ADVERTISEMENT

‘ಅಕ್ಷಯಾಂಬರ’ ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2019, 19:46 IST
Last Updated 6 ಮಾರ್ಚ್ 2019, 19:46 IST
‘ಅಕ್ಷಯಾಂಬರ’ದ ನೋಟ
‘ಅಕ್ಷಯಾಂಬರ’ದ ನೋಟ   

‘ಅಕ್ಷಯಾಂಬರ’ ಲಿಂಗ, ಮಹಿಳಾ ಪ್ರಾತಿನಿಧ್ಯ ಮತ್ತು ಅಧಿಕಾರದ ವಿವಿಧ ಆಯಾಮಗಳನ್ನು ಒಳಗೊಂಡ ಕನ್ನಡ ನಾಟಕ. ಅದರ ಪ್ರದರ್ಶನ ಜೆ.ಪಿ.ನಗರದ 2ನೇ ಹಂತದಲ್ಲಿರುವ ರಂಗಶಂಕರದಲ್ಲಿ ಗುರುವಾರ ರಾತ್ರಿ 7.30 ಗಂಟೆಗೆ ನಡೆಯಲಿದೆ. ಅದರ ಪ್ರಸ್ತುತಿಯನ್ನು ಡ್ರಾಮಾನೊನ್‌ ತಂಡ ಮಾಡಲಿದೆ.

ಆಧುನಿಕ ರಂಗಭೂಮಿಯ ಚರ್ಯೆ ಮತ್ತು ಯಕ್ಷಗಾನದ ನೃತ್ಯದ ಮಟ್ಟುಗಳನ್ನು ಅಳವಡಿಸಿಕೊಂಡು ವಿನೂತನ ಶೈಲಿಯಲ್ಲಿ ರಂಗದಲ್ಲಿ ಪ್ರಯೋಗವಾಗಲಿದೆ ‘ಅಕ್ಷಯಾಂಬರ’. ಮಹಿಳಾ ಪ್ರಾತಿನಿಧ್ಯ ಮತ್ತು ಪುರುಷಾಧಿಪತ್ಯವನ್ನು ಪ್ರಶ್ನಿಸುತ್ತಲೇ ಪ್ರಸ್ತುತಕ್ಕೆ ಸಂವಾದಿಯಾಗುವ ವಿಶ್ಲೇಷಣೆ ಈ ನಾಟಕದ ಮುಖ್ಯ ಆಕರ್ಷಣೆ.

’ದ್ರೌಪದಿ ವಸ್ತ್ರಾಪಹರಣ’ ಯಕ್ಷಗಾನ ಪ್ರಸಂಗದ ಕಥನ ಇಲ್ಲಿ ವಸ್ತುವಾಗುತ್ತದೆ. ಯಕ್ಷರಂಗದಲ್ಲಿ ಮಹಿಳಾ ವೇಷಧಾರಿಯಾಗಿಯೂ, ನುರಿತ ಕಲಾವಿದೆಯೊಬ್ಬರು ಕೌರವನಾಗಿಯೂ ಅಭಿನಯಿಸಲಿದ್ದಾರೆ. ಪುರುಷನೊಬ್ಬ ಮಹಿಳೆಯ ಪಾತ್ರ ಮಾಡಬಹುದಾದರೆ ಪುರುಷ ಪಾತ್ರಧಾರಿ ಮಹಿಳೆಯನ್ನೂ ಅಷ್ಟೇ ಸಲೀಸಾಗಿ ಸ್ವೀಕರಿಸುತ್ತೇವೆಯೇ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಯತ್ನವೂ ‘ಅಕ್ಷಯಾಂಬರ’ದಲ್ಲಿ ಕಾಣುತ್ತದೆ.

ADVERTISEMENT

ಈ ನಾಟಕ ಈಗಾಗಲೇ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಮಹೀಂದ್ರಾ ಎಕ್ಸಲೆನ್ಸ್‌ ಇನ್‌ ಥಿಯೇಟರ್‌ ಅವಾರ್ಡ್ಸ್‌, ಅತ್ಯುತ್ತಮ ಮೂಲ ಕತೆ ಮತ್ತು ಅತ್ಯುತ್ತಮ ಮುಂಚೂಣಿ ನಟ (ದ್ರೌಪದಿ) ಪ್ರಶಸ್ತಿಗಳು ನಾಟಕಕ್ಕೆ ಸಿಕ್ಕಿವೆ.

90 ನಿಮಿಷಗಳ ಈ ನಾಟಕ ಕನ್ನಡದಲ್ಲೇ ಇದ್ದರೂ ಇಂಗ್ಲಿಷ್‌ ಸಬ್‌ಟೈಟಲ್‌ ಕೂಡಾ ಇದೆ. ಟಿಕೆಟ್‌ಗಾಗಿwww.bookmyshow.comಗೆ ಭೇಟಿ ಕೊಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.