ರಂಗಶಂಕರ ಮಕ್ಕಳಿಗೆಂದೇ ರೂಪಿಸಿ, ನಿರ್ವಹಿಸುತ್ತಿರುವ ರಾಷ್ಟ್ರದ ಅತ್ಯುತ್ತಮ ಮಕ್ಕಳ ರಂಗಭೂಮಿ ಕಾರ್ಯಕ್ರಮಗಳಲ್ಲಿ ಒಂದು ‘ಆಹಾ! ಮಕ್ಕಳ ನಾಟಕೋತ್ಸವ’.
ಈ ಕಾರ್ಯಕ್ರಮವು ಬದ್ಧತೆಯ ಜೊತೆಗೆ ಮಕ್ಕಳ ಕಲಿಕೆಗೆ ಹೊಸ ಮಾದರಿಗಳನ್ನು ಒದಗಿಸುವ ಮೂಲಕ ಮಕ್ಕಳು ಮಾಹಿತಿಪೂರ್ಣ, ಕ್ರಿಯಾಶೀಲ ಮತ್ತು ಸಾಮಾಜಿಕ ಅನುಭೂತಿಯುಳ್ಳ ವ್ಯಕ್ತಿತ್ವದವರಾಗಲು ಸಹಕರಿಸುತ್ತದೆ. ಈ ಕಾರ್ಯಕ್ರಮದ ಭಾಗವಾಗಿ ಒದಗಿಸಲಾಗುವ ನಾಟಕಗಳು ಮಕ್ಕಳಿಗೆ ದೃಶ್ಯ, ಶ್ರವ್ಯ, ಮೌಖಿಕ ಮತ್ತು ದೈಹಿಕ ಚಿಂತನೆಗೆ ಪ್ರಚೋದನೆಯನ್ನು ಒದಗಿಸುವುದಲ್ಲದೆ, ಮಕ್ಕಳಲ್ಲಿ ಸೃಜನಾತ್ಮಕತೆ, ಚಿಂತನಶೀಲತೆ, ಕಲ್ಪನಾ ಶಕ್ತಿ ಹೆಚ್ಚಿಸುತ್ತದೆ ಹಾಗೂ ಎದುರಾಗಬಹುದಾದ ಸಮಸ್ಯೆಗಳನ್ನು ಪರಿಹರಿಸಲು ಉಪಾಯಗಳನ್ನು ದಾರಿಗಳನ್ನು ತೋರುವ ಮೂಲಕ ಮಾನವೀಯ ವ್ಯಕ್ತಿತ್ವ ರೂಪಿಸುತ್ತದೆ.
ಆಹಾ! ಅಂತರರಾಷ್ಟ್ರೀಯ ಮಕ್ಕಳ ನಾಟಕೋತ್ಸವ 2024
ನಾಟಕೋತ್ಸವದ ಹದಿನಾಲ್ಕನೇ ಆವೃತ್ತಿ ಜುಲೈ 13ರಿಂದ 19ರವರೆಗೆ ನಡೆಯಲಿದೆ. ಈ ಮಕ್ಕಳ ರಂಗಸಪ್ತಾಹದಲ್ಲಿ ದಕ್ಷಿಣ ಕೊರಿಯಾ, ಜರ್ಮನಿ, ಆಸ್ಟ್ರಿಯಾ, ಶ್ರೀಲಂಕಾ, ಸ್ವಿಟ್ಜರ್ಲೆಂಡ್ ದೇಶಗಳ ನಾಟಕಗಳಲ್ಲದೇ ಭಾರತದ ನಾಟಕವನ್ನು ಪ್ರಸ್ತುತಪಡಿಸಲಾಗುತ್ತಿದೆ. ಈ ನಾಟಕಗಳು ಪರಿಸರ ರಕ್ಷಣೆ, ಸಹಜೀವನ, ಲಿಂಗ ಅಸಮಾನತೆ ತೊಡೆಯುವ ಹಾಗೂ ಸಂಘರ್ಷದ ಕಾಲದಲ್ಲಿ ಸಹಾನುಭೂತಿಯಿಂದ ಎದುರಿಸುವ ರೀತಿ - ಹೀಗೆ ವೈವಿಧ್ಯಮಯ ವಸ್ತುಗಳನ್ನು ಒಳಗೊಂಡಿವೆ.
ಮತ್ತೊಂದು ವಿಶೇಷವೆಂದರೆ, ಬೆಂಗಳೂರಿನ ರಂಗ ಶಂಕರದಲ್ಲಿ ಪ್ರದರ್ಶನವಾಗುವ ಆಹಾ! ನಾಟಕಗಳು ಅಹಮದಾಬಾದ್ ನಗರದಲ್ಲಿ ಸಹ ಪ್ರದರ್ಶನ ಆಗುತ್ತಿವೆ. ಅಹಮದಾಬಾದಿನ ನಿಕೊಯೀ ಫೌಂಡೇಷನ್ ಅವರು ಈ ಪ್ರದರ್ಶನಗಳಿಗೆ ಸಹಭಾಗಿತ್ವ ನೀಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.