಿಣಾಮಗಳನ್ನು ಮನಗಂಡು, ಅವು ನಿರ್ದೇಶನದ ಮೂಲಕ ಹೇಗೆ ಸೃಜನಾತ್ಮಶೀಲತೆಯನ್ನು ಬಿಟ್ಟುಕೊಡದೇ ಪ್ರಸ್ತುತ ರಂಗಭೂಮಿಯಲ್ಲಿರುವ ಕೆಲವು ಅಪಸವ್ಯಗಳಿಂದ ಮುಕ್ತಿಯನ್ನು ನೀಡಬಲ್ಲವು ಎಂಬುದಕ್ಕೆ ದಿಕ್ಸೂಚಿಯಾಗಿದೆ.
ಇಲ್ಲಿ ಪ್ರಯೋಗವು ಆರಂಭವಾಗಿದ್ದು ಪೂರ್ವರಂಗದಿಂದ. ಹಿಂದಿನ ಕಾಲದಲ್ಲಿ ಯಕ್ಷಗಾನದಲ್ಲಿನ ಪೂರ್ವರಂಗವೇ ಕನಿಷ್ಠ ಮೂರು-ನಾಲ್ಕು ಗಂಟೆಗಳ ಕಾಲ ನಡೆಯುತ್ತಿದ್ದವು. ಆದರೆ ಇಂದು ತಾಳ್ಮೆ ಮತ್ತು ಬದ್ಧತೆಯ ಕೊರತೆಯಿಂದ ಅದು ನಿಧಾನವಾಗಿ ಯಕ್ಷಗಾನ ರಂಗದಿಂದ ಕಣ್ಮರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಇಡೀ ಪ್ರಸಂಗವೇ ತೊಂಬತ್ತು ನಿಮಿಷದ ಅವಧಿಯಾಗಿದ್ದರೂ ಕೂಡ ಪೂರ್ವರಂಗದ ಝಲಕ್‌ಗಳನ್ನು ಬಿಡದೇ ಪ್ರಸಂಗದೊಂದಿಗೆ ಪ್ರಸ್ತುತಪಡಿಸಿದ ಕ್ರಮ ನಿಜಕ್ಕೂ ಮಾದರಿ ಎನ್ನಬಹುದು. ವಿದ್ಯಾರ್ಥಿಗಳು ಶೃತಿಬದ್ಧವಾಗಿ ಭಾಗವತರೊಂದಿಗೆ ಹಾಡುತ್ತ ಸಭಾವಂದನೆಯನ್ನು ಮಾಡಿದ್ದು ವಿಶೇಷವಾಗಿತ್ತು.
ರಂಗ ಸೃಷ್ಟಿಸಿದ ಎರಡು ಭಾವನಾತ್ಮಕ ಸನ್ನಿವೇಶಗಳು ನಮ್ಮನ್ನು ಕಾಡುವಂತೆ ಮಾಡುತ್ತವೆ. ಮೊದಲನೆಯದು, ಏಕಲವ್ಯನು ಬಿಲ್ಲು ವಿದ್ಯೆ ಕಲಿಯುವ ಅಪಾರ ಹಂಬಲದೊಂದಿಗೆ ಗುರು ದ್ರೋಣರ ಬಳಿಗೆ ಬರುವ ಕ್ಷಣ. ಇಲ್ಲಿ ನಿರ್ದೇಶಕರು ಮತ್ತು ಕಲಾವಿದರು ಪಾತ್ರಗಳನ್ನು ಏಕಪಕ್ಷೀಯವಾಗಿ ಚಿತ್ರಿಸದೇ, ದ್ರೋಣರ ತಿರಸ್ಕಾರವನ್ನು ತೀಕ್ಷ್ಣವಾಗಿ ಬಿಂಬಿಸುವ ಬದಲು ಆಂತರಿಕ ಸಂಘರ್ಷಕ್ಕೆ ಸ್ಥಳ ನೀಡಿದ್ದು ವಿಶೇಷವಾಗಿತ್ತು. ಅತ್ತ ಏಕಲವ್ಯನನ್ನು, ಅವನ ಆಸಕ್ತಿಯನ್ನು ಬಿಟ್ಟುಕೊಡುವುದಕ್ಕೆ ಸಾಧ್ಯವಾಗದೇ ದ್ರೋಣರಲ್ಲಿ ಮೂಡಿದ ತಾಕಲಾಟವು ಒಮ್ಮೆಗೆ ಮಿಡಿದಿದ್ದು ಕಾಣುವಂತಿತ್ತು. ಅಂಗಲಾಚಿ ಬೇಡಿದರೂ ಕಾರಣವಿಲ್ಲದೇ ತಿರಸ್ಕಾರಕ್ಕೆ ಒಳಗಾಗುವ ಏಕಲವ್ಯನ ಪರಿಸ್ಥಿತಿಯನ್ನು ಕಲಾವಿದರು ಚೆನ್ನಾಗಿಯೇ ಕಟ್ಟಿಕೊಟ್ಟರು. ಈ ಎರಡು ಪಾತ್ರಗಳ ಭಾವವನ್ನು, ಹಲವು ಅರ್ಥ ವ್ಯಾಪ್ತಿಯನ್ನು ಮುಖಾಮುಖಿಯಾಗಿಸುವ ನಿರ್ದೇಶಕರ ಪ್ರಯತ್ನ ಇಲ್ಲಿ ಯಶಸ್ವಿಯಾಗಿದೆ. ಇದೇ ರೀತಿಯಲ್ಲಿ ಕಾಡುವ ಮತ್ತೊಂದು ಸನ್ನಿವೇಶವೆಂದರೆ, ಅದು ಏಕಲವ್ಯ ಹಾಗೂ ಅವನ ತಾಯಿಯೊಂದಿಗಿನ ಸನ್ನಿವೇಶ. ತಾಯಿಗೆ ಮಗನು ಧನುರ್ವಿದ್ಯೆ ಕಲಿಯಬೇಕೆಂಬ ಹಂಬಲ ಇದ್ದರೂ, ತನ್ನ ಸಾಮಾಜಿಕ ಪರಿಸ್ಥಿತಿಗೆ ಕೈಗೊಂಬೆಯಾಗಿ ಮಗನಿಗೆ ಹೇಳಲಾಗದ ಅಸಹಾಯಕತೆ ರಂಗದಲ್ಲಿ ಸಹಜವಾಗಿಯೇ ಬಂದಿತ್ತು. ಅಲ್ಲಿ ಮಗನ ಚಡಪಡಿಕೆ, ಉತ್ಸಾಹ, ಎಲ್ಲವೂ ಕೂಡ ಆಪ್ತವಾಗಿ ಕಾಣಿಸಿದ್ದು ವಿಶೇಷವಾಗಿತ್ತು. ಭಾಷೆಯ ಅಡಚಣೆಗಳಿಂದಾಗಿ ಇಂತಹ ಭಾವನಾತ್ಮಕ ಕ್ಷಣಗಳು ಪ್ರೇಕ್ಷಕರಿಗೆ ತಲುಪದ ಅಪಾಯವಿದ್ದರೂ, ಕಲಾವಿದರು ಅದನ್ನು ಅತ್ಯುತ್ತಮವಾಗಿ ತಲುಪಿಸಿ, ಅಭಿನಯದ ಶಕ್ತಿಯ ಮೂಲಕ ಭಾವವ್ಯಕ್ತಿಯ ತೀವ್ರತೆಯನ್ನು ಕಾಪಾಡಿದರು.
