ADVERTISEMENT

‘ಬನ್ನಂಜೆ ಸಂಭ್ರಮ’ಕ್ಕೆ ಮೂರರ ಹರ್ಷ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2018, 19:45 IST
Last Updated 27 ಡಿಸೆಂಬರ್ 2018, 19:45 IST
ಬನ್ನಂಜೆ ಗೋವಿಂದಾಚಾರ್ಯ
ಬನ್ನಂಜೆ ಗೋವಿಂದಾಚಾರ್ಯ   

ಮೂರನೇ ವರ್ಷದ ‘ಬನ್ನಂಜೆ ಸಂಭ್ರಮ‘ ಕಾರ್ಯಕ್ರಮ ಇದೇ 28ರಂದು ನಗರದಲ್ಲಿ ನಡೆಯಲಿದೆ.

ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಈ ಕಾರ್ಯಕ್ರಮ ಆಯೋಜಿಸಿದೆ. ಜಯನಗರದ ಜೆ.ಎಸ್‌.ಎಸ್‌ ಸಭಾಂಗಣದಲ್ಲಿ ಸಂಜೆ 4.30ರಿಂದ ರಾತ್ರಿ 9 ಗಂಟೆವರೆಗೂ ಕಾರ್ಯಕ್ರಮ ನಡೆಯಲಿದೆ.

ಅತಿಥಿಗಳಾಗಿ ರಾಮಭದ್ರಾಚಾರ್ಯ ಮಹಾರಾಜ್‌, ವಿದ್ವಾನ್‌ ಉಮಾಕಾಂತ ಭಟ್ಟರು, ಮಲ್ಲೇಪುರಂ ಜಿ.ವೆಂಕಟೇಶ್‌, ಬನ್ನಂಜೆ ಗೋವಿಂದಾಚಾರ್ಯ ಭಾಗವಹಿಸಲಿದ್ದಾರೆ.

ADVERTISEMENT

ದೇಸೀ ಮಾರ್ಗ ಶೈಲಿಯ ನೃತ್ಯ ನಾಟಕ ‘ಪಾಂಚಾಲಿ’ ಪ್ರದರ್ಶನ ಕೂಡ ನಡೆಯಲಿದೆ. ಹಿರಿಯ ರಂಗಕರ್ಮಿ ಬಿ.ಜಯಶ್ರೀ, ವಿದ್ವಾನ್‌ ಸತ್ಯನಾರಾಯಣ ರಾಜು ಅವರು ಈ ನಾಟಕದಲ್ಲಿ ಅಭಿನಯಿಸಲಿದ್ದಾರೆ.

‘ನಮ್ಮ ಕಲಾಜೀವ’ರು ತಂಡ ಮುಖ್ಯಭೂಮಿಕೆಯಲ್ಲಿ ತೊಡಗಿಸಿಕೊಂಡಿದೆ. ಎಚ್‌.ಎಸ್‌.ವೆಂಕಟೇಶಮೂರ್ತಿ ರಚಿಸಿದ್ದರೆ, ಜಯಶ್ರೀ ಅವರೇ ಈ ನಾಟಕವನ್ನು ನಿರ್ದೇಶಿಸಿದ್ದಾರೆ.

ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಹುಟ್ಟುಕೊಂಡಿದ್ದಕ್ಕೂ ಒಂದು ವಿಶೇಷತೆ ಇದೆ. ಗೋವಿಂದಾಚಾರ್ಯರಿಗೆ 80 ವರ್ಷ ತುಂಬಿದ ಸಂಭ್ರಮ ಆಚರಿಸುವುದಕ್ಕಾಗಿ ಇದು ಹುಟ್ಟಿಕೊಂಡಿತು.

2015ರಲ್ಲಿ ಈ ಉದ್ದೇಶದಿಂದ ಆರಂಭವಾದ ಸಂಸ್ಥೆ ಅದೇ ವರ್ಷದ ಡಿಸೆಂಬರ್‌ ತಿಂಗಳಿನಲ್ಲಿ 5 ದಿನಗಳ ‘ಬನ್ನಂಜೆ ಸಂಭ್ರಮ 80‘ ಎಂಬ ಕಾರ್ಯಕ್ರಮ ನಡೆಸಿತ್ತು.

ಇದರ ನೆನಪಿಗಾಗಿ ಪ್ರತಿವರ್ಷ ಬನ್ನಂಜೆ ಸಂಭ್ರಮ, ಒಂದು, ಎರಡು ಎಂದು ಆಚರಿಸಲಾಗುತ್ತಿದೆ. ಈಗ ಮೂರನೇ ವರ್ಷದ ಕಾರ್ಯಕ್ರಮ ನಡೆಯುತ್ತಿದೆ.

ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಬನ್ನಂಜೆಯವರ ಉಪಸ್ಥಿತಿಯಲ್ಲಿ ಭಾರತದ ಒಬ್ಬ ಶ್ರೇಷ್ಠ ವಿದ್ವಾಂಸರನ್ನು ಪರಿಚಯಿಸುವುದು. ಅವರ ಒಂದು ಉಪನ್ಯಾಸವನ್ನು ಏರ್ಪಡಿಸುವುದು.

ಈ ಬಾರಿ ರಾಮಭದ್ರಾಚಾರ್ಯ ಮಹಾರಾಜ್‌ ಅವರು ಉಪನ್ಯಾಸ ನೀಡಲಿದ್ದಾರೆ. ಪದ್ಮವಿಭೂಷಣ ಪುರಸ್ಕೃತರಾಗಿರುವ ಅವರು 22 ಭಾಷೆಗಳಲ್ಲಿ ಮಾತನಾಡಬಲ್ಲರು.

ಅನೇಕ ಗ್ರಂಥಗಳನ್ನು ಕಂಠಸ್ಥ ಮಾಡಿದ್ದಾರೆ. ಇವರು ಭಾಗವತಸಾರದ ಕುರಿತು ಮಾತನಾಡಲಿದ್ದಾರೆ. ಉತ್ತರಪ್ರದೇಶದ ತುಲಸೀ ಪೀಠಾಧೀಶ್ವರ ಜಗದ್ಗುರುಗಳಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.