ADVERTISEMENT

‘ಪತಂಗ ಪ್ರಭಾವ’ ನಾಟಕ ಪ್ರದರ್ಶನ

Pantanga Prabhava

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2018, 19:39 IST
Last Updated 20 ಡಿಸೆಂಬರ್ 2018, 19:39 IST
‘ಪತಂಗ ಪ್ರಭಾವ’ ನಾಟಕದ ದೃಶ್ಯ
‘ಪತಂಗ ಪ್ರಭಾವ’ ನಾಟಕದ ದೃಶ್ಯ   

‘ಪ್ರಪಂಚದ ಯಾವುದೋ ಮೂಲೆಯಲ್ಲಿ ಚಿಟ್ಟೆಯೊಂದು ತನ್ನ ರೆಕ್ಕೆ ಬಡೆದರೆ, ಅದರಿಂದಾಗಿ ಇನ್ನೆಲ್ಲೋ ಚಂಡಮಾರುತವಾಗುವ ಸಾಧ್ಯತೆ ಇರುತ್ತದೆಯಂತೆ’. ಇದು ಕ್ವಾಂಟಮ್ ಫಿಸಿಕ್ಸ್‌ನ ಒಂದು ಥಿಯರಿ. ಅಂಥದೊಂದ್ದು ಆಶಯವನ್ನು ಹೊತ್ತು ‘ಧೀ ಮಹಿ’ ತಂಡ ‘ಪತಂಗ ಪ್ರಭಾವ’ ಎನ್ನುವ ವಿಶಿಷ್ಟ ನಾಟಕವನ್ನು ಶುಕ್ರವಾರ (ಡಿ.21) ರಂಗದ ಮೇಲೆ ಪ್ರದರ್ಶಿಸಲಿದೆ.

ಪುರಾಣದ ದ್ರೌಪದಿ ಮತ್ತು ಶಿಖಂಡಿ, ವರ್ತಮಾನದ ಕೃಷ್ಣಾ ಮತ್ತು ಲಿಂಗತ್ವ ಅಲ್ಪಸಂಖ್ಯಾತ ಮೋ ಅನುಭವಿಸುವ ಮಾನಸಿಕ ತುಮುಲಗಳ ಸಾರವೇ ‘ಪತಂಗ ಪ್ರಭಾವ’.

ಐವರು ಗಂಡಂದಿರನ್ನು ಹೊಂದಿದ್ದರೂ ದ್ರೌಪದಿಯ ಅಂತರಂಗವನ್ನು ಅರ್ಥ ಮಾಡಿಕೊಳ್ಳುವರಾರು ಇರಲಿಲ್ಲ. ಅಂತೆಯೇ ಜೀವಿಸಲು ಬೇಕಾದ ಸಕಲ ಸೌಕರ್ಯವಿದ್ದರೂ ಗಂಡನ ಹಿಡಿ ಪ್ರೀತಿಗಾಗಿ ಹಂಬಲಿಸುವ ಕೃಷ್ಣಾ ಕೂಡಾ ದ್ರೌಪದಿಯಂತೆಯೇ ನರಳುವವಳು. ತೃತೀಯ ಲಿಂಗಿಗಳು ಎನ್ನುವ ಕಾರಣದಿಂದ ಶಾಪಗ್ರಸ್ತರಾಗಿರುವ ಆ ಸಮುದಾಯದ ಶಿಖಂಡಿ ಮತ್ತು ಮೋ ಅವರ ನೋವು ಒಂದೆಯಾದರೂ ಕಾಲಘಟ್ಟಗಳು ಮಾತ್ರ ಭಿನ್ನ. ಆದರೆ ಕಾಲಾಂತರದಿಂದಲೂ ಅವರಿಬ್ಬರನ್ನೂ ನೋಡುವ ಸಾಮಾಜಿಕ ದೃಷ್ಟಿಕೋನದಲ್ಲಿ ಮಾತ್ರ ಬದಲಾವಣೆ ಕಂಡಿಲ್ಲ. ಹೀಗೆ ನಾಲ್ವರ ಅಂತರಂಗದ ದನಿಗಳಿಗೆ ‘ಪತಂಗ ಪ್ರಭಾವ’ ಕನ್ನಡಿ ಹಿಡಿಯುತ್ತಾ ಹೋಗುತ್ತದೆ.

ADVERTISEMENT

ದ್ರೌಪದಿ ಮತ್ತು ಲೇಖಕಿ ಕೃಷ್ಣಾ ಪಾತ್ರದಲ್ಲಿ ಸೀತಾ ಕೋಟೆ, ಶಿಖಂಡಿ ಮತ್ತು ಮೋ ಪಾತ್ರದಲ್ಲಿ ಚಂದ್ರಕೀರ್ತಿ ಅಭಿನಯಿಸಲಿದ್ದಾರೆ. ನಾಟಕಕ್ಕೆ ಕಾರ್ತಿಕ್ ಹೆಬ್ಬಾರ್ ಅವರ ನಿರ್ದೇಶನವಿದೆ. ಲಿಂಗತ್ವ ಅಲ್ಪಸಂಖ್ಯಾತರು ಮತ್ತು ಹೆಣ್ಣಿನ ಬದುಕಿನ ಹೋರಾಟದ ಸೋಲು– ಗೆಲುವುಗಳನ್ನು ಅವಲೋಕಿಸುವ ನಾಟಕ ಮನುಷ್ಯತ್ವವನ್ನು ಕಾಡುವ ಮೂಲ ಪ್ರಶ್ನೆಗಳಿಗೆ ಕರೆದೊಯ್ಯುತ್ತದೆ. ನಿತ್ಯಜೀವನದಲ್ಲಿ ಹಾಸುಹೊಕ್ಕಿರುವ ಪಾತ್ರಗಳೇ ರಂಗದ ಮೇಲೆ ಅನಾವರಣಗೊಳ್ಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.