ಹಾಗಂತ ಸಣ್ಣಪುಟ್ಟ ದೋಷಗಳು, ಕೊರತೆಗಳು ಎಲ್ಲಾ ಪ್ರದರ್ಶನಗಳಲ್ಲಿಯೂ ಇರುವಂತೆಯೇ ಇಲ್ಲಿ ಕೂಡ ಕಂಡುಬಂದವು ಎಂಬುದು ಸ್ವಾಭಾವಿಕ. ಆದರೂ ಇದು ವಿದ್ಯಾರ್ಥಿಗಳಿಂದ ನಡೆದಿರುವ ಪ್ರಥಮ ಪ್ರಯೋಗವಾಗಿರುವ ಕಾರಣದಿಂದಾಗಿ, ಈ ಬಗ್ಗೆಯೂ ಚಿಂತಿಸಿ ಮುಂದಿನ ಬಾರಿಗೆ ಹೆಚ್ಚಿನ ಪರಿಪಕ್ವತೆಯನ್ನು ತರುವ ಅವಕಾಶವಿದೆ. ಉದಾಹರಣೆಗೆ, ದ್ರೋಣರು ತಮ್ಮ ಶಿಷ್ಯರಲ್ಲಿ ಲೋಕದ ವಿವಿಧ ಪ್ರಶ್ನೆಗಳನ್ನು ಕೇಳುವ ಮತ್ತು ಶಿಷ್ಯರಿಂದ ಉತ್ತರ ನಿರೀಕ್ಷಿಸುವ ಭಾಗ ಸ್ವಲ್ಪ ದೀರ್ಘವಾದಂತೆ ತೋರಿತು. ಈ ಭಾಗವನ್ನು ಇನ್ನಷ್ಟು ಸಂಕ್ಷಿಪ್ತಗೊಳಿಸಬಹುದಿತ್ತು. ಅಷ್ಟೇ ಅಲ್ಲದೆ, ವಿರೋಚಿತ ಧನುರ್ವಿದ್ಯೆಯ ಕೆಲವು ಸನ್ನಿವೇಶಗಳನ್ನು ದೃಶ್ಯ ರೂಪದಲ್ಲಿ ರಂಗಕ್ಕೆ ತರುವ ಅವಕಾಶವಿದ್ದರೆ ಅದನ್ನು ತರಬಹುದು. ಜೊತೆಗೆ ಯಕ್ಷಗಾನದಲ್ಲಿ ಭಾಗವತಿಕೆ ಹಾಗೂ ಅದಕ್ಕೆ ಹೊಂದುವ ಕುಣಿತಗಳಿಗೆ ಪ್ರಮುಖ ಸ್ಥಾನವಿರುವುದರಿಂದ, ಒಟ್ಟಂದದ ಈ ಪ್ರಯೋಗದಲ್ಲಿ ಈ ಅಂಶಗಳಿಗೆ ಸ್ವಲ್ಪ ಕಡಿಮೆ ಅವಕಾಶ ದೊರೆತಿರುವುದನ್ನು ಗಮನಿಸಬಹುದು.
ಹೀಗೆ ದಕ್ಷ ನಿರ್ದೇಶನ, ಭಾವಪೂರ್ಣ ಅಭಿನಯ ಮತ್ತು ಸಾಂಪ್ರದಾಯಿಕ ಯಕ್ಷಗಾನದ ಅಂಶಗಳೊಂದಿಗೆ ಹೊಸತನ್ನು ಸಂಧಾನಿಸಿದ ಈ ಪ್ರಯೋಗ, ಯಕ್ಷಗಾನದ ಭವಿಷ್ಯವನ್ನು ವಿಸ್ತಾರಗೊಳಿಸುವ ಅವಕಾಶಗಳನ್ನೊಳಗೊಂಡ ಮಾದರಿಯಾಗಿ ರೂಪುಗೊಂಡಿದೆ. ಭಾಷಾ ಮಿತಿ, ಕಾಲಾವಕಾಶದ ಅಡಚಣೆಗಳ ಹೊರತಾದ ಕಲಾತ್ಮಕತೆ ಹೇಗೆ ಸಾಧ್ಯ ಎಂಬುದಕ್ಕೆ ಇದು ಸ್ಪಷ್ಟ ಉತ್ತರವನ್ನು ನೀಡುತ್ತದೆ. ಇಂತಹ ಪ್ರಯೋಗಗಳು ಕೇವಲ ರಂಗಪ್ರದರ್ಶನ
ವಲ್ಲ, ಯಕ್ಷಗಾನ ರಂಗಭೂಮಿಗೆ ಹೊಸ ದಿಕ್ಕು, ಹೊಸ ಚೈತನ್ಯ, ಹೊಸ ಕನಸುಗಳನ್ನು ನೀಡುತ್ತದೆ ಎಂಬುದನ್ನು ನಿಚ್ಚಳವಾಗಿ ಹೇಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